ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಮೇರುಸಾಹಿತಿ ಎಸ್‌ಎಲ್‌ ಭೈರಪ್ಪ ಪಂಚಭೂತಗಳಲ್ಲಿ ಲೀನ

SL Bhyrappa: ಭೈರಪ್ಪನವರ ಪುತ್ರರಾದ ಉದಯಶಂಕರ್‌ ಹಾಗೂ ರವಿಶಂಕರ್‌ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿ ಅಗ್ನಿಸ್ಪರ್ಶ ಮಾಡಿದರು. ಭೈರಪ್ಪನವರನ್ನು ಮಗಳಂತೆ ಅಕ್ಕರೆಯಿಂದ ನೋಡಿಕೊಂಡ ಕಾದಂಬರಿಕಾರ್ತಿ ಸಹನಾ ವಿಜಯಕುಮಾರ್‌, ಪ್ರತಾಪ್‌ಸಿಂಹ ಕೂಡ ಅಗ್ನಿಸ್ಪರ್ಶ ಮಾಡಿದರು. ಭೈರಪ್ಪ ಅವರ ಕೊನೆಯ ದಿನಗಳಲ್ಲಿ ಅವರೊಂದಿಗೆ ಇದ್ದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಈ ಸಂದರ್ಭದಲ್ಲಿ ಜೊತೆಗಿದ್ದರು.

ಮೇರುಸಾಹಿತಿ ಎಸ್‌ಎಲ್‌ ಭೈರಪ್ಪ ಪಂಚಭೂತಗಳಲ್ಲಿ ಲೀನ

-

ಹರೀಶ್‌ ಕೇರ ಹರೀಶ್‌ ಕೇರ Sep 26, 2025 1:03 PM

ಮೈಸೂರು: ಮೊನ್ನೆ ದಿವಂಗತರಾದ ಹಿರಿಯ ಸಾಹಿತಿ, ಕನ್ನಡದ ಹೆಮ್ಮೆಯ ಕಾದಂಬರಿಕಾರ, ಕನ್ನಡದ ಓದುಗರ ಭಾವತಂತುಗಳನ್ನು ಮೀಟಿದ ಸರಸ್ವತಿಯ ವರಪುತ್ರ ಡಾ.ಎಸ್.ಎಲ್ ಭೈರಪ್ಪ (SL Bhyrappa) ಅವರಿಗೆ ಇಂದು ಕನ್ನಡಿಗರು ಭಾರವಾದ ಹೃದಯದಿಂದ ವಿದಾಯ ಹೇಳಿದ್ದಾರೆ. ಅವರ ಪಾರ್ಥಿವ ಶರೀರ ಮೈಸೂರಿನ (Mysuru) ಚಾಮುಂಡಿ ಬೆಟ್ಟದ (Chamundi hill) ತಪ್ಪಲಿನ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಸಂಸ್ಕಾರದ ವೇಳೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯ ಸಚಿವ ಎಚ್‌ಸಿ ಮಹದೇವಪ್ಪ. ಮಾಜಿ ಸಂಸದ ಪ್ರತಾಪ್‌ ಸಿಂಹ ಮತ್ತಿತರರು ಉಪಸ್ಥಿತರಿದ್ದರು.

ಅಗಲಿದ ಕಾದಂಬರಿಕಾರ ಭೈರಪ್ಪ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಕೆ ಮಾಡಿದರು. ಹಲವು ಗಣ್ಯರು ಗೌರವ ಸಮರ್ಪಣೆ ಮಾಡಿದರು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಪೊಲೀಸರಿಂದ ಗೌರವ ಸಲ್ಲಿಕೆ ನೆರವೇರಿತು. ಈ ಸಂದರ್ಭದಲ್ಲಿ ರಾಷ್ಟ್ರಗೀತೆ ಮೊಳಗಿತು. ಸರ್ಕಾರಿ ಗೌರವದ ಬಳಿಕ ತ್ರಿವರ್ಣ ಧ್ವಜ ಹಸ್ತಾಂತರ ಮಾಡಲಾಯಿತು. ಭೈರಪ್ಪನವರ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌ಸಿ ಮಹದೇವಪ್ಪ ತ್ರಿವರ್ಣ ಧ್ವಜ ಹಸ್ತಾಂತರ ಮಾಡಿದರು.

ಭೈರಪ್ಪನವರ ಪುತ್ರರಾದ ಉದಯಶಂಕರ್‌ ಹಾಗೂ ರವಿಶಂಕರ್‌ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿ ಅಗ್ನಿಸ್ಪರ್ಶ ಮಾಡಿದರು. ಭೈರಪ್ಪನವರನ್ನು ಮಗಳಂತೆ ಅಕ್ಕರೆಯಿಂದ ನೋಡಿಕೊಂಡ ಕಾದಂಬರಿಕಾರ್ತಿ ಸಹನಾ ವಿಜಯಕುಮಾರ್‌, ಪ್ರತಾಪ್‌ಸಿಂಹ ಕೂಡ ಅಗ್ನಿಸ್ಪರ್ಶ ಮಾಡಿದರು. ಭೈರಪ್ಪ ಅವರ ಕೊನೆಯ ದಿನಗಳಲ್ಲಿ ಅವರೊಂದಿಗೆ ಇದ್ದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಈ ಸಂದರ್ಭದಲ್ಲಿ ಜೊತೆಗಿದ್ದರು. ಮೈಸೂರು ಹಾಗೂ ಬೆಂಗಳೂರಿನ ಜನತೆ, ಭೈರಪ್ಪನವರ ಸಾಹಿತ್ಯಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ಈ ಅಂತ್ಯಕ್ರಿಯೆಗೆ ಸಾಕ್ಷಿಯಾದರು. ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಎಡಿಸಿ ಶಿವರಾಜು ಸೇರಿದಂತೆ ಅಧಿಕಾರಿ ವರ್ಗ ಭಾಗಿಯಾಗಿತ್ತು.

ಬುಧವಾರ ಬೆಂಗಳೂರಿನಲ್ಲಿ ಅಗಲಿದ ಡಾ.ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಗುರುವಾರ ಬೆಂಗಳೂರಿನಲ್ಲಿ ನಡೆದಿತ್ತು. ಸಿಎಂ, ಡಿಸಿಎಂ ಸೇರಿದಂತೆ ಗಣ್ಯರು ಆಗಮಿಸಿ ಗೌರವ ಸಲ್ಲಿಸಿದ್ದರು. ಗುರುವಾರ ಶರೀರವನ್ನು ಮೈಸೂರಿಗೆ ತಂದು ನಗರದ ಕಲಾ ಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.

ಇದನ್ನೂ ಓದಿ: SL Bhyrappa: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಗಣ್ಯರಿಂದ ಎಸ್‌.ಎಲ್‌. ಭೈರಪ್ಪ ಅಂತಿಮ ದರ್ಶನ