Devanahalli Land Protest: ರೈತರ ಮೊರೆಗೆ ಮಣಿದ ಸಿಎಂ ಸಿದ್ದರಾಮಯ್ಯ, ದೇವನಹಳ್ಳಿ ರೈತರ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತ
Devanahalli land protest: ದೇವನಹಳ್ಳಿ ರೈತರ ಹೋರಾಟಕ್ಕೆ ಈ ಮೂಲಕ ಅತಿದೊಡ್ಡ ಜಯ ಸಿಕ್ಕಿದೆ. ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ರೈತರ ಜೊತೆಗಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸಿದ್ದಾರೆ. ಅನೇಕ ಸಂಘಟನೆಗಳು, ಚಿಂತಕರು, ಸಾಹಿತಿಗಳು ರೈತರ ಹೋರಾಟಕ್ಕೆ ಸಾಥ್ ನೀಡಿದ್ದರು ಹಾಗೂ ಸಿಎಂಗೆ ಮನವಿ ಮಾಡಿದ್ದರು.


ಬೆಂಗಳೂರು : ದೇವನಹಳ್ಳಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ (Devanahalli Land Protest) ರಾಜ್ಯ ಸರಕಾರ (Karnataka Government) ಕೊನೆಗೂ ಮಣಿದಿದೆ. ಕೈಗಾರಿಕಾಭಿವೃದ್ಧಿಗಾಗಿ ನಡೆಸಲು ಉದ್ದೇಶಿಸಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಬಿಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ರಾಜ್ಯ ಸರ್ಕಾರದ ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ವಿಧಾನಸೌಧದಲ್ಲಿ ರೈತರ ಜೊತೆಗಿನ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ಈ ನಿರ್ಧಾರ ಪ್ರಕಟಿಸಿದ್ದಾರೆ.
ದೇವನಹಳ್ಳಿ ರೈತರ ಹೋರಾಟಕ್ಕೆ ಈ ಮೂಲಕ ಅತಿದೊಡ್ಡ ಜಯ ಸಿಕ್ಕಿದೆ. ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ರೈತರ ಜೊತೆಗಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸಿದ್ದಾರೆ. ಕೆಐಎಡಿಬಿ ಅಂತಿಮ ಅಧಿಸೂಚನೆ ರದ್ದು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ದೇವನಹಳ್ಳಿಯಲ್ಲಿ ರೈತರ ಭೂಮಿ ಸ್ವಾಧೀನ ವಿರೋಧಿಸಿ ರೈತರು ಇತ್ತೀಚೆಗೆ ತಾವು ಬೆಳೆದ ಬೆಳೆ, ತರಕಾರಿ, ಹೂವು, ಹಣ್ಣುಗಳ ಬುಟ್ಟಿ ಸಮೇತ ವಿಧಾನಸೌಧಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳದಂತೆ ಮನವಿ ಮಾಡಿದ್ದರು.
ದೇವನಹಳ್ಳಿ ಭಾಗದ 13 ಹಳ್ಳಿಗಳ ಸುತ್ತ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದರ ವಿರುದ್ಧ ರೈತರು ಸಿಡಿದೆದ್ದಿದ್ದು, ತಮ್ಮ ಜಮೀನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದರು. ದೇವನಹಳ್ಳಿ ತಾಲ್ಲೂಕು ಚೆನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಭೂಮಿಯನ್ನು ಕೆ.ಐ.ಎ.ಡಿ.ಬಿ.ಕೈಗಾರಿಕಾಭಿವೃದ್ದಿ ಹೆಸರಲ್ಲಿ ಸ್ವಾಧೀನಕ್ಕೆ ಪಡೆಯಲು ಅಧಿಸೂಚನೆ ಹೊರಡಿಸಲಾಗಿತ್ತು. ರೈತರು ಇದನ್ನು ವಿರೋಧಿಸಿ 1195 ದಿನಗಳಿಂದ ಹೋರಾಟ ನಡೆಸಿದ್ದರು. ಅನೇಕ ಸಂಘಟನೆಗಳು, ಚಿಂತಕರು, ಸಾಹಿತಿಗಳು ರೈತರಿಗೆ ಸಾಥ್ ನೀಡಿದ್ದರು ಹಾಗೂ ಸಿಎಂಗೆ ಮನವಿ ಮಾಡಿದ್ದರು.
ಇದನ್ನೂ ಓದಿ:Chikkaballapur News: 1195 ದಿನಗಳ ದೇವನಹಳ್ಳಿ ಭೂ ಹೋರಾಟಕ್ಕೆ ಜು.15ರ ಸಭೆ ಇತಿಶ್ರೀ ಹಾಡುವುದೇ ?