Hampi Utsav 2025: ಹಂಪಿ ಉತ್ಸವ ನಾಡ ಹಬ್ಬವಿದ್ದಂತೆ: ಜಮೀರ್ ಅಹ್ಮದ್ ಖಾನ್
ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಲಾ 7 ಕೋಟಿ ರೂ. ಅನ್ನು ಈಗಾಗಲೇ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ಕಳೆದ ಬಾರಿ ಉತ್ಸವಕ್ಕೆ 14 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ 15 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.


ಹೊಸಪೇಟೆ: ಹಂಪಿ ಉತ್ಸವ (Hampi Utsav 2025) ನಾಡ ಹಬ್ಬವಿದ್ದಂತೆ, ಅಧಿಕಾರಿಗಳು ಮನಃಪೂರ್ವಕವಾಗಿ ತೊಡಗಿಕೊಂಡು ಕೆಲಸ ನಿರ್ವಹಿಸಬೇಕು. ಈ ಬಾರಿ ಬೇಸಗೆ ಮುಂಚಿತವಾಗಿ ಆರಂಭವಾಗಿದೆ. ಪ್ರಧಾನ ವೇದಿಕೆ ಸೇರಿದಂತೆ ಎಲ್ಲ ವೇದಿಕೆಗಳ ಬಳಿ ಧೂಳು ಬಾರದಂತೆ ಹೆಚ್ಚಿಗೆ ನೀರು ಹಾಯಿಸಬೇಕು. ಜನರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಂಪಿ ಉತ್ಸವ-2025 ಸಿದ್ದತೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಖಾಸಗಿ ವ್ಯಕ್ತಿಗಳ ಸಹಯೋಗದಲ್ಲಿ ಅರವಟಿಗೆ, ಮಜ್ಜಿಗೆ ನೀಡಲು ವ್ಯವಸ್ಥೆ ಮಾಡಿ. ಕಳೆದ ಬಾರಿಯಂತೆ ಹಂಪಿ ಉತ್ಸವ ಜನೋತ್ಸವವಾಗಿ ಯಶಸ್ವಿಯಾಗಬೇಕು. ಈ ಬಾರಿ ಮಹಾನವಮಿ ದಿಬ್ಬ ಬಳಿ ಹೊಸದಾಗಿ ವೇದಿಕೆ ನಿರ್ಮಿಸಿ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಕಮಲಾಪುರ ಕೆರೆಯಲ್ಲಿ ಬೋಟಿಂಗ್ ಹಾಗೂ ಕುಸ್ತಿ ನಡೆಯುವ ಸ್ಥಳದಲ್ಲಿ ಬೈಕ್ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
15 ಕೋಟಿ ರೂ. ಅನುದಾನಕ್ಕೆ ಬೇಡಿಕೆ
ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಲಾ 7 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ಕಳೆದ ಬಾರಿ ಉತ್ಸವಕ್ಕೆ 14 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ 15 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ನೀಡಲಾಗಿದೆ. ಪ್ರಧಾನ ವೇದಿಕೆಗೆ ಹಂಪಿ ಉತ್ಸವದ ರುವಾರಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಹೆಸರು ಇಡಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ವರ್ಷವೂ ನವೆಂಬರ್‌ನಲ್ಲಿ ಹಂಪಿ ಉತ್ಸವ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಉತ್ಸವಕ್ಕೆ ಎಲ್ಲ ಪಕ್ಷದ ನಾಯಕರನ್ನು ಸಹ ಆಹ್ವಾನಿಸಲಾಗಿದೆ. ಉತ್ಸವದಲ್ಲಿ ಯಾವುದೇ ರಾಜಕೀಯವನ್ನು ಬೆರಸುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಹಂಪಿ ಉತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ನಡೆಯಲಿದೆ. ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಜನವರಿಯಿಂದಲೇ ಹಂಪಿ ಉತ್ಸವ ಸಿದ್ದತೆ ಕಾರ್ಯ ಆರಂಭಿಸಲಾಗಿದೆ. ಉತ್ಸವದ ಯಶಸ್ವಿಗಾಗಿ ಸಮಿತಿಗಳನ್ನು ರಚಿಸಲಾಗಿದೆ. ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಂಪಿ ಉತ್ಸವ ಉದ್ಘಾಟನೆ ಸಮಾರಂಭಕ್ಕೆ ಸಾರ್ವಜನಿಕರನ್ನು ಕರೆ ತರಲು 300 ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 40 ಬಸ್‌ಗಳು ಹಂಪಿ ಉತ್ಸವಕ್ಕಾಗಿಯೇ ಕಾರ್ಯಚರಣೆ ನಡೆಸಲಿವೆ. 25 ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. 10 ತಾತ್ಕಾಲಿಕ ಆಸ್ಪತ್ರೆ, 9 ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ದೂಳು ಬಾರದ ಹಾಗೆ 5 ಲಾರಿಗಳ ಮೂಲಕ ನೀರು ಹಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾಹಿತಿ ನೀಡಿದರು.
ಹಂಪಿ ಉತ್ಸವದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಸಿಸಿಟಿವಿ ಅಳವಡಿಸಲಾಗಿದೆ. ಉತ್ಸವದ ಸ್ಥಳದಲ್ಲಿ ಸಹಾಯವಾಣಿ ಸಾರ್ವಜನಿಕ ಉದ್ಘೋಷ ಕೇಂದ್ರಗಳನ್ನು ತೆರೆಯಲಾಗುವುದು. ಉತ್ಸವಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಪಾಸುಗಳನ್ನು ನೀಡಲಾಗುವುದು. ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಂಪಿಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. 100 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Hampi Utsav 2025: ಹಂಪಿ ಉತ್ಸವಕ್ಕೆ ದಿನಗಣನೆ; ಫೆ.28 ರಂದು ಸಿಎಂ ಸಿದ್ದರಾಮಯ್ಯ ಚಾಲನೆ
ಜಿ.ಪಂ. ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಞ, ಸಹಾಯಕ ಆಯುಕ್ತ ವಿವೇಕ್, ತಹಸೀಲ್ದಾರ್ ಶೃತಿ ಮಾಳಪ್ಪ ಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.