ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಬು ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು : ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ವಿವಿದ ದಲಿತಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನಗರದ ಬಿಬಿ ರಸ್ತೆಯ ಕನ್ನಡ ಭವನದಿಂದ ಬೃಹತ್ ಮೆರವಣಿಗೆಯಲ್ಲಿ ಸಾಗಿ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿ ಬಾಬು ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿದರು. ಇಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಆರೋಪಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸು.ಧಾ.ವೆಂಕಟೇಶ್, ಕೆ.ಗವಿರಾಯಪ್ಪ, ಸಂದೀಪ್ ಚಕ್ರವರ್ತಿ, ವೆಂಕಟ್, ಮತ್ತಿತರರು ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರ : ಆ.೭ ರಂದು ಜಿಲ್ಲಾಡಳಿತ ಭವನದಲ್ಲಿ ಆತ್ಮಹತ್ಯೆಗೆ ಶರಣಾದ ಹೊರಗುತ್ತಿಗೆ ನೌಕರ ಕಾರು ಚಾಲಕ ಬಾಬು ಸಾವಿನ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿರುವ ಎಲ್ಲಾ ಆರೋಪಿ ಗಳನ್ನು ಬಂಧಿಸಬೇಕು. ನೈತಿಕ ಹೊಣೆ ಹೊತ್ತು ಸಂಸದ ಡಾ ಕೆ.ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ.

ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ವಿವಿದ ದಲಿತಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನಗರದ ಬಿಬಿ ರಸ್ತೆಯ ಕನ್ನಡ ಭವನದಿಂದ ಬೃಹತ್ ಮೆರವಣಿಗೆಯಲ್ಲಿ ಸಾಗಿ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿ ಬಾಬು ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿದರು. ಇಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಆರೋಪಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಇದನ್ನೂ ಓದಿ: MP Dr K Sudhakar: ಜಿಲ್ಲಾ ಉಸ್ತುವಾರಿ ಸಚಿವರು ಹೆಚ್.ಎನ್.ವ್ಯಾಲಿ ನೀರನ್ನು ಬಳಸಲಿ, ಸಂಪುಟ ಸಹೋದ್ಯೋಗಿಗಳಿಗೂ ಕುಡಿಸಿ ತೋರಿಸಲಿ :  ಸಂಸದ ಡಾ.ಕೆ.ಸುಧಾಕರ್ ಸವಾಲು

ದೋ ಎಂದು ಸುರಿಯುವ ಮಳೆಯನ್ನೂ ಲೆಕ್ಕಿಸದ ದಲಿತ ಸಂಘಟನೆಗಳ ಮುಖಂಡರು ಕಾರ್ಯ ಕರ್ತರು ಗುತ್ತಿಗೆ ನೌಕರ ಜಿಲ್ಲಾಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬುಗೇ ನ್ಯಾಯ ಕೊಡಿಸಿ,ಅವರ ಕುಟುಂಬಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯ ಉದ್ದಕ್ಕೂ ಎ-೧ ಆರೋಪಿ ಸಂಸದ ಡಾ ಕೆ ಸುಧಾಕರ್ ಭಾವಚಿತ್ರವುಳ್ಳ ಪ್ಲೆಕ್ಸ್ಗಳನ್ನು ಹಿಡಿದು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು ಕಂಡು ಬಂದಿತು.

ಈ ವೇಳೆ ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಧಾವೆಂಕಟೇಶ್ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ಯುವಕ ಬಾಬು ತನ್ನನ್ನು ಹೊರಗುತ್ತಿಗೆಯಿಂದ ಬಿಡುಗಡೆ ಗೊಳಿಸಿಕೊಂಡು ಹುದ್ದೆಯನ್ನು ಖಾಯಂ ಮಾಡಿಸಿಕೊಳ್ಳಲು ಸಾಲಸೋಲ ಮಾಡಿ ನಾಗೇಶ್ ಮತ್ತು ಮಂಜುನಾಥ್ ಗೆ ೨೫ ಲಕ್ಷ ರೂಪಾಯಿ ಹಣ ನೀಡಿರುವುದಾಗಿ,ಕೆಲಸ ಮಾಡಿಸಿ ಕೊಡದೆ, ಹಣ ವಾಪಸ್ಸು ಕೊಡದೆ ಏನು ಬೇಕಾದರೂ ಮಾಡಿಕೋ ಎಂಬಂತೆ ವರ್ತಿಸುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದುಕೊಂಡು ಸಾವಿಗೀಡಾಗಿದ್ದಾನೆ. ಇದರಲ್ಲಿ ಒಬ್ಬ ರಾಜಕಾರಣಿ, ಪ್ರಭಾವಿ ನಾಯಕ ಸಂಸದ ಸುಧಾಕರ್ ಹೆಸರು ಮುಖ್ಯವಾಗಿ ಕೇಳಿಬಂದಿದೆ. ಅವರ ಮೇಲೆ ಎ೧ ಆರೋಪಿಯಾಗಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ನಡೆದು ಎಂಟು ದಿನಗಳಾದರೂ ಪೊಲೀಸರು ಯಾಕೆ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದರು.

ಮೃತ ಬಾಬು ಅವರ ಸ್ವಂತ ಊರಿನ ಮನೆಗೆ ಭಾನುವಾರ ತೆರಳಿದ್ದ ಶಾಸಕ ಪ್ರದೀಪ್ ಈಶ್ವರ್ ಬಾಬು ಹೆಂಡತಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅವರ ತಾಯಿಗೂ ಕೆಲಸ ಕೊಡಿಸುವುದಾಗಿ ತಿಳಿಸಿ, ಸಮಾಜ ಕಲ್ಯಾಣ ಇಲಾಖೆಯಿಂದ ಸಿಗಬೇಕಾದ ಪರಿಹಾರವನ್ನೂ ಕೊಡಿಸಿದ್ದಾರೆ. ಆದರೆ ಈ ಕೆಲಸವನ್ನು ಬಿಜೆಪಿಯವರಾಗಲಿ, ಡಾ.ಕೆ.ಸುಧಾಕರ್ ಆಗಲಿ ಮಾಡಿಲ್ಲ. ಘಟನೆ ನಡೆದು ವಾರ ವಾದರೂ ಇದುವರೆಗೂ ಒಂದು ಸಾಂತ್ವಾನ ಹೇಳುವ ಸೌಜನ್ಯವನ್ನೂ ತೋರಿಲ್ಲ, ಇದು ಇವರ ದಲಿತಪರ ಕಾಳಜಿಯಾಗಿದೆ ಎಂದು ಗುಡುಗಿದರು.

ಹೊರ ಗುತ್ತಿಗೆಯಾಧಾರಿತ ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಚಾಲಕ ಬಾಬು ಡೆತ್ ನೋಟ್ ನಲ್ಲಿ ಸಾವಿಗೆ ಸಂಸದ ಡಾ ಕೆ.ಸುಧಾಕರ್ ನೇರ ಕಾರಣ ಎಂಬುದಾಗಿ ಉಲ್ಲೇಖಿಸಲಾಗಿದೆ. ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ಹಣವನ್ನು ಪಡೆಯಲಾಗಿದೆ. ಕೊನೆಗೆ ವಂಚಿಸಿ ಕಿರುಕುಳ ನೀಡಿ, ಪ್ರಾಣ ಬೆದರಿಕೆಯನ್ನೊಡ್ಡಲಾಗಿದೆ. ಇದರಿಂದ ಮನನೊಂದು ಜಿಲ್ಲಾಡಳಿತ ಭವನದ ಆವರಣದಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಬಾಬು ಮೃತಪಟ್ಟಿದ್ದಾನೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಸು.ಧಾ.ವೆಂಕಟೇಶ್ ಆರೋಪಿಸಿದರು.

ಮುಖಂಡರಾದ ವಕೀಲ ಸಂದೀಪ್ ಚಕ್ರವರ್ತಿ ಮಾತನಾಡಿ ಇತ್ತೀಚೆಗೆ ದಲಿತ ಯುವಕರು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಮೂರು ತಿಂಗಳ ಹಿಂದೆ ಯಶ್ವಂತ್ ಎಂಬ ದಲಿತ ಯುವಕ ಪೆಟ್ರೋಲ್ ಬಂಕ್‌ ನಲ್ಲಿ ನೇಣಿಗೆ ಶರಣಾದರೆ, ಚಾಮರಾಜ ಪೇಟೆಯಲ್ಲಿ ದಲಿತನೊಬ್ಬ ಕೊಲೆಯಾದರು. ಈಗ ಎಂಟು ದಿನಗಳ ಹಿಂದೆ ಬಾಬು ಎಂಬ ಕಾರು ಚಾಲಕ ನೇಣಿಗೆ ಕೊರಳೊಡ್ಡಿದ್ದಾನೆ.

ದಲಿತ ಯುವಕರು ನಿರುದ್ಯೋಗದ ಸಮಸ್ಯೆಯೆ ಇದಕ್ಕೆಲ್ಲಾ ಕಾರಣವಾಗಿದೆ. ಒತ್ತಡದ ಬದುಕಿನಲ್ಲಿ ಕೆಲಸ ಮಾಡುವುದು ಅಥವಾ ಪ್ರಭಾವಿಗಳ ದೌರ್ಜನ್ಯವೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗುತ್ತಿದೆ. ಇಂತದ್ದೆಲ್ಲಾವನ್ನು ಪೊಲೀಸರು ಸರಿಯಾಗಿ ನಿಭಾಯಿಸುವ ಕೆಲಸ ಮಾಡಬೇಕು. ಬಾಬು ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಮುಖಂಡ ಕೆ.ಗವಿರಾಯಪ್ಪ ಮಾತನಾಡಿ, ಮೃತ ಬಾಬು ಸರ್ಕಾರಿ ಹುದ್ದೆಗೆ ಹಣ ಕೊಟ್ಟು ವಂಚನೆ ಗೊಳಗಾಗಿರುವ ಹಾಗೂ ಸಾವಿಗೆ ಕಾರಣವಾಗಿರುವ ವ್ಯಕ್ತಿಗಳ ಬಗ್ಗೆ ಸ್ಪಷ್ಟವಾಗಿ ಬರೆದಿದ್ದಾರೆ. ಇಷ್ಟಾದರೂ ದಲಿತ ಹುಡುಗನ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವುದು ಖಂಡನೀಯ. ಶೋಷಿತ ವರ್ಗದ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿನ ಕಡೆಗಣನೆಯು ದೊಡ್ಡ ದ್ರೋಹ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆರೋಪಿಗಳನ್ನು ಬಂಧಿಸಿ, ಸೂಕ್ತ ಶಿಕ್ಷೆ ಕೊಡಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ದಲಿತ ಮುಖಂಡ ಶ್ರೀನಿವಾಸ್ ಮಾತನಾಡಿ ಜನಸಾಮಾನ್ಯರ ಬದುಕಿಗೆ ಬೆಳಕಾಗಬೇಕಾಗಿದ್ದ ಜನಪ್ರತಿನಿಧಿ ಮತ್ತು ಅವರ ಅನುಯಾಯಿಗಳು ತಮ್ಮ ಹಣದ ಆಸೆಗಾಗಿ ಒಂದು ಕುಟುಂಬದ ಜೀವನವನ್ನೇ ಸರ್ವನಾಶದ ಅಂಚಿಗೆ ತಳ್ಳಿದ್ದಾರೆ.ಇದೊಂದು ನಾಗರೀಕ ಸಮಾಜ ತಲೆ ತಗ್ಗಿಸು ವಂತಾಗಿದೆ. ಆದ ಕಾರಣ ಈ ಪ್ರಕರಣದಲ್ಲಿ ನಿಷ್ಪಕ್ಷವಾದ ತನಿಖೆ ನಡೆಸಬೇಕು. ಎಂತಹ ಪ್ರಭಾವ ಶಾಲಿಯೇ ಆಗಿರಲಿ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯ ಬೇಕು ಒತ್ತಾಯಿಸಿದರು.

ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಪೆದ್ದಣ್ಣ ಮಾತನಾಡಿ ಪ್ರಕರಣ ನಡೆದು ವಾರವಾದರೂ ಎಫ್‌ಐಆರ್‌ನಲ್ಲಿ ಹೆಸರು ದಾಖಲಾಗಿರುವ ಆರೋಪಿಗಳಾದ ಸಂಸದ ಡಾ ಕೆ.ಸುಧಾಕರ್, ಎನ್.ಎನ್.ಆರ್ ನಾಗೇಶ್, ಜಿ.ಪಂ.ಲೆಕ್ಕಾಧಿಕಾರಿ ಕಚೇರಿಯ ಸಹಾಯಕ ಮಂಜುನಾಥ್ ಈ ಮೂವರನ್ನು ಇದುವರೆಗೂ ಬಂಧಿಸಿಲ್ಲ. ಪೊಲೀಸರು ಶೋಷಿತ ವರ್ಗದ ದಲಿತ ಯುವಕನ ಸಾವಿಗೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. ಈಗಲಾದರೂ ಸಂಬಂಧಪಟ್ಟವರು ಆರೋಪಿಗಳನ್ನು ಬಂಧಿಸಿ, ಕಾನೂನು ಪ್ರಕಾರ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾ ಬಂದ್ ಸೇರಿದಂತೆ ವಿವಿಧ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಮಯಕ್ಕೆ ಜೋರಾಗಿ ಮಳೆ ಸುರಿಯಲಾ ರಂಭಿಸಿತು. ಸುರಿವ ಮಳೆಯನ್ನೂ ಲೆಕ್ಕಿಸದೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಎಸ್ಪಿ, ಕುಶಾಲ್‌ ಚೌಕ್ಸೆ ಪ್ರತಿಭಟನಾನಿರತರ ಬಳಿಗೆ ಬಂದು ಮನವಿ ಸ್ವೀಕರಿಸಿ, ಆರೋಪಿಗಳ ಬಂಧನಕ್ಕೆ ಕ್ರಮವಹಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ಸು ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಗವಿರಾಯಪ್ಪ,ಶ್ರೀನಿವಾಸ್,ಬಿ.ವಿ ಆನಂದ್, ಮಮತಾಮೂರ್ತಿ, ಅಣ್ಣೆಮ್ಮ, ಪೆದ್ದಣ್ಣ, ಆಧಿನಾರಯಣ, ಮುನಿಕೃಷ್ಣ, ನಾಗೇಶ್ ರೆಡ್ಡಿ, ಕುಬೇರ್ ಅಚ್ಚು, ವೆಂಕಟ್, ವೇಮಣ್ಣ, ಸಿ.ಆರ್.ನಾರಾಯಣಸ್ವಾಮಿ, ನಾರಾಯಣಮ್ಮ, ಡ್ಯಾನ್ಸ್ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ರೆಡ್ಡಿ, ನಾಗಭೂಷಣ್ ಇತರೆ ಮುಖಂಡರು ಭಾಗವಹಿಸಿದ್ದರು.