Karnataka Budget 2025: ರಾಜ್ಯ ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ಸಿಕ್ಕಿದ್ದೇನು?
Karnataka Budget 2025: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಒಳಾಡಳಿತ ಇಲಾಖೆಗೆ ಸಂಬಂಧಿಸಿ ಸರ್ಕಾರಿ ನೌಕರರಿಗೆ ನೀಡಿರುವ ಕೊಡುಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ.


ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಶುಕ್ರವಾರ 2025-26ನೇ ಸಾಲಿನ ಬಜೆಟ್ (Karnataka Budget 2025) ಮಂಡನೆ ಮಾಡಿದ್ದು, ವಿವಿಧ ವಲಯಗಳಿಗೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಒಳಾಡಳಿತ ಇಲಾಖೆಗೆ ಸಂಬಂಧಿಸಿ ಸರ್ಕಾರಿ ನೌಕರರಿಗೆ ನೀಡಿರುವ ಕೊಡುಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
- ನಮ್ಮ ಸರ್ಕಾರವು ಆಯೋಜಿಸಿದ ರಾಜ್ಯಮಟ್ಟದ ಎರಡು ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸ್ವೀಕರಿಸಿದ 2,43,676 ಅಹವಾಲುಗಳಲ್ಲಿ ಶೇ.97 ರಷ್ಟನ್ನು ಪರಿಹರಿಸಲಾಗಿದೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು AI ಚಾಲಿತ ತಂತ್ರಜ್ಞಾನಗಳಿಂದ ನವೀಕರಿಸಿ iPGRS-2.0 ಮೂಲಕ ಕರ್ನಾಟಕವನ್ನು ನಾಗರಿಕ ಕೇಂದ್ರಿತ ಡಿಜಿಟಲ್ ಆಡಳಿತದಲ್ಲಿ ಮುಂಚೂಣಿಯಲ್ಲಿ ಇರಿಸಲಾಗುವುದು.
- ನಿವೃತ್ತ ಅಧಿಕಾರಿ ನೌಕರರ ವಿಶ್ರಾಂತಿ ವೇತನದ ಮಂಜೂರಾತಿ ಮತ್ತು ಬಟವಾಡೆ ವ್ಯವಸ್ಥೆಯನ್ನು ಖಜಾನೆ-2 ರ ಅಧೀನದಲ್ಲಿ ಸರಳೀಕರಿಸಲಾಗುವುದು. 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಕೆಲವು ನಿರ್ದಿಷ್ಟ ಭತ್ಯೆಗಳನ್ನು ಪರಿಷ್ಕರಿಸಿ ದಿನಾಂಕ: 01.08.2024 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗಿದೆ. ಇದಕ್ಕಾಗಿ ರಾಜ್ಯವು ವಾರ್ಷಿಕ 19,401 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಭರಿಸುತ್ತಿದೆ.
- ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (KSRSAC) ಕರ್ನಾಟಕ – ಜಿಐಎಸ್ (ಕೆ-ಜಿಐಎಸ್) ಪೋರ್ಟಲ್‌ನಲ್ಲಿ ಇಲಾಖೆಗಳ ಆಸ್ತಿಗಳ ಮಾಹಿತಿ ಲಭ್ಯವಿದ್ದು, 29 ಸಾವಿರಕ್ಕೂ ಹೆಚ್ಚು ಕಂದಾಯ ಗ್ರಾಮಗಳ ಹಿಸ್ಸಾ ನಕ್ಷೆಗಳನ್ನು ಡಿಜಿಟಲೀಕರಿಸಲಾಗಿದೆ. ಈ ಪೋರ್ಟಲ್‌ನ್ನು ಆಧುನಿಕ ತಂತ್ರಜ್ಞಾನಗಳಾದ AI/ML ಮತ್ತು ಇತರ ಪರಿಕರಗಳನ್ನು ಬಳಸಿ 2025-26 ನೇ ಸಾಲಿನಿಂದ ಹಂತ ಹಂತವಾಗಿ 150 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.
- ಕೃತಕ ಬುದ್ಧಿಮತ್ತೆ (AI) ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆಯಂತಹ (GIS) ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಲ್ಲಾ ಇಲಾಖೆಗಳಲ್ಲಿ ಸುಧಾರಿತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿನ (SDC) ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ನವೀಕರಿಸಲು ಮತ್ತು ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ನೀಡಲಾಗುವುದು.
ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಪ್ರಮುಖವಾಗಿ -
i)DBT ವೇದಿಕೆಯ ಮೂಲಕ ಇಲ್ಲಿಯವರೆಗೆ ಸುಮಾರು 50,000 ಕೋಟಿ ರೂ. ವಿತರಿಸಲಾಗಿದೆ. ಮುಂದಿನ ವರ್ಷದಲ್ಲಿ ಸರ್ಕಾರದ ಎಲ್ಲಾ ನಗದು ಮತ್ತು ನಗದುರಹಿತ ಪ್ರಯೋಜನದ ಯೋಜನೆಗಳನ್ನು DBT ವೇದಿಕೆಗೆ ತರಲು ಸೂಕ್ತ ಕ್ರಮವಹಿಸಲಾಗುವುದು.
ii)KSWAN ಯೋಜನೆಯನ್ನು ರಾಜ್ಯದಾದ್ಯಂತ ಹೆಚ್ಚುವರಿ 10,000 ಕಛೇರಿಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.
iii)ಕೃತಕ ಬುದ್ಧಿಮತ್ತೆ (AI) ಚಾಲಿತ ಆಡಳಿತವನ್ನು ಬಲಪಡಿಸಲು ಕರ್ನಾಟಕ AI ಕೋಶವನ್ನು ಸ್ಥಾಪಿಸಲಾಗಿದೆ. ಕಂಪ್ಯೂಟರ್ ವಿಷನ್, NLP, LLM ಮತ್ತು ಇತರ AI ತಂತ್ರಜ್ಞಾನಗಳನ್ನು ಬಳಸಿಕೊಂಡು, AI-ಆಧಾರಿತ ಆಡಳಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ರಾಜ್ಯದ ಬಹುತೇಕ ಎಲ್ಲಾ ಕಛೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ತನ್ನದೇ ಆದ ಇ-ಆಫೀಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗುವುದು.
ಒಳಾಡಳಿತ
ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದಕ್ಕಾಗಿ ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
- ಸಮಾಜದಲ್ಲಿ ಗಲಭೆ ಉಂಟು ಮಾಡುವವರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
- ಬೆಂಗಳೂರು ಸೇಫ್ ಸಿಟಿ ಯೋಜನೆಯನ್ನು 667 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಯೋಜನೆಯ ಭಾಗವಾಗಿ ಬೆಂಗಳೂರು ನಗರದಾದ್ಯಂತ ಒಟ್ಟು 7,500 ಕ್ಯಾಮರಾಗಳನ್ನು ಅಳವಡಿಸಿದ್ದು, 10 ಡ್ರೋನ್ ಗಳನ್ನು (Drone) ಮತ್ತು 560 ಬಾಡಿ ವೋರ್ನ್ (Body Worn) ಕ್ಯಾಮರಾಗಳನ್ನು ಒದಗಿಸಲಾಗಿರುತ್ತದೆ.
- ಸಾರ್ವಜನಿಕವಾಗಿ ಮಹಿಳೆಯರಿಗೆ ಭದ್ರತೆಯ ವಿಶ್ವಾಸವನ್ನು ಮೂಡಿಸುವ ಜೊತೆಗೆ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಕೂಡಲೇ ಪೊಲೀಸ್ ನೆರವನ್ನು ಒದಗಿಸುವ ಉದ್ದೇಶದಿಂದ ನಗರದಾದ್ಯಂತ ಒಟ್ಟು 60 ಮಹಿಳಾ ಔಟ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿರುತ್ತದೆ.
- ಏಳು ಪೊಲೀಸ್ ಠಾಣೆ ಮತ್ತು ಕಚೇರಿ ಕಟ್ಟಡಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು. ಮುಂದುವರಿದು, 12 ಪೋಲೀಸ್ ಠಾಣೆ, ಒಂದು ಉಪವಿಭಾಗ ಕಛೇರಿ, ಎರಡು ವೃತ್ತ ಕಛೇರಿ ಮತ್ತು ಒಂದು ಹೊರಠಾಣೆ ಕಟ್ಟಡಗಳ ನಿರ್ಮಾಣವನ್ನು 30 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು.
- ನ್ಯಾಯ ವಿಜ್ಞಾನ ಪ್ರಯೋಗಾಲಯಗಳಿಂದ ನೀಡಲಾಗುವ ವರದಿಗಳ ಕಾಯುವಿಕೆ ಅವಧಿಯು ಸರಾಸರಿ ಮೂರು ವರ್ಷಗಳಿಂದ ಆರು ತಿಂಗಳಿಗೆ ಇಳಿಕೆಯಾಗಿರುತ್ತದೆ. ಮೊಬೈಲ್ ಆಡಿಯೋ ವಿಡಿಯೋ ವಿಭಾಗವನ್ನು ಸದೃಢಗೊಳಿಸಲಾಗಿರುತ್ತದೆ.
- ಚಲನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಒಳಾಡಳಿತ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳಿಗೆ ಒಟ್ಟು 1,000 ನೂತನ ವಾಹನಗಳನ್ನು ಖರೀದಿಸುವ ಸಲುವಾಗಿ ಪೊಲೀಸ್ ಮೊಬಿಲಿಟಿ ಯೋಜನೆಯಡಿ 2025-26ನೇ ಸಾಲಿಗೆ 50 ಕೋಟಿ ರೂ. ಒದಗಿಸಲಾಗುವುದು.
- ನಮ್ಮ ಸರ್ಕಾರದ ಅವಧಿಯಲ್ಲಿ ಆರು ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿರುತ್ತಾರೆ. ಇದರೊಂದಿಗೆ ರಾಜ್ಯವು ನಕ್ಸಲ್ ಮುಕ್ತವಾಗಿರುವುದರಿಂದ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು. ಶರಣಾಗಿರುವ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳಿಸಲು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು 10 ಕೋಟಿ ರೂ. ವಿಶೇಷ ಪ್ಯಾಕೇಜ್ ರೂಪಿಸಲಾಗುವುದು.
- ನಮ್ಮ ಸರ್ಕಾರವು ಹೆಚ್ಚುತ್ತಿರುವ ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ ಬಳಕೆ ಮತ್ತು ವ್ಯಾಪಾರದ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮಾದಕ ದ್ರವ್ಯ ಮತ್ತು ಸೈಬರ್ ಅಪರಾಧ ವಿಭಾಗವನ್ನು ಬಲಗೊಳಿಸಲು 5 ಕೋಟಿ ರೂ. ಒದಗಿಸಲಾಗುವುದು.
- ನಂದಿ ಬೆಟ್ಟದ ಬಳಿ ಕೂಡುಗುರ್ಕಿ ಮತ್ತು ಕೆಜಿಎಫ್ ಬಳಿ ಎರಡು ಭಾರತೀಯ ಮೀಸಲು ಪೊಲೀಸ್ ಪಡೆಗಳನ್ನು ಸ್ಥಾಪಿಸಲು 80 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು. ಪೊಲೀಸ್ ಗೃಹ-2025 ಯೋಜನೆಯಡಿ ಇದುವರೆಗೆ 2,016 ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, 2,068 ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುತ್ತದೆ.
- 2025-26ನೇ ಸಾಲಿನಲ್ಲಿ 300 ಕೋಟಿ ರೂ. ಮೊತ್ತದ ವಸತಿ ಗೃಹಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.
ಪೊಲೀಸ್ ಇಲಾಖೆಯ ಬಲವರ್ಧನೆಗಾಗಿ ಈ ಕೆಳಕಂಡ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಬೆಂಗಳೂರು ನಗರದ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗಾಗಿ ಈಗಿರುವ ಎಂಟು ಪೊಲೀಸ್ ವಿಭಾಗಗಳನ್ನು 11 ಕ್ಕೆ ಹೆಚ್ಚಿಸಲಾಗುವುದು.
- ರಾಜ್ಯದಲ್ಲಿ ಪ್ರಸ್ತುತ ಐದು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳು (Bomb Detection and Disposal Squad) ಕಾರ್ಯ ನಿರ್ವಹಿಸುತ್ತಿದ್ದು, ಪ್ರಸಕ್ತ ವರ್ಷ ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪಿಸಲಾಗುವುದು.
- ಪೊಲೀಸ್ ಸಿಬ್ಬಂದಿಯು ಸದೃಢ ಮತ್ತು ಆರೋಗ್ಯವಾಗಿರಬೇಕಾದುದು ಅವಶ್ಯವಾಗಿದ್ದು, ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ಪ್ರಸಕ್ತ ನೀಡಲಾಗುತ್ತಿರುವ ಮೊತ್ತವನ್ನು ತಲಾ 1,000 ರೂ. ಗಳಿಂದ 1,500 ರೂ.ಗಳಿಗೆ ಹೆಚ್ಚಿಸಲಾಗುವುದು.
- ಬಂದೋಬಸ್ತ್‌ಗೆ ನಿಯೋಜಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಆಹಾರ ಭತ್ಯೆಯ ದರವನ್ನು 200 ರೂ. ರಿಂದ 300 ರೂ. ಕ್ಕೆ ಹೆಚ್ಚಿಸಲು ಕ್ರಮವಹಿಸಲಾಗುವುದು.
- ಗೃಹರಕ್ಷಕ ಮತ್ತು ಪೌರ ರಕ್ಷಣಾ ಸ್ವಯಂ ಸೇವಕರು ಕರ್ತವ್ಯಕ್ಕೆ ಹಾಗೂ ತರಬೇತಿಗೆ ನಿಯೋಜಿಸಿದ ಸಂದರ್ಭದಲ್ಲಿ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ ಹಾಲಿ ನೀಡಲಾಗುತ್ತಿರುವ 5 ಲಕ್ಷ ರೂ. ಪರಿಹಾರ ಧನವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
- ಕಾರಾಗೃಹ ಇಲಾಖೆಯಡಿಯಲ್ಲಿನ ಮೂಲಸೌಕರ್ಯದ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಒದಗಿಸಲಾಗುವುದು.
- ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ 2024-25ನೇ ಸಾಲಿನಲ್ಲಿ 4,300 ಜನರನ್ನು ಅಗ್ನಿ ಅನಾಹುತದಿಂದ ರಕ್ಷಿಸಿ ಸುಮಾರು 1,501 ಕೋಟಿ ರೂ. ಮೊತ್ತದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ರಕ್ಷಿಸಲಾಗಿದೆ. 2025-26ನೇ ಸಾಲಿನಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
- K-SAFE -2 ಯೋಜನೆಯಡಿ ಉಪಕರಣಗಳ ಖರೀದಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ 50 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
- ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಗಟ್ಟುವ ಸಲುವಾಗಿ 52-54 ಮೀಟರ್ ಎತ್ತರಕ್ಕೆ ತಲುಪುವ ಏರಿಯಲ್ ಲ್ಯಾಡರ್ ಪ್ಲಾಟ್‌ಫಾರಂ ವಾಹನ ಒದಗಿಸಲಾಗುವುದು.
- ಇಲಾಖೆಯ ವಿಸ್ತರಣೆ ಮತ್ತು ಆಧುನೀಕರಣ ಕಾರ್ಯವನ್ನು 15ನೇ ಹಣಕಾಸು ಆಯೋಗದ ಅನುದಾನದಡಿ 330 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು.
- ಮೈಸೂರು ನಗರದ ವ್ಯಾಪ್ತಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹೊಸ ಅಗ್ನಿ ಶಾಮಕ ಠಾಣಾ ಕಟ್ಟಡವನ್ನು ನಿರ್ಮಿಸಲು ಕ್ರಮವಹಿಸಲಾಗುವುದು.
ಈ ಸುದ್ದಿಯನ್ನೂ ಓದಿ | Karnataka Budget 2025: ಸಾಮಾಜಿಕ ಕಳಕಳಿ, ಉದ್ಯಮಸ್ನೇಹಿ ಬಜೆಟ್: ಎಂ.ಬಿ.ಪಾಟೀಲ್
ವೃತ್ತಿ ತೆರಿಗೆ ಹೆಚ್ಚಳ
ವೃತ್ತಿ ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500 ರೂ.ಗಳಿಗೆ ಅನುಗುಣವಾಗಿ, ಸಂಬಳ ಅಥವಾ ಮಜೂರಿ ಪಡೆಯುವ ವ್ಯಕ್ತಿಗಳು ಫೆಬ್ರವರಿ ತಿಂಗಳಲ್ಲಿ ಪಾವತಿಸುತ್ತಿರುವ ವೃತ್ತಿ ತೆರಿಗೆಯನ್ನು ಪ್ರಸ್ತುತ 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.