ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

iPhone Price Hike: ಐಫೋನ್‌ ಪ್ರಿಯರಿಗೆ ಶಾಕ್‌ ಕೊಟ್ಟ ಟ್ರಂಪ್‌ ನಡೆ; ಶೇ. 40ರಷ್ಟು ದುಬಾರಿಯಾಗಲಿದ್ಯಾ ಆ್ಯಪಲ್‌ ಬ್ರ್ಯಾಂಡ್‌ ಮೊಬೈಲ್‌?

Reciprocal Tariffs: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿರುವ ಪ್ರತಿಸುಂಕದ ಕಾರಣದಿಂದ ಐಫೋನ್‌ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ತಜ್ಞರ ಪ್ರಕಾರ ಐಫೋನ್‌ ಬೆಲೆ ಶೇ. 40ರಷ್ಟು ಹೆಚ್ಚಲಿದೆ. ಆರಂಭಿಕ ಹಂತದ ಮೊಬೈಲ್‌ನಿಂದ ಹಿಡಿದು ಪ್ರೀಮಿಯಂ ಆವೃತ್ತಿಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಐಫೋನ್‌ ಶೇ. 40ರಷ್ಟು ದುಬಾರಿ ಸಾಧ್ಯತೆ

ಸಾಂದರ್ಭಿಕ ಚಿತ್ರ.

Profile Ramesh B Apr 4, 2025 4:51 PM

ಹೊಸದಿಲ್ಲಿ: ನೀವು ಐಫೋನ್‌ (iPhone) ಪ್ರಿಯರೇ? ಐಫೋನ್‌ನ ಮುಂದಿನ ಸಿರೀಸ್‌ ಖರೀದಿಸುವ ಯೋಜನೆಯಲ್ಲಿದ್ದೀರಾ? ಹಾಗಾದರೆ ನಿಮಗಾಗಿ ಕಾದಿದೆ ಆಘಾತಕಾರಿ ಸುದ್ದಿ. ಹೌದು, ಆ್ಯಪಲ್‌ (Apple) ಬ್ರ್ಯಾಂಡ್‌ನ ಐಫೋನ್‌ ಸದ್ಯದಲ್ಲೇ ಶೇ. 40ರಷ್ಟು ದುಬಾರಿಯಾಗಲಿದೆ. ಅಮೆರಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಭಾರತ ಸೇರಿ 180ಕ್ಕೂ ಹೆಚ್ಚು ದೇಶಗಳಿಂದ ಆಮದಾಗುವ ಉತ್ಪನ್ನಗಳ ಪ್ರತಿಸುಂಕ (Reciprocal tariffs) ಘೋಷಿಸಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಐಫೋನ್‌ ಬೆಲೆಯಲ್ಲಿ ಭಾರಿ ಹೆಚ್ಚಳವಾಗಲಿದೆ ಎಂದು ತಜ್ಞರು ಊಹಿಸಿದ್ದಾರೆ. ಅಂದರೆ ಆ್ಯಪಲ್‌ ಕಂಪನಿಯು ಹೆಚ್ಚುವರಿ ಸುಂಕವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದರೆ ಐಫೋನ್‌ ದುಬಾರಿಯಾಗುವ ಸಾಧ್ಯತೆ ಇದೆ (iPhone Price Hike). ಹೀಗಾದಲ್ಲಿ ಆರಂಭಿಕ ಹಂತದ ಮೊಬೈಲ್‌ನಿಂದ ಹಿಡಿದು ಪ್ರೀಮಿಯಂ ಆವೃತ್ತಿಗಳ ಬೆಲೆ ಏರಿಕೆಯಾಗಲಿದೆ.

ಹೆಚ್ಚಿನ ಐಫೋನ್‌ಗಳನ್ನು ಚೀನಾದಲ್ಲಿ ಜೋಡಿಸಲಾಗುತ್ತದೆ. ಅಮೆರಿಕದ ಹೊಸ ಸುಂಕ ನೀತಿ ಹೆಚ್ಚಾಗಿ ಬಾಧಿಸಿದ ದೇಶಗಳಲ್ಲಿ ಚೀನಾವೂ ಒಂದು. ಚೀನಾಕ್ಕೆ ಅಮೆರಿಕವು ಶೇ. 34ರಷ್ಟು ಪ್ರತಿಸುಂಕ ಘೋಷಿಸಿದೆ. ಈ ಹೆಚ್ಚುವರಿ ಸುಂಕವನ್ನು ಕಂಪನಿ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಇದು ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ.

ಈ ಸಿದ್ದಿಯನ್ನೂ ಓದಿ: Donald Trump's Tariff War: ಟ್ರಂಪ್‌ ತೆರಿಗೆ ಸಮರ; ಭಾರತಕ್ಕೇನು ಎಫೆಕ್ಟ್?

ಎಷ್ಟು ಹೆಚ್ಚಾಗಲಿದೆ?

ಆ್ಯಪಲ್‌ ಈ ಹೆಚ್ಚುವರಿ ವೆಚ್ಚವನ್ನು ಖರೀದಿದಾರರಿಗೆ ವರ್ಗಾಯಿಸಿದರೆ ಪ್ರಸ್ತುತ 799 ಡಾಲರ್‌ (68,000 ರೂ.) ಬೆಲೆಯ ಆರಂಭಿಕ ಹಂತದ ಐಫೋನ್ 16 ಸುಮಾರು 1,142 ಡಾಲರ್‌ (ಸುಮಾರು 97,000 ರೂ.)ಗೆ ಏರಿಕೆಯಾಗಬಹುದು. ಇನ್ನು 1 ಟಿಬಿ ಸ್ಟೋರೇಜ್ ಹೊಂದಿರುವ ಪ್ರೀಮಿಯಂ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ 2,300 ಡಾಲರ್‌ (1.95 ಲಕ್ಷ ರೂ.)ಗೆ ತಲುಪಲಿದೆ. ಆ ಮೂಲಕ ಇದು ಐಫೋನ್‌ನ ದುಬಾರಿ ಮಾಡೆಲ್‌ ಆಗಲಿದೆ. ಪ್ರತಿಸುಂಕ ಘೋಷಣೆಯ ಬಳಿಕ ಆ್ಯಪಲ್‌ ಕಂಪನಿಯ ಷೇರು ಶೇ. 9.3 ರಷ್ಟು ಕುಸಿದಿದೆ.

ಸ್ಯಾಮ್‌ಸಂಗ್‌ ಮಾರಾಟದ ಮೇಲೆ ಪರಿಣಾಮ?

ಐಫೋನ್ ಬೆಲೆ ಏರಿಕೆಯಿಂದ ಸ್ಯಾಮ್‌ಸಂಗ್ ಮೊಬೈಲ್‌ ಫೋನ್‌ಗಳ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಯಾಮ್‌ಸಂಗ್ ತನ್ನ ಹೆಚ್ಚಿನ ಫೋನ್‌ಗಳನ್ನು ಚೀನಾದ ಹೊರಗೆ ತಯಾರಿಸುತ್ತದೆ. ಆದ್ದರಿಂದ ಅವುಗಳು ಹೊಸ ಸುಂಕಗಳಿಗೆ ಒಳಪಡುವುದಿಲ್ಲ. ಇದೇ ಕಾರಣಕ್ಕೆ ಸ್ಯಾಮ್‌ಸಂಗ್‌ ಬೆಲೆ ಅಗ್ಗವಾಗಿಯೇ ಇರಲಿದೆ. ಕೃತಕ ಬುದ್ದಿಮತ್ತೆ (AI) ಮುಂತಾದ ವೈಶಿಷ್ಟ್ಯಗಳ ಅಳವಡಿಕೆ ಕಾರಣದಿಂದ ಈಗಾಗಲೇ ಐಫೋನ್‌ ದುಬಾರಿಯಾಗಿದ್ದು, ಬೇಡಿಕೆ ಕಡಿಮೆಯಾಗಿದೆ. ಇನ್ನೊಂದು ಸುತ್ತು ಬೆಲೆ ಏರಿಕೆಯಾದರಾರೆ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಯಾಕಾಗಿ ಟ್ರಂಪ್‌ ಈ ನಿರ್ಧಾರ?

ಜಗತ್ತಿನ ನಾನಾ ದೇಶಗಳು ಅಮೆರಿಕದ ಸರಕುಗಳ ಮೇಲೆ ಭಾರಿ ಆಮದು ತೆರಿಗೆ ವಿಧಿಸುತ್ತವೆ. ಅಂಥ ದೇಶಗಳ ವಿರುದ್ಧ ಅಮೆರಿಕವೂ ಇನ್ನು ಮುಂದೆ ಭಾರಿ ಆಮದು ತೆರಿಗೆ ವಿಧಿಸಲಿದೆ ಎನ್ನುತ್ತಾರೆ ಟ್ರಂಪ್.‌ ಇನ್ನು ಹಲವು ವಸ್ತುಗಳ ಮೇಲೆ ಯಾವ ದೇಶ ಎಂಬುದನ್ನೂ ನೋಡದೆ, ಸಾರ್ವತ್ರಿಕವಾಗಿಯೂ ಟ್ಯಾಕ್ಸ್‌ ಜಡಿಯಲು ಟ್ರಂಪ್‌ ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ತೆರಿಗೆ ಆದಾಯವನ್ನು ಹೆಚ್ಚಿಸುವುದು, ಅಮೆರಿಕದ ಉತ್ಪಾದನಾ ಕ್ಷೇತ್ರವನ್ನು ಸುಧಾರಿಸುವುದು, ವಿದೇಶಾಂಗ ನೀತಿಯ ಗುರಿಗಳನ್ನು ಸಾಧಿಸುವುದು ಟ್ರಂಪ್‌ ಆಶಯ. ಆದರೆ ಇದರಿಂದ ಜಾಗತಿಕ ವಾಣಿಜ್ಯ ವ್ಯವಹಾರಗಳು ಹಳಿ ತಪ್ಪುವ ಮತ್ತು ಸ್ವತಃ ಅಮೆರಿಕದ ಇಕಾನಮಿ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದೂ ವಿ‍ಶ್ಲೇಷಿಸಲಾಗುತ್ತಿದೆ.

ಏನಿದು ಪ್ರತಿಸುಂಕ?

ಒಂದು ದೇಶವು ತನ್ನ ಉತ್ಪನ್ನಗಳ ಮೇಲೆ ಇನ್ನೊಂದು ದೇಶವು ವಿಧಿಸುವ ಆಮದು ಸುಂಕಕ್ಕೆ ಸಮಾನವಾಗಿ ವಿಧಿಸುವ ತೆರಿಗೆಯನ್ನು ಪ್ರತಿಸುಂಕ ಎನ್ನಲಾಗುತ್ತದೆ. ಯಾವುದೇ ದೇಶಗಳ ಉತ್ಪನ್ನಗಳು ತಮ್ಮ ದೇಶದ ಗಡಿಯನ್ನು ದಾಟಿದ ಮೇಲೆ ಅಮೆರಿಕ ಸರಕಾರ ಈ ಉತ್ಪನ್ನಗಳ ಮೇಲೆ ಆಯಾ ದೇಶಗಳಿಗೆ ನಿಗದಿಪಡಿಸಿದ ತೆರಿಗೆ ವಿಧಿಸಲಿದೆ.