ಬೀದರ್: ರಾಜ್ಯದ ಬೀದರ್ (Bidar) ಜಿಲ್ಲೆಯ ಐತಿಹಾಸಿಕ ಗುರುನಾನಕ್ ಝೀರಾ ಸಾಹೇಬ್ (Guru Nanak Jhira Sahib) ಗುರುದ್ವಾರಕ್ಕೆ ಒಂದೇ ವಾರದಲ್ಲಿ ಎರಡನೇ ಬಾರಿಗೆ ಬಾಂಬ್ ಬೆದರಿಕೆ (Bomb Threat) ಸಂದೇಶ ಬಂದಿದೆ. ಜುಲೈ 18 ಮತ್ತು ಜುಲೈ 20ರಂದು ಎರಡು ಬಾರಿ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಗುರುದ್ವಾರದಲ್ಲಿ ಸ್ಫೋಟದ ಬಳಿಕ ಮುಖ್ಯಮಂತ್ರಿಯ ಕಚೇರಿಯೂ ಬಾಂಬ್ ಸ್ಫೋಟದಿಂದ ಧ್ವಂಸಗೊಳ್ಳಲಿದೆ ಎಂದು ಗಂಭೀರ ಎಚ್ಚರಿಕೆ ನೀಡಲಾಗಿದೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯೂ ಹೈ-ಅಲರ್ಟ್ ಆಗಿದೆ.
ಬೆದರಿಕೆ ಸಂದೇಶದಲ್ಲಿ, ಗುರುದ್ವಾರದ ಬಳಿಯಲ್ಲಿ ಎರಡು ಆರ್‌ಡಿಎಕ್ಸ್ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿದ್ದು, ಸಾರ್ವಜನಿಕರನ್ನು ತಕ್ಷಣವೇ ಸ್ಥಳಾಂತರಿಸುವಂತೆ ಎಚ್ಚರಿಕೆ ನೀಡಲಾಗಿದೆ. ಇಮ್ಯಾನುಯೆಲ್ ಶೇಖರನ್ ಎಂಬ ವ್ಯಕ್ತಿಯಿಂದ ಗುರುದ್ವಾರದ ಇ-ಮೇಲ್ ಐಡಿಗೆ ಕಳುಹಿಸಲಾದ ಈ ಸಂದೇಶದಲ್ಲಿ, ಗುರುದ್ವಾರದಲ್ಲಿ ಸ್ಫೋಟ ಸಂಭವಿಸಿದ 37 ನಿಮಿಷಗಳ ನಂತರ ಕರ್ನಾಟಕದ ಮುಖ್ಯಮಂತ್ರಿಯ ಕಚೇರಿಯೂ ಬಾಂಬ್ ಸ್ಫೋಟದಿಂದ ಧ್ವಂಸಗೊಳ್ಳಲಿದೆ ಎಂದು ಗಂಭೀರ ಎಚ್ಚರಿಕೆ ನೀಡಲಾಗಿದೆ.
ಮೊದಲ ಸಂದೇಶ ಜುಲೈ 18ರಂದು ಬಂದಿತ್ತು. ಆಗ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದರೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಬೆದರಿಕೆ ಸಂದೇಶ ಬಂದ ಕೂಡಲೇ, ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಗುರುದ್ವಾರದ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ಎಸ್‌ಪಿ ಪ್ರದೀಪ್ ಗುಂಟಿ, ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ (ಬಾಂಬ್ ಸ್ಕ್ವಾಡ್), ಮತ್ತು ಶ್ವಾನ ದಳ (ಡಾಗ್ ಸ್ಕಾಡ್) ಸೇರಿ ವಿಶೇಷ ತಂಡದಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಗುರುದ್ವಾರದ ಒಳಗೆ ಮತ್ತು ಹೊರಗಿನ ಪ್ರದೇಶಗಳಲ್ಲಿ ಕೂಲಂಕುಷವಾಗಿ ಪರಿಶೀಲನೆ ನಡೆದಿದ್ದು, ಇದುವರೆಗೆ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ.
ಗುರುನಾನಕ್ ಝೀರಾ ಸಾಹೇಬ್ ಗುರುದ್ವಾರ ದರ್ಶನಕ್ಕೆ ಆಗಮಿಸುವ ಯಾತ್ರಿಕರನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ, ನಗರದಾದ್ಯಂತ ಪೊಲೀಸರು ಪೆಟ್ರೋಲಿಂಗ್ ತೀವ್ರಗೊಳಿಸಿದ್ದಾರೆ. ಬೀದರ್‌ನ ಪ್ರಮುಖ ಪ್ರವಾಸಿ ತಾಣಗಳಾದ ಪಾಪನಾಶ, ಮಹ್ಮದ್ ಚೌಕ್, ಮತ್ತು ಝರಣಾ ನರಸಿಂಹ ದೇವಸ್ಥಾನದ ಸುತ್ತಲೂ ಹದ್ದಿನಕಣ್ಣಿನ ಗಸ್ತು ತಿರುಗಿಸಲಾಗುತ್ತಿದೆ.
ಗುರುದ್ವಾರದ ಆಡಳಿತ ಮಂಡಳಿಯು ಬೆದರಿಕೆ ಸಂದೇಶದ ಕುರಿತು ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಿದ್ದು, ಭಕ್ತರ ಸುರಕ್ಷತೆಗೆ ಆದ್ಯತೆ ನೀಡುವಂತೆ ಕೋರಿದೆ. ಗುರುದ್ವಾರದ ಸುತ್ತಲಿನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಒದಗಿಸಲಾಗಿದೆ. ಎರಡನೇ ಬಾರಿಗೆ ಬಂದಿರುವ ಈ ಬಾಂಬ್ ಬೆದರಿಕೆಯಿಂದಾಗಿ ಬೀದರ್ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿಯ ಕಚೇರಿಗೂ ಬೆದರಿಕೆ ಒಡ್ಡಿರುವುದು ಈ ಘಟನೆಯ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: Golden Temple: ಗೋಲ್ಡನ್ ಟೆಂಪಲ್‌ಗೆ ಬಾಂಬ್ ಬೆದರಿಕೆ- ತಮಿಳುನಾಡು ಮೂಲದ ಇಬ್ಬರು ಅರೆಸ್ಟ್