ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಪ್ರಹ್ಲಾದ್‌ ಜೋಶಿ, ವಿಶ್ವೇಶ್ವರ ಭಟ್‌ ಮುಂದಾಳತ್ವದಲ್ಲಿ ಭೈರಪ್ಪ ಅಂತ್ಯಕ್ರಿಯೆ; ಚಿತೆಗೆ ಜೊತೆಯಾಗಿ ಅಗ್ನಿಸ್ಪರ್ಶ ಮಾಡಿದ ಮಕ್ಕಳು, ಸಹನಾ ವಿಜಯಕುಮಾರ್‌

SL Bhyrappa: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಮುಂದಾಳತ್ವದಲ್ಲಿ, ಅಂತ್ಯಕ್ರಿಯೆಯ ಎಲ್ಲ ವಿಧಿವಿಧಾನಗಳನ್ನು ಭೈರಪ್ಪನವರ ಮಕ್ಕಳು ನೆರವೇರಿಸಿದರು ಹಾಗೂ ಕಾದಂಬರಿಕಾರ್ತಿ ಸಹನಾ ವಿಜಯಕುಮಾರ್‌ ಜೊತೆಯಾಗಿ ಅಗ್ನಿಸ್ಪರ್ಶ ನೆರವೇರಿಸಿದರು.

ಮೈಸೂರು: ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಕನ್ನಡದ ಹಿರಿಯ ಸಾಹಿತಿ ಡಾ.ಎಸ್‌ಎಲ್‌ ಭೈರಪ್ಪ (SL Bhyrappa) ಅವರ ಅಂತ್ಯಕ್ರಿಯೆ ಯಾವುದೇ ಗೊಂದಲಗಳಿಲ್ಲದೆ ಸಾಂಗವಾಗಿ ನೆರವೇರಿತು. ಭೈರಪ್ಪನವರ ಪುತ್ರರಾದ ಉದಯಶಂಕರ್‌ ಹಾಗೂ ರವಿಶಂಕರ್‌ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ಭೈರಪ್ಪನವರನ್ನು ಮಗಳಂತೆ ಅಕ್ಕರೆಯಿಂದ ನೋಡಿಕೊಂಡ ಕಾದಂಬರಿಕಾರ್ತಿ ಸಹನಾ ವಿಜಯಕುಮಾರ್‌, ಭೈರಪ್ಪನವರ ಮಕ್ಕಳು ಹಾಗೂ ಮಾಜಿ ಸಂಸದ ಪ್ರತಾಪ್‌ಸಿಂಹ ಜೊತೆಯಾಗಿ ಅಗ್ನಿಸ್ಪರ್ಶ ಮಾಡಿದರು.

ಇದಕ್ಕೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ಮುಂದಾಳತ್ವ ವಹಿಸಿ ಸಂಬಂಧಪಟ್ಟ ಎಲ್ಲರ ಜೊತೆ ಮಾತನಾಡಿ ಅಂತ್ಯಕ್ರಿಯೆಯ ರೂಪುರೇಷೆಗಳನ್ನು ಅಂತಿಮಗೊಳಿಸಿದರು. ನಿನ್ನೆ ಮೈಸೂರಿನಲ್ಲಿ ಭೈರಪ್ಪ ಅವರ ಅಂತಿಮ ದರ್ಶನದ ವೇಳೆ ಅವರ ಅಭಿಮಾನಿಯೊಬ್ಬರು ಭೈರಪ್ಪನವರ ವಿಲ್‌ ಅನ್ನು ಪ್ರದರ್ಶಿಸಿದ್ದರಿಂದ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ಫಣೀಶ್‌ ಎಂಬವರು ಭೈರಪ್ಪನವರ ವಿಲ್‌ ಎಂದು ಹೇಳಲಾದ ದಾಖಲೆಯನ್ನು ಪ್ರದರ್ಶಿಸಿದ್ದರು. ಸಹನಾ ವಿಜಯಕುಮಾರ್‌ ಅವರು ಅಂತ್ಯಕ್ರಿಯೆ ನೆರವೇರಿಸಬೇಕು, ತನ್ನ ಗಂಡುಮಕ್ಕಳು ಅದನ್ನು ಮಾಡುವಂತಿಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.

ಈ ವಿಚಾರ ವೈರಲ್‌ ಆದ ಬಳಿಕ ಭೈರಪ್ಪನವರ ಅಂತ್ಯಕ್ರಿಯೆಯ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಇಂದು ಮುಂಜಾನೆ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಮಧ್ಯಸ್ಥಿಕೆಯಲ್ಲಿ ಎಲ್ಲ ಗೊಂದಲ ಬಗೆಹರಿಸಿ ಅಂತ್ಯಕ್ರಿಯೆಯ ಎಲ್ಲ ವಿಧಿವಿಧಾನಗಳನ್ನು ಸಮರ್ಪಕವಾಗಿ ಯೋಜಿಸಿ ನೆರವೇರಿಸಲಾಯಿತು. ಎಸ್‌ಎಲ್‌ ಭೈರಪ್ಪ ಅವರು ತಮ್ಮ ಬದುಕಿನ ಕೊನೆಯ ಎಂಟು ತಿಂಗಳುಗಳನ್ನು ವಿಶ್ವೇಶ್ವರ ಭಟ್‌ ಅವರ ಮನೆಯಲ್ಲಿ ಕಳೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಹನಾ ವಿಜಯಕುಮಾರ್‌ ಅವರು ಕೂಡ ಈ ಸಂದರ್ಭದಲ್ಲಿ ಭೈರಪ್ಪನವರ ಜೊತೆಗಿದ್ದು ಅವರನ್ನು ಅಕ್ಕರೆಯಿಂದ ನೋಡಿಕೊಂಡಿದ್ದರು.

ಅಕ್ಕರೆಯ ಸಾಹಿತಿಗೆ ಅಂತಿಮ ವಿದಾಯ

ಕನ್ನಡಿಗರು ತಮ್ಮ ಅಕ್ಕರೆಯ ಸಾಹಿತಿಗೆ ಇಂದು ಭಾರವಾದ ಹೃದಯದಿಂದ ವಿದಾಯ ಹೇಳಿದ್ದಾರೆ. ಭೈರಪ್ಪನವರ ಪಾರ್ಥಿವ ಶರೀರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇಂದು ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಸಂಸ್ಕಾರದ ವೇಳೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯ ಸಚಿವ ಎಚ್‌ಸಿ ಮಹದೇವಪ್ಪ, ಮಾಜಿ ಸಂಸದ ಪ್ರತಾಪ್‌ ಸಿಂಹ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಎಡಿಸಿ ಶಿವರಾಜು ಮತ್ತಿತರರು ಉಪಸ್ಥಿತರಿದ್ದರು.

ಭೈರಪ್ಪ ಅವರಿಗೆ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಪೊಲೀಸರಿಂದ ಗೌರವ ಸಲ್ಲಿಕೆ ನೆರವೇರಿತು. ಈ ಸಂದರ್ಭದಲ್ಲಿ ರಾಷ್ಟ್ರಗೀತೆ ಮೊಳಗಿತು. ಸರ್ಕಾರಿ ಗೌರವದ ಬಳಿಕ ತ್ರಿವರ್ಣ ಧ್ವಜ ಹಸ್ತಾಂತರ ಮಾಡಲಾಯಿತು. ಭೈರಪ್ಪನವರ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌ಸಿ ಮಹದೇವಪ್ಪ ತ್ರಿವರ್ಣ ಧ್ವಜ ಹಸ್ತಾಂತರ ಮಾಡಿದರು. ಮೈಸೂರು ಹಾಗೂ ಬೆಂಗಳೂರಿನ ಜನತೆ, ಭೈರಪ್ಪನವರ ಸಾಹಿತ್ಯಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ಈ ಅಂತ್ಯಕ್ರಿಯೆಗೆ ಸಾಕ್ಷಿಯಾದರು.

ಬುಧವಾರ ಬೆಂಗಳೂರಿನಲ್ಲಿ ಅಗಲಿದ ಡಾ.ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಗುರುವಾರ ಬೆಂಗಳೂರಿನಲ್ಲಿ ನಡೆದಿತ್ತು. ಸಿಎಂ, ಡಿಸಿಎಂ ಸೇರಿದಂತೆ ಗಣ್ಯರು ಆಗಮಿಸಿ ಗೌರವ ಸಲ್ಲಿಸಿದ್ದರು. ಗುರುವಾರ ಶರೀರವನ್ನು ಮೈಸೂರಿಗೆ ತಂದು ನಗರದ ಕಲಾ ಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.

ಇದನ್ನೂ ಓದಿ: SL Bhyrappa: ಮೇರುಸಾಹಿತಿ ಎಸ್‌ಎಲ್‌ ಭೈರಪ್ಪ ಪಂಚಭೂತಗಳಲ್ಲಿ ಲೀನ

ಹರೀಶ್‌ ಕೇರ

View all posts by this author