ಬಾಗಲಕೋಟೆ: ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಡ್ಡಿ ಗ್ಯಾಂಗ್ (Chaddi Gang) ಕಳ್ಳತನಗಳನ್ನು (theft) ನಡೆಸಿ ಕಣ್ಮರೆಯಾಗಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಅಲರ್ಟ್ ಆಗಿದ್ದು, ಬಾಗಲಕೋಟೆ (Bagalakote) ಜಿಲ್ಲೆಯ ಮುಧೋಳದಲ್ಲಿ ರಾತ್ರಿ ಮನೆಯೊಂದಕ್ಕೆ ಕನ್ನ ಹಾಕಲು ಈ ಕಳ್ಳರು ಹೊಂಚು ಹಾಕಿದ್ದರು. ಆದರೆ ಅಮೆರಿಕಾದಲ್ಲಿರುವ ಮನೆಯ ಮಾಲಿಕನ ಪುತ್ರಿ ಅಲ್ಲಿಂದಲೇ ಕಳ್ಳರನ್ನು ಓಡಿಸಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿರುವ ಪಿಡಬ್ಲ್ಯೂಡಿ ನಿವೃತ್ತ ಇಂಜಿನಿಯರ್ ಹನುಮಂತ ಗೌಡರ ಮನೆಗೆ ಚಡ್ಡಿ ಗ್ಯಾಂಗ್ ಕನ್ನ ಹಾಕಲು ರಾತ್ರಿ ಆಗಮಿಸಿದೆ. ನಾಲ್ವರಿದ್ದ ಚಡ್ಡಿ ಗ್ಯಾಂಗ್ ರಾತ್ರಿ ಒಂದು ಗಂಟೆಗೆ ಮನೆಗೆ ಎಂಟ್ರಿ ಕೊಟ್ಟಿತ್ತು. ಈ ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಹನುಮಂತಗೌಡರ ಪುತ್ರಿ ಶೃತಿ ಅಮೇರಿಕಾದಲ್ಲಿ ವಾಸಿಸುತ್ತಿದ್ದು, ಈ ಸಿಸಿಟಿವಿ ಕ್ಯಾಮೆರಾವನ್ನು ತಮ್ಮ ಮೊಬೈಲ್‌ಗೆ ಕನೆಕ್ಟ್ ಮಾಡಿಕೊಂಡಿದ್ದರು. ಅಲ್ಲಿಂದಲೇ ಮನೆಯವರ ಜೊತೆ ಸಂಪರ್ಕವಿಟ್ಟುಕೊಂಡಿದ್ದರು.
ಮಧ್ಯರಾತ್ರಿ ಚಡ್ಡಿ ಗ್ಯಾಂಗ್ ಮನೆ ಒಳಗೆ ನುಗ್ಗಿದ್ದು, ಈ ವೇಳೆ ಶೃತಿ ಮೊಬೈಲ್‌ಗೆ ಅಲರ್ಟ್ ಮೆಸೇಜ್ ಬಂದಿದೆ. ಮೊಬೈಲ್ ಓಪನ್ ಮಾಡಿ ನೋಡಿದಾಗ ಚಡ್ಡಿ ಗ್ಯಾಂಗ್ ಮನೆಗೆ ಬಂದಿರುವುದು ಕಂಡು ಬಂದಿದೆ. ಕೂಡಲೆ ಮನೆಯವರಿಗೆ ಫೋನ್ ಮಾಡಿದ್ದಾಳೆ. ಕಳ್ಳರು ನುಗ್ಗಿರುವ ಬಗ್ಗೆ ಹೇಳಿದ್ದಾಳೆ. ತಕ್ಷಣ ಹನುಮಂತ ಗೌಡರು ಮನೆಯ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ.
ಇನ್ನು ಈ ಚಡ್ಡಿ ಗ್ಯಾಂಗ್, ಹನುಮಂತ ಗೌಡರ ಮನೆಗೆ ನುಗ್ಗುವ ಮೊದಲು, ಅಶೋಕ್ ಕರಿಹೊನ್ನ ಎಂಬವರ ಮನೆಗೂ ನುಗ್ಗಿತ್ತಂತೆ. ಅಲ್ಲಿ 100 ಗ್ರಾಂ ಚಿನ್ನ ದೋಚಿ ಪರಾರಿಯಾಗಿದೆ. ಅಮೆರಿಕದಲ್ಲಿ ನೆಲೆಸಿದ್ದ ಸಾಫ್ಟ್ವೇರ್ ಎಂಜಿನಿಯರ್ ಶ್ರುತಿ ಸಮಯಪ್ರಜ್ಞೆಯಿಂದ ಮನೆ ಕಳ್ಳತನ ತಪ್ಪಿದೆ. ಇದೀಗ ಚಡ್ಡಿ ಗ್ಯಾಂಗ್ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಮುಧೋಳ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Viral Video: 5 ಲಕ್ಷ ರೂ. ಮೌಲ್ಯದ ಲಬುಬು ಗೊಂಬೆಗಳ ಕಳವು- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ