ಹೊಸಪೇಟೆ: ಹಂಪಿ ಉತ್ಸವದ (Hampi Utsav 2025) ಅಂಗವಾಗಿ ಬುಧವಾರ ಸಂಜೆ ವಿರೂಪಾಕ್ಷೇಶ್ವರ ದೇವಸ್ಥಾನ ಹಿಂಭಾಗದ ನದಿ ತಟದಲ್ಲಿ ತುಂಗಭದ್ರೆಗೆ ತುಂಗಾರತಿ ಮಾಡುವ ಮೂಲಕ ನಾಡಿನ ಸುಭೀಕ್ಷೆಗೆ ಪ್ರಾರ್ಥಿಸಲಾಯಿತು. ತಾಯಿ ಭುವನೇಶ್ವರಿ ದೇವಿಗೆ ಕುಂಕುಮಾರ್ಚನೆ ಹಾಗೂ ಅಭಿಷೇಕ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿ ಗಣ್ಯಮಾನ್ಯರು ತುಂಗಾಭದ್ರ ನದಿಗೆ ತುಂಗಾರತಿ ನೆರವೇರಿಸಿ ಹೂವು, ಕ್ಷೀರ, ತುಪ್ಪ, ಮರದ ಬಾಗಿನ ಸಮರ್ಪಿಸಿದರು. ಗಂಗೆ ಸೇರಿದಂತೆ ನಾಡಿನ ಪವಿತ್ರ ನದಿಗಳು, ವರುಣ ದೇವನನ್ನು ಸ್ಮರಿಸಿ ತುಂಗಾರತಿ ಕೈಗೊಳ್ಳಲಾಯಿತು. ಈ ಬಾರಿ ನಾಡಿನಾದ್ಯಂತ ಉತ್ತಮ ಮಳೆಯಾಗಿ, ಎಲ್ಲ ನದಿಗಳು ತುಂಬಿ ಹರಿಯಲಿ, ಜಲಾಶಯಗಳು ಭರ್ತಿಯಾಗಿ, ರೈತರು ಉತ್ತಮ ಬೆಳೆ ಬೆಳೆದು ನಾಡು ಸುಭೀಕ್ಷವಾಗಲಿ ಎಂದು ಹಂಪಿ ವಿರೂಪಾಕ್ಷ ಸೇರಿದಂತೆ ಸಮಸ್ತ ದೇವತೆಗಳಲ್ಲಿ ಪ್ರಾರ್ಥಿಸಲಾಯಿತು.

ವಿರೂಪಾಕ್ಷ ವಿದ್ಯಾರಣ್ಯ ಗುರುಗಳು, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥ ಹಾಗೂ ಮೋಹನ್ ಜೋಶಿ ನೇತೃತ್ವದ ತಂಡ ತುಂಗರಾತಿ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು. ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಧರ್ಮಪತ್ನಿಯರ ಸಮೇತವಾಗಿ ತುಂಗಾರತಿ ಸಂಕಲ್ಪ ಕೈಗೊಂಡರು.

ಜಿ.ಪಂ.ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು.ಬಿ.ಎಲ್ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಞ, ಸಹಾಯಕ ಆಯುಕ್ತ ವಿವೇಕ್, ತಹಶೀಲ್ದಾರ್ ಶೃತಿ ಮಾಳಪ್ಪ ಗೌಡ, ಡಿಎಚ್‌ಒ ಶಂಕರ್ ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗರಂಗಣ್ಣನವರ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ತುಂಗಾರತಿ ಅಂಗವಾಗಿ ಬಾನಂಗಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಹೊಸಪೇಟೆ ನಗರದ ಗಗನ ಮತ್ತು ಅವರ ತಂಡ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಗಳನ್ನು ಪ್ರಸ್ತುತ ಪಡಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದು ಸುಳ್ಳು: ಡಿಕೆಶಿ
ಹಂಪಿ ಉತ್ಸವ-2025 ಅಂತಿಮ ಸಿದ್ಧತೆ ಪೂರ್ಣ: ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಬಿಂಬಿಸುವ ಪ್ರಧಾನ ವೇದಿಕೆ

ಹೊಸಪೇಟೆ: ಹಂಪಿ ಉತ್ಸವ-2025 (Hampi Utsav 2025) ಆಚರಣೆಯ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದ್ದು, ಗಾಯತ್ರಿ ಪೀಠದ ಮೈದಾನದಲ್ಲಿ ನಿರ್ಮಿಸಲಾಗಿರುವ ಪ್ರಧಾನ ವೇದಿಕೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುತ್ತಿದೆ. ಹಂಪಿ ಪ್ರಮುಖ ಸ್ಮಾರಕಗಳ ಸಮ್ಮಿಶ್ರಣದಲ್ಲಿ ವೇದಿಕೆ ರಚನೆಯಲ್ಲಿ ಮೂಡಿಬಂದಿದೆ. ಈ ಬಾರಿಯ ಪ್ರಧಾನ ವೇದಿಕೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಮುತ್ಸದ್ದಿ ರಾಜಕಾರಣಿ ಎಂ.ಪಿ. ಪ್ರಕಾಶ್ ಅವರ ಹೆಸರು ಇಡಲಾಗಿದೆ. 120*80 ಅಡಿ ವಿಸ್ತೀರ್ಣದಲ್ಲಿ ವೇದಿಕೆ ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯಲ್ಲಿ ಫೆ.28 ರಂದು ಶುಕ್ರವಾರ ಸಂಜೆ 6 ಗಂಟೆಗೆ ಉದ್ಘಾಟನೆ ನೆರವೇರಲಿದೆ.
ಮಾರ್ಚ್ 2 ವರೆಗೆ ನಡೆಯುವ ಹಂಪಿ ಉತ್ಸವದಲ್ಲಿ ನಾಡಿನ ಹೆಸರಾಂತ ಚಲನಚಿತ್ರ ನಟ ನಟಿಯರು ಭಾಗವಹಿಸುತ್ತಿದ್ದಾರೆ. ಜತೆಗೆ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರು ರಸಮಂಜರಿ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ವೇದಿಕೆ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಸುಮಾರು 70 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಎಡಭಾಗದಲ್ಲಿ ಜರ್ಮನ್ ಟೆಂಟ್ ನಿಂದ ನಿರ್ಮಿತವಾದ ಅತಿಗಣ್ಯರ ವಿಶ್ರಾಂತಿ ಸ್ಥಳ ಹಾಗೂ ಕಲಾವಿದರ ಪ್ರಸಾದನ ಕೊಠಡಿಗಳನ್ನು ನಿರ್ಮಿಸಲಾಗಿದೆ. ವೇದಿಕೆ ಬಲಭಾಗದಲ್ಲಿ ಮಾಧ್ಯಮ ಕೇಂದ್ರ ಕಾರ್ಯನಿರ್ವಹಿಸಲಿದೆ.
ಹಂಪಿ ಉತ್ಸವದಲ್ಲಿ ಧ್ವನಿ ಬೆಳಕು ವೇದಿಕೆ ಸೇರಿ ಒಟ್ಟು ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎದುರು ಬಸವಣ್ಣ ವೇದಿಕೆ ರಾಯಭಾರಿಯನ್ನಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೆ.ಎಂ.ವೀರಸಂಗಯ್ಯ, ಮಹಾನವಮಿ ದಿಬ್ಬ ವೇದಿಕೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರಿಗನೂರು ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Hampi Utsav 2025: ಹಂಪಿ ಉತ್ಸವ ನಾಡ ಹಬ್ಬವಿದ್ದಂತೆ: ಜಮೀರ್ ಅಹ್ಮದ್ ಖಾನ್
ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಶಾಸಕ ಎಚ್.ಆರ್. ಗವಿಯಪ್ಪ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಭಾಷಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಮಾಜಿ ಶಾಸಕ ಸಿರಾಜ್ ಶೇಖ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಅವರು ಪ್ರಧಾನ ವೇದಿಕೆ ಸೇರಿದಂತೆ ಇತರೆ ವೇದಿಕೆಗಳ ಸಿದ್ದತೆಯನ್ನು ವೀಕ್ಷಿಸಿದರು.