ಶಿರಸಿ: ನಗರದ ಸಿ.ಪಿ.ಬಜಾರ್‌ನಲ್ಲಿರುವ ಪ್ರತಿಷ್ಠಿತ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತವು 2024-25ನೇ ಸಾಲಿನಲ್ಲಿ ₹51.61 ಲಕ್ಷ ನಿವ್ವಳ ಲಾಭ ಗಳಿಸಿ, ತನ್ನ 24 ವರ್ಷಗಳ ಯಶಸ್ವಿ ಪ್ರಯಾಣವನ್ನು ಪೂರೈಸಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಮೊಗೇರ್ ಹೇಳಿದರು.
ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರಿ ಧುರೀಣರಾದ ದಿವಂಗತ ವಸಂತ ಶೆಟ್ಟಿ ಅವರಿಂದ ಸ್ಥಾಪಿತವಾದ ಈ ಸಂಸ್ಥೆ, ಇದೀಗ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಕಾಲಿಡುತ್ತಿದೆ ಎಂದರು.
ಇದನ್ನೂ ಓದಿ: Sirsi news: ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆ
ರಾಷ್ಟ್ರೀಯ ಬ್ಯಾಂಕುಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿ, ಸಿಬ್ಬಂದಿಯ ಅವಿರತ ಪರಿಶ್ರಮದಿಂದ ಸಂಘವು ಈ ಲಾಭ ಗಳಿಸಿದೆ. ಸಂಘವು ತನ್ನ ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿದರ ದಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಶೇ. 9ರ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ, ಶೇ. 11ರ ಬಡ್ಡಿದರ ದಲ್ಲಿ ವಾಹನ ಸಾಲ ಹಾಗೂ ಹೊಸದಾಗಿ ಶೇ. 12ರ ಬಡ್ಡಿದರದಲ್ಲಿ ಅಡಮಾನ ಸಾಲಗಳನ್ನು ನೀಡಲಾಗುತ್ತಿದೆ. ಮಾರ್ಚ್ 31, 2025ರ ಅಂತ್ಯಕ್ಕೆ ಸಂಘವು 4,492 ಸದಸ್ಯರನ್ನು ಹೊಂದಿದ್ದು, ವಿವಿಧ ಠೇವಣಿಗಳಿಂದ ಒಟ್ಟು ₹12.08 ಕೋಟಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಿದೆ ಎಂದರು.
ಆಗಸ್ಟ್ 2, 2001ರಲ್ಲಿ ನೋಂದಣಿಯಾಗಿ, ಅದೇ ತಿಂಗಳ 30ರಂದು ವ್ಯವಹಾರ ಪ್ರಾರಂಭಿಸಿದ ಸಂಘವು ತನ್ನ ಆರಂಭದಿಂದಲೂ ಲಾಭದಲ್ಲಿ ಮುಂದುವರಿದು ಬಂದಿದೆ. ಇದಕ್ಕೆ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲೆ ಇಟ್ಟಿರುವ ನಂಬಿಕೆ ಮತ್ತು ನೀಡಿದ ಸಹಕಾರವೇ ಕಾರಣ ಎಂದರು. ಕಾಯ್ದಿರಿಸಿದ ನಿಧಿಗಳೂ ಸೇರಿ ಸಂಘದ ಆಂತರಿಕ ನಿಧಿಗಳ ಮೊತ್ತ ₹12.76 ಕೋಟಿಗಿಂತಲೂ ಹೆಚ್ಚಿದೆ. ಈ ಮೂಲಕ ಸಂಘವು ತನ್ನ ಆರ್ಥಿಕ ಸದೃಢತೆಯನ್ನು ಕಾಯ್ದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ ಶೆಟ್ಟಿ, ಗೌರವ ಸಲಹೆಗಾರ ಪ್ರಕಾಶ ಮದ್ಗುಣಿ, ಕೇಶವ ಶೆಟ್ಟಿ ಮತ್ತಿತರರು ಇದ್ದರು.