Donald Trump's Tariff War: ಟ್ರಂಪ್ ತೆರಿಗೆ ಸಮರ; ಭಾರತಕ್ಕೇನು ಎಫೆಕ್ಟ್?
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏ. 2ರಿಂದ ಭಾರತ ಸೇರಿದಂತೆ ಜಗತ್ತಿನ ನಾನಾ ದೇಶಗಳ ವಿರುದ್ಧ ಟ್ರೇಡ್ ಟಾರಿಫ್ ವಾರ್ ಅಥವಾ ವಾಣಿಜ್ಯ ತೆರಿಗೆ ಸಮರವನ್ನು ಘೋಷಿಸಿದ್ದಾರೆ. ಇದನ್ನು ಲಿಬರೇಷನ್ ಡೇ ಎಂದೂ ಬಣ್ಣಿಸಿದ್ದಾರೆ. ಹಾಗಾದ್ರೆ ಏನಿದು ಟ್ರಂಪ್ ಟಾರಿಫ್? ಇದರ ಉದ್ದೇಶ ಏನು? ಇದರಿಂದ ಭಾರತದ ಸ್ಟಾಕ್ ಮಾರ್ಕೆಟ್ ಮೇಲೆ ಉಂಟಾಗಬಹುದಾದ ಪ್ರಭಾವ ಏನು? ಇಲ್ಲಿದೆ ವಿವರ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

-ಕೇಶವ ಪ್ರಸಾದ್ ಬಿ.
ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಏ. 2ರಿಂದ ಭಾರತ ಸೇರಿದಂತೆ ಜಗತ್ತಿನ ನಾನಾ ದೇಶಗಳ ವಿರುದ್ಧ ಟ್ರೇಡ್ ಟಾರಿಫ್ ವಾರ್ ಅಥವಾ ವಾಣಿಜ್ಯ ತೆರಿಗೆ ಸಮರವನ್ನು ಘೋಷಿಸಿದ್ದಾರೆ. ಇದನ್ನು ಲಿಬರೇಷನ್ ಡೇ ಎಂದೂ ಬಣ್ಣಿಸಿದ್ದಾರೆ (Donald Trump's Tariff War). ಹಾಗಾದ್ರೆ ಏನಿದು ಟ್ರಂಪ್ ಟಾರಿಫ್? ಇದರ ಉದ್ದೇಶ ಏನು? ಇದರಿಂದ ಭಾರತದ ಸ್ಟಾಕ್ ಮಾರ್ಕೆಟ್ ಮೇಲೆ ಉಂಟಾಗಬಹುದಾದ ಪ್ರಭಾವ ಏನು? ಯಾವ ಸೆಕ್ಟರ್ ಮತ್ತು ಯಾವ ಸ್ಟಾಕ್ಸ್ ಮೇಲೆ ಪ್ರಭಾವ ಬೀರಬಹುದು? ಈ ಬಿಕ್ಕಟ್ಟಿನಿಂದ ಗ್ಲೋಬಲ್ ಟ್ರೇಡ್ ವಾರ್ ಸಂಭವಿಸಲಿದೆಯೇ? ಅಮೆರಿಕದಲ್ಲಿ ರಿಸೆಶನ್ ಆಗಲಿದೆಯೇ? ಹೂಡಿಕೆದಾರರು ಏನು ಮಾಡಬಹುದು? ನೋಡೋಣ.
ಟಾರಿಫ್ ಸಮರ: ಟ್ರಂಪ್ ಉದ್ದೇಶ ಏನು?
- ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸುವುದು ಮತ್ತು ಆ ಮೂಲಕ ಸಂಗ್ರಹವಾಗುವ ಹಣದಿಂದ ಅಮೆರಿಕದ ಬಜೆಟ್‌ನ ವಿತ್ತೀಯ ಕೊರತೆಯನ್ನು ನೀಗಿಸಿ, ಆರ್ಥಿಕತೆಯನ್ನು ಬಲಪಡಿಸುವುದು ಟ್ರಂಪ್ ಅವರ ಮಹತ್ತ್ವಾಕಾಂಕ್ಷೆ.
- ಅಮೆರಿಕದ ಉತ್ಪಾದನಾ ಕ್ಷೇತ್ರದ ಗತ ವೈಭವವನ್ನು ಮರಳಿ ತರುವುದು. ಇದುವರೆಗೆ ಚೀನಾ ಮತ್ತಿತರ ದೇಶಗಳಿಗೆ ಹೋಗಿರುವ ಅಮೆರಿಕದ ಉತ್ಪಾದನಾ ಕ್ಷೇತ್ರದ ಚಟುವಟಿಕೆಗಳನ್ನು ಮರಳಿಸುವುದು.
- ವಿದೇಶಾಂಗ ನೀತಿಯ ಗುರಿಗಳನ್ನು ಈಡೇರಿಸುವುದು.
- ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದಾಗ ಅವುಗಳ ದರ ಏರುತ್ತವೆ. ಅವುಗಳು ದುಬಾರಿಯಾದಾಗ ಅಮೆರಿಕದ ಜನರು ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುತ್ತಾರೆ. ಆಗ ಅಮೆರಿಕದ ಸ್ಥಳೀಯ ಉತ್ಪಾದಕರಿಗೆ ಅನುಕೂಲವಾಗಲಿದೆ ಎಂಬುದು ಟ್ರಂಪ್ ಅವರ ವಾದ.
ಈ ಸುದ್ದಿಯನ್ನೂ ಓದಿ: Gold Rate: ಬಂಗಾರದ ದರ ಸ್ಫೋಟ: 10 ಗ್ರಾಮ್‌ಗೆ 91,000 ರೂ.; ಕಾರಣವೇನು?
ಅಮೆರಿಕವು ಮೆಕ್ಸಿಕೊ, ಚೀನಾ ಮತ್ತು ಕೆನಡಾದಿಂದ 2024 ರಲ್ಲಿ ಹೆಚ್ಚು ಆಮದು ಮಾಡಿಕೊಂಡಿರುವ ವಸ್ತುಗಳು ಯಾವುದು?
- ಟ್ರಕ್‌ಗಳು
- ಇನ್ಸಲ್ಟೆಡ್ ವೈರ್‌ಗಳು
- ಕಂಪ್ಯೂಟರ್‌ಗಳು
- ಕಾರುಗಳು
- ಟೆಲಿಫೋನ್‌ಗಳು
- ಬ್ರಾಡ್ ಕಾಸ್ಟಿಂಗ್
- ಎಕ್ವಿಪ್‌ಮೆಂಟ್
- ರಿಫೈನ್ಡ್ ಪೆಟ್ರೋಲಿಯಂ
- ಕಚ್ಚಾ ಪೆಟ್ರೋಲಿಯಂ
- ಎಲೆಕ್ಟ್ರಿಕ್ ಬ್ಯಾಟರಿಗಳು
ಟ್ರಂಪ್ ಅವರ ಟಾರಿಫ್ ವಾರ್ ಹೇಗಿದೆ?
ಫೆಬ್ರವರಿ 4: ಚೀನಾದಿಂದ ಆಮದಾಗುವ ವಸ್ತುಗಳಿಗೆ 10% ತೆರಿಗೆ
ಫೆಬ್ರವರಿ 7: ಚೀನಾದಿಂದ ಆಮದಾಗುವ 800 ಡಾಲರ್‌ಗಿಂತ ಕಡಿಮೆ ಬೆಲೆಯ ವಸ್ತುಗಳಿಗೆ ವಿನಾಯಿತಿ
ಮಾರ್ಚ್ 4: ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ 10% ತೆರಿಗೆಯನ್ನು 20% ಕ್ಕೆ ಇಮ್ಮಡಿಗೊಳಿಸಿದರು.
ಮೆಕ್ಸಿಕೊ, ಕೆನಡಾದಿಂದ ಆಮದಿಗೆ 25% ತೆರಿಗೆ ಘೋಷಣೆ.
ಮಾರ್ಚ್ 5-6: ಉತ್ತರ ಅಮೆರಿಕದಿಂದ ಆಮದಿಗೆ ವಿನಾಯಿತಿ ಘೋಷಣೆ
ಮಾರ್ಚ್ 12: ಉಕ್ಕು ಮತ್ತು ಅಲ್ಯುಮಿನಿಯಂ ಆಮದಿಗೆ 25% ತೆರಿಗೆ
ಏಪ್ರಿಲ್ 2: ಅಮೆರಿಕಕ್ಕೆ ಆಮದಾಗುವ ಕಾರುಗಳ ಮೇಲೆ 25% ತೆರಿಗೆ
ಏಪ್ರಿಲ್ 2ರಿಂದ ಇತರ ದೇಶಗಳಿಂದ ಆಮದಾಗುವ ವಸ್ತುಗಳಿಗೆ ತೆರಿಗೆ ಘೋಷಣೆ.
ಜಗತ್ತಿನ ನಾನಾ ದೇಶಗಳು ಅಮೆರಿಕದ ಸರಕುಗಳ ಮೇಲೆ ಭಾರಿ ಆಮದು ತೆರಿಗೆ ವಿಧಿಸುತ್ತವೆ. ಅಂಥ ದೇಶಗಳ ವಿರುದ್ಧ ಅಮೆರಿಕವೂ ಇನ್ನು ಮುಂದೆ ಭಾರಿ ಆಮದು ತೆರಿಗೆ ವಿಧಿಸಲಿದೆ ಎನ್ನುತ್ತಾರೆ ಟ್ರಂಪ್. ಇನ್ನು ಹಲವು ವಸ್ತುಗಳ ಮೇಲೆ ಯಾವ ದೇಶ ಎಂಬುದನ್ನೂ ನೋಡದೆ, ಸಾರ್ವತ್ರಿಕವಾಗಿಯೂ ಟ್ಯಾಕ್ಸ್ ಜಡಿಯಲು ಟ್ರಂಪ್ ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ತೆರಿಗೆ ಆದಾಯವನ್ನು ಹೆಚ್ಚಿಸುವುದು, ಅಮೆರಿಕದ ಉತ್ಪಾದನಾ ಕ್ಷೇತ್ರವನ್ನು ಸುಧಾರಿಸುವುದು, ವಿದೇಶಾಂಗ ನೀತಿಯ ಗುರಿಗಳನ್ನು ಸಾಧಿಸುವುದು ಟ್ರಂಪ್ ಆಶಯ. ಆದರೆ ಇದರಿಂದ ಜಾಗತಿಕ ವಾಣಿಜ್ಯ ವ್ಯವಹಾರಗಳು ಹಳಿ ತಪ್ಪುವ ಮತ್ತು ಸ್ವತಃ ಅಮೆರಿಕದ ಇಕಾನಮಿ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಮೋರ್ಗಾನ್ ಸ್ಟಾನ್ಲಿ ಸಂಸ್ಥೆಯ ಸಂಶೋಧನಾ ವರದಿಯ ಪ್ರಕಾರ, ಟ್ರಂಪ್ ತೆರಿಗೆಗಳು ಉನ್ನತ ಮಟ್ಟದ್ದಾಗಿದ್ದು, ಅಮೆರಿಕದ ಕಂದಾಯ ಸಂಗ್ರಹವನ್ನು ಹೆಚ್ಚಿಸಲಿದೆ. ಈಗಿನ ಸರಾಸರಿ 2.2% ತೆರಿಗೆಯು 10%-15%ಕ್ಕೆ ಏರಿಕೆಯಾಗಲಿದೆ. ಇದು ಅಮೆರಿಕದ ಇತಿಹಾಸದಲ್ಲಿಯೇ 1940ರಿಂದೀಚೆಗಿನ ಅತಿ ಹೆಚ್ಚಿನ ಸರಾಸರಿಯ ತೆರಿಗೆ ಆಗಲಿದೆ. ಎರಡನೇ ಜಾಗತಿಕ ಯುದ್ಧದ ಬಳಿಕದ ಅತಿ ದೊಡ್ಡ ಟಾರಿಫ್ ಏರಿಕೆ ಇದಾಗಿದೆ. ಈ ಮೂಲಕ ಅಮೆರಿಕವು 2026ರಿಂದ 2035ರ ಅವಧಿಯಲ್ಲಿ 3.53 ಟ್ರಿಲಿಯನ್ ಡಾಲರ್ ತೆರಿಗೆ ಆದಾಯವನ್ನು ಸಂಗ್ರಹಿಸುವ ನಿರೀಕ್ಷೆ ಇದೆ. ಹೀಗಿದ್ದರೂ, 2034ರ ವೇಳೆಗೆ ಅಮೆರಿಕದ ವಿತ್ತೀಯ ಕೊರತೆ ಕೂಡ 4.6 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ. ಆದ್ದರಿಂದ ವಿತ್ತೀಯ ಕೊರತೆಯ ಸಮಸ್ಯೆ ಅಮೆರಿಕಕ್ಕೆ ಪರಿಹಾರ ಆಗುವುದಿಲ್ಲ.
ಹಾಗಾದರೆ ಅಮೆರಿಕದ ಜನರಿಗೆ, ಗ್ರಾಹಕರಿಗೆ ಇದರಿಂದ ಪ್ರಯೋಜನ ಆಗಲಿದೆಯೇ? ಟ್ರಂಪ್ ಅವರು ಭವಿಷ್ಯದ ದಿನಗಳಲ್ಲಿ ತೆರಿಗೆ ಕಡಿಮೆಯಾಗಲಿದೆ ಎನ್ನುತ್ತಾರೆ. ಆದರೆ ಆಮದು ತೆರಿಗೆ ಹೆಚ್ಚುವುದರಿಂದ ಆಮದಾಗುವ ವಸ್ತುಗಳ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಿದೆ. ಕಂಪನಿಗಳಿಗೆ ಲಾಭಾಂಶ ಕಡಿಮೆಯಾಗಲಿದೆ. ಬೆಲೆ ಏರಿಕೆಯ ಪರಿಣಾಮ ಗ್ರಾಹಕರು ಖರ್ಚುಗಳನ್ನು ಮಾಡಲು ಹಿಂದೇಟು ಹಾಕಬಹುದು. ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಆಗ ಕಡಿಮೆಯಾಗುತ್ತದೆ. ಹೀಗೆ ಕೊಡು-ಕೊಳ್ಳುವಿಕೆಗಳ ಆರ್ಥಿಕ ವ್ಯವಹಾರಗಳು ಮುಗ್ಗರಿಸಿದರೆ, ಅಮೆರಿಕದಲ್ಲಿ ರಿಸೆಶನ್ ಅಥವಾ ಆರ್ಥಿಕ ಹಿಂಜರಿತ ಕೂಡ ಆಗಬಹುದು. ಅಮೆರಿಕದಲ್ಲಿ ಒಂದು ವೇಳೆ ರಿಸೆಶನ್ ಆದ್ರೆ, ಜಾಗತಿಕ ಮಟ್ಟದ ಆರ್ಥಿಕತೆಗೂ ಅದರದ್ದೇ ಆದ ಎಫೆಕ್ಟ್ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಟ್ರಂಪ್ ಅವರ ಟ್ರೇಡ್ ವಾರ್ ಪರಿಣಾಮ ಅಮೆರಿಕದ ಕಂಪನಿಗಳಿಗೆ ಕೂಡ ಹೊಡೆತ ಬೀಳಲಿದೆ. ಕಚ್ಚಾ ವಸ್ತುಗಳ ಆಮದು ತುಟ್ಟಿಯಾಗಲಿದೆ. ಕಾರ್ಪೊರೇಟ್ ಟ್ಯಾಕ್ಸ್ ರೆವೆನ್ಯೂ ಸಂಗ್ರಹ ಕೂಡ ಇಳಿಕೆಯಾಗುವ ನಿರೀಕ್ಷೆ ಇದೆ. ಟ್ರಂಪ್ ಟಾರಿಫ್ ವಾರ್ ಪರಿಣಾಮ ಅಮೆರಿಕಕ್ಕೆ ತೆರಿಗೆ ಸಂಗ್ರಹ ಹೆಚ್ಚಿಸುವುದಕ್ಕೊಂದು ಮೂಲ ಆಗಲಿದೆ ಎಂಬುದು ಬಿಟ್ಟರೆ, ಹಲವು ಸಮಸ್ಯೆಗಳೂ ಸೃಷ್ಟಿಯಾಗಲಿದೆ ಎಂದು ಮೋರ್ಗಾನ್ ಸ್ಟಾನ್ಲಿ ತಿಳಿಸಿದೆ. ಟ್ರಂಪ್ ಅವರ ಟ್ರೇಡ್ ಪಾಲಿಸಿಗಳು ಹೆಚ್ಚು ಜನಪ್ರಿಯ ಅಥವಾ ಪಾಪ್ಯುಲಿಸ್ಟ್ ಆಗಿವೆಯೇ ಹೊರತು ರಚನಾತ್ಮಕವಲ್ಲ ಎನ್ನುತ್ತಿದೆ ಮೋರ್ಗಾನ್ ಸ್ಟಾನ್ಲಿಯ ವರದಿ.
ಹಾಗಾದರೆ ಏಪ್ರಿಲ್ 2ರ ಬಳಿಕ ಯಾವೆಲ್ಲ ಸೆಕ್ಟರ್‌ಗಳ ಷೇರುಗಳ ಮೇಲೆ ಪ್ರಭಾವ ಬೀರಬಹುದು? ಷೇರು, ಮ್ಯೂಚುವಲ್ ಫಂಡ್ ಹೂಡಿಕೆದಾರರು ಗಮನಿಸಬೇಕಾಗಿರುವ ಸ್ಟಾಕ್ಸ್‌ಗಳು ಯಾವುದು? ನೋಡೋಣ.
ಟ್ರಂಪ್ ಅವರು ಭಾರತವನ್ನು " ಟಾರಿಫ್ ಕಿಂಗ್ʼ ಎಂದು ಟೀಕಿಸಿದ್ದಾರೆ. ಹೀಗಾಗಿ ಭಾರತದಿಂದ ಅಮೆರಿಕಕ್ಕೆ ಬರುವ ಉತ್ಪನ್ನಗಳ ಮೇಲೆ ತೆರಿಗೆ ಬೀಳುವುದು ಖಚಿತ. ಆದರೆ ಇದರ ಪರಿಣಾಮಗಳು, ಉಂಟಾಗಲಿರುವ ವ್ಯಾಪಾರ ನಷ್ಟಗಳ ಲೆಕ್ಕಾಚಾರ ಈಗ ನಡೆಯುತ್ತಿವೆ. ಒಂದೊಂದು ಸಂಶೋಧನಾ ವರದಿಗಳು ಒಂದೊಂದು ಲೆಕ್ಕವನ್ನು ಮುಂದಿಟ್ಟಿವೆ.
Emkay Global Financial services ಪ್ರಕಾರ ಅಮೆರಿಕವು ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 10%ರಿಂದ 25% ತನಕ ತೆರಿಗೆ ವಿಧಿಸಬಹುದು. ಇದರಿಂದಾಗಿ ಭಾರತದಿಂದ ಅಮೆರಿಕಕ್ಕೆ ರಫ್ತಿನಲ್ಲಿ 10 ಶತಕೋಟಿ ಡಾಲರ್ ಮೌಲ್ಯದ ತನಕ ವ್ಯಾಪಾರ ನಷ್ಟವಾಗುವ ಸಾಧ್ಯತೆ ಇದೆ. ಅಂದ್ರೆ ರುಪಾಯಿ ಲೆಕ್ಕದಲ್ಲಿ 8 ಲಕ್ಷದ 57 ಸಾವಿರ ಕೋಟಿ ರೂ. ಆಗಬಹುದು.
ಟ್ರಂಪ್ ಟಾರಿಫ್ ವಾರ್ ಪರಿಣಾಮ ಭಾರತದ ಯಾವ ಸೆಕ್ಟರ್ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು?
- ಆಟೊಮೊಬೈಲ್
- ಔಷಧಗಳ ಉತ್ಪಾದನೆ
- ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಟರ್ಬೈನ್, ಕಂಪ್ಯೂಟರ್, ಇತರ ಉಪಕರಣಗಳ ತಯಾರಿಕೆ
- ಜ್ಯುವೆಲ್ಲರಿ
- ಜವಳಿ, ಅಪಾರೆಲ್, ರಬ್ಬರ್, ಸೆರಾಮಿಕ್
ಟ್ರಂಪ್ ಟಾರಿಫ್ ಎದುರಿಸಲು ಭಾರತಕ್ಕಿರುವ ದಾರಿ ಯಾವುದು?
- ಅಮೆರಿಕದ ಜತೆಗೆ ನಿರಂತರ ಮಾತುಕತೆ, ಮಾತುಕತೆಗಳು ಫಲಪ್ರದವಾದರೆ ಟಾರಿಫ್ ವಾರ್ ಪ್ರಭಾವವೂ ಉಪಶಮನವಾಗಲಿದೆ.
- ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವುದು.
- ರಕ್ಷಣಾ ಸಹಕಾರ ಮತ್ತು ಖರೀದಿ ಒಪ್ಪಂದಗಳನ್ನು ಏರ್ಪಡಿಸುವುದು.
- ಅಮೆರಿಕ ಮೂಲದ ಕೃಷಿ ಮತ್ತು ಆಹಾರ ವಸ್ತುಗಳಿಗೆ ಆಮದು ತೆರಿಗೆ ಇಳಿಸುವುದು.
- ವಿದೇಶಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಇಳಿಸುವುದು.
- ವಿಶಾಲ ದೇಶೀಯ ಮಾರುಕಟ್ಟೆಯ ಶ್ರೀರಕ್ಷೆ
ಭಾರತವು ಅಮೆರಿಕಕ್ಕೆ ಆಟೊಮೊಬೈಲ್ಸ್‌ನಿಂದ ಔಷಧಗಳ ತನಕ ಹಲವು ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಆಟೊಮೊಬೈಲ್ಸ್ ಬಿಡಿಭಾಗಗಳ ಉದ್ದಿಮೆಗೆ ಹಿನ್ನಡೆಯಾಗಬಹುದು. ಜತೆಗೆ ಫಾರ್ಮಾಸ್ಯುಟಿಕಲ್ಸ್, ಎಲೆಕ್ಟ್ರಾನಿಕ್ಸ್, ಜ್ಯುವೆಲ್ಲರಿ, ಜವಳಿ ವಲಯದ ಮೇಲಾಗುವ ಪರಿಣಾಮ ಕಾದು ನೋಡಬೇಕಾಗಿದೆ.
2024ರಲ್ಲಿ ಭಾರತವು ಅಮೆರಿಕಕ್ಕೆ 77.5 ಶತಕೋಟಿ ಡಾಲರ್ ಮೌಲ್ಯದ ರಫ್ತು ಮಾಡಿತ್ತು. 40.7 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಅಮೆರಿಕದಿಂದ ಆಮದು ಮಾಡಿಕೊಂಡಿತ್ತು.
ತಜ್ಞರ ಪ್ರಕಾರ ಕೆಲವು ಏರಿಳಿತಗಳು ಅಲ್ಪಾವಧಿಯದ್ದಾಗಿರಬಹುದು. ಆಯಾ ವಲಯಗಳ ಪ್ರಾಬಲ್ಯದಿಂದ ಕೆಲ ಕಾಲ ಬಫರ್ ಝೋನ್ ಸಿಗುತ್ತದೆ. ಉದಾಹರಣೆಗೆ ಅಮೆರಿಕಕ್ಕೆ ಜೆನೆರಿಕ್ಸ್ ಔಷಧಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದ್ದರಿಂದ ಅದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ತೊಂದರೆಯಾಗದು.
ಫಾರ್ಮಾ ಸೆಕ್ಟರ್‌ನಲ್ಲಿ ಗಮನಿಸಬಹುದಾದ ಷೇರುಗಳು ಯಾವುದು ಎಂದರೆ- ಸನ್ ಫಾರ್ಮಾ, ಸಿಪ್ಲಾ, ಲುಪಿನ್, ಡಾ. ರೆಡ್ಡೀಸ್, ಡಿವೀಸ್ ಲ್ಯಾಬ್ಸ್.
ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಕಂಪನಿಗಳಾದ ಡಿಕ್ಸಾನ್ ಟೆಕ್ನಾಲಜೀಸ್, ಕೈನ್ಸ್ ಟೆಕ್ ಷೇರುಗಳನ್ನು ಗಮನಿಸಬಹುದು. ದೇಶೀಯವಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಹೆಚ್ಚಿಸಲಯ ಸರಕಾರ 25,000 ಕೋಟಿ ರೂ.ಗಳ ನೆರವನ್ನು ನೀಡುವ ನಿರೀಕ್ಷೆ ಇದೆ.
ಜ್ಯುವೆಲ್ಲರಿಗಳನ್ನು ರಫ್ತು ಮಾಡುವ ಸಂಸ್ಥೆಗಳ ಷೇರುಗಳ ಮೇಲೆ ಟ್ರಂಪ್ ಟಾರಿಫ್ ವಾರ್, ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮಲಬಾರ್ ಗೋಲ್ಡ್, ರಿನೈಸನ್ಸ್ ಜ್ಯುವೆಲ್ಲರಿ, ರಾಜೇಶ್ ಎಕ್ಸ್‌ಪೋರ್ಟ್ಸ್, ಕಲ್ಯಾಣ್ ಜ್ಯುವೆಲ್ಲರಿ ಷೇರುಗಳ ಏರಿಳಿತಗಳನ್ನು ಗಮನಿಸಬಹುದು. ಐಟಿ ಕ್ಷೇತ್ರದಲ್ಲಿ ಇನ್ಫೋಸಿಸ್, ಟಿಸಿಎಸ್ ಷೇರುಗಳಲ್ಲಿ ಏರಿಳಿತ ಸಂಭವಿಸುವ ನಿರೀಕ್ಷೆ ಇದೆ.
ಚೀನಾ, ಕೆನಡಾ ಮತ್ತು ಐರೋಪ್ಯ ಒಕ್ಕೂಟವು ಅಮೆರಿಕದ ಟಾರಿಫ್‌ಗೆ ಪ್ರತಿಯಾಗಿ ಅಮೆರಿಕದ ವಿರುದ್ಧ ಸುಂಕ ಹೆಚ್ಚಿಸುವುದಾಗಿ ತಿರುಗೇಟು ಕೊಟ್ಟಿವೆ. ಗೋಲ್ಡ್ ಮ್ಯಾನ್ ಸ್ಯಾಕ್ಸ್ ಅಮೆರಿಕದಲ್ಲಿ 2026ರಲ್ಲಿ ರಿಸೆಶನ್ ಸಾಧ್ಯತೆಯನ್ನು 20 ಪರ್ಸೆಂಟ್‌ನಿಂದ 35 ಪರ್ಸೆಂಟ್‌ಗೆ ಹೆಚ್ಚಿಸಿದೆ.
ಮೋರ್ಗಾನ್ ಸ್ಟ್ಯಾನ್ಲಿ ಪ್ರಕಾರ ಆಟೊಮೊಬೈಲ್ ಮತ್ತು ಆಟೊಮೊಬೈಲ್ಸ್ ಬಿಡಿ ಭಾಗಗಳ ಆಮದು ಮೇಲಿನ ಟ್ರಂಪ್ ತೆರಿಗೆ ಹೆಚ್ಚಳದಿಂದ ಜಪಾನ್ ಮತ್ತು ಕೊರಿಯಾ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಉಂಟಾಗಲಿದೆ.
ಕ್ರಿಸಿಲ್ ರೇಟಿಂಗ್ಸ್ ಪ್ರಕಾರ ಭಾರತದ ಕೆಮಿಕಲ್ಸ್ ಸೆಕ್ಟರ್ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಬಹುದು.
ಬಾರ್ ಕ್ಲೇಸ್ ಪ್ರಕಾರ ಭಾರತದ ಎಲೆಕ್ಟ್ರಿಕಲ್ ಯಂತ್ರೋಪಕರಣಗಳು, ಬಿಡಿಭಾಗಗಳು, ಕೃಷಿ ಉತ್ಪನ್ನಗಳು, ಜ್ಯುವೆಲ್ಲರಿ, ಔಷಧ ವಲಯದ ಮೇಲೆ ಪರಿಣಾಮ ಬೀರಬಹುದು. ಹೀಗಿದ್ದರೂ, ಇನ್ನೂ ಕೆಲವು ಅಂಶಗಳು ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕದ ಹೊಸ ಟಾರಿಫ್‌ಗಳು ಪ್ರಾಡಕ್ಟ್ ಲೆವೆಲ್‌ನಲ್ಲಿ ಇರಲಿದೆಯೋ, ಸೆಕ್ಟರ್ ಅಥವಾ ರಾಷ್ಟ್ರದ ಮಟ್ಟದಲ್ಲಿ ಇರಲಿವೆಯೋ ಎಂಬುದು ಸ್ಪಷ್ಟವಾಗಿಲ್ಲ.
ಭಾರತವು ಅಮೆರಿಕಕ್ಕೆ 30 ಉತ್ಪನ್ನಗಳ ಕೆಟಗರಿಯಲ್ಲಿ ರಫ್ತು ಮಾಡುತ್ತದೆ. ಇದರಲ್ಲಿ 24 ಉತ್ಪನ್ನಗಳು ಇಂಡಸ್ಟ್ರಿ ಸೆಕ್ಟರ್‌ನದ್ದಾಗಿದ್ದರೆ, 6 ಕೃಷಿ ಕ್ಷೇತ್ರದ್ದಾಗಿದೆ. ಭಾರತವು ಮೀನು, ಮಅಂಸ, ಸಂಸ್ಕರಿಸಿದ ಸೀಫುಡ್, ಸೀಗಡಿಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ. ಸಂಸ್ಕರಿಸಿದ ಆಹಾರ, ಸಕ್ಕರೆ, ಕೊಕ್ಕೊ, ಧಾನ್ಯಗಳು, ತರಕಾರಿಗಳು, ಸಂಬಾರ ಪದಾರ್ಥಗಳನ್ನು ರಫ್ತು ಮಾಡುತ್ತದೆ. ಡೇರಿ ಪದಾರ್ಥಗಳನ್ನೂ ರಫ್ತು ಮಾಡುತ್ತದೆ.