ತಿರುವನಂತಪುರಂ: ಮಲಯಾಳಂ (Malayalam) ನಟ ಉನ್ನಿ ಮುಕುಂದನ್‌ರ (Unni Mukundan) 2024ರ ಆಕ್ಷನ್ ಥ್ರಿಲ್ಲರ್ ‘ಮಾರ್ಕೋ’ (Marco), ಭಾರತೀಯ ಚಿತ್ರರಂಗದ ಅತಿ ಹಿಂಸಾತ್ಮಕ ಚಿತ್ರಗಳಲ್ಲಿ (Violent Indian Films) ಒಂದೆಂದು ಪರಿಗಣಿತವಾಗಿ, ತೀವ್ರ ವಿವಾದವನ್ನು ಎಬ್ಬಿಸಿತ್ತು. ಅಭಿಮಾನಿಗಳು ಈ ಚಿತ್ರದ ಸೀಕ್ವೆಲ್‌ಗಾಗಿ ಕಾತುರದಿಂದ ಕಾಯುತ್ತಿದ್ದರೆ, 37 ವರ್ಷದ ನಟ ಈಗ ‘ಮಾರ್ಕೋ 2’ ಸಿನಿಮಾ ಮಾಡುತ್ತಿಲ್ಲ ಎಂದು ಘೋಷಿಸಿದ್ದಾರೆ. ಮಾರ್ಕೋ ಚಿತ್ರದಲ್ಲಿ ಅತಿಯಾದ ಹಿಂಸಾಚಾರ ತೋರಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಶನಿವಾರ, ಉನ್ನಿ ಮುಕುಂದನ್ ತಮ್ಮ ತೂಕ ಇಳಿಸಲು ಶ್ರಮಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಒಬ್ಬ ಅಭಿಮಾನಿ ‘ಮಾರ್ಕೋ 2’ ಯಾವಾಗ ಬಿಡುಗಡೆಯಾಗಲಿದೆ ಎಂದು ಕೇಳಿದಾಗ, “ಸಹೋದರ, ಕ್ಷಮೆಯಿರಲಿ, ಮಾರ್ಕೋ ಸರಣಿಯನ್ನು ಮುಂದುವರಿಸುವ ಯೋಜನೆಯನ್ನು ಕೈಬಿಟ್ಟಿದ್ದೇನೆ. ಚಿತ್ರದದಲ್ಲಿ ಹಿಂಸಾಚಾರ ಜಾಸ್ತಿಯಾಗಿದೆ. ಮಾರ್ಕೋಗಿಂತ ದೊಡ್ಡ ಮತ್ತು ಉತ್ತಮವಾದದ್ದನ್ನು ತರಲು ಪ್ರಯತ್ನಿಸುತ್ತೇನೆ. ಪ್ರೀತಿ ಮತ್ತು ಸಕಾರಾತ್ಮಕತೆಗೆ ಧನ್ಯವಾದಗಳು” ಎಂದು ಉತ್ತರಿಸಿದ್ದಾರೆ.
ಈ ಹಿಂದೆ ವಿಮರ್ಶೆಗೆ ಪ್ರತಿಕ್ರಿಯಿಸಿದ್ದ ಉನ್ನಿ ಮುಕುಂದನ್ “ಮಾರ್ಕೋ ಸಿನಿಮಾದ ಉದ್ದೇಶ ಹಿಂಸೆಯನ್ನು ಪ್ರಚೋದಿಸುವುದಲ್ಲ. ಬದುಕುವುದೇ ನಮ್ಮ ಅಂತಿಮ ಗುರಿ. ತೆರೆಯ ಮೇಲೆ ಹಿಂಸೆ ತೋರಿಸಲು ಇದು ಸಮರ್ಥನೆಯಲ್ಲ, ಆದರೆ ಸಮಾಜದಲ್ಲಿ ಹಿಂಸೆ ಇದೆ ಎಂಬ ಸತ್ಯವನ್ನು ನಿರಾಕರಿಸಲಾಗದು ಎಂದಿದ್ದರು.
ಈ ಸುದ್ದಿಯನ್ನೂ ಓದಿ: Unni Mukundan: ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್ ಕಸಿದುಕೊಂಡ ʼಮಾರ್ಕೋʼ ಚಿತ್ರದ ನಾಯಕ
ಮಾರ್ಕೋದಲ್ಲಿ ಕಾಣಿಸಿದ ‘ರಕ್ತ’ ವಾಸ್ತವವಾಗಿ ಸಕ್ಕರೆಯಿಂದ ಕೂಡಿದ ರಾಸಾಯನಿಕ ಮಿಶ್ರಣವಾಗಿತ್ತು. ಚಿತ್ರೀಕರಣ ಮುಗಿಯುವ ವೇಳೆಗೆ ಸುಮಾರು 300 ಲೀಟರ್ ಈ ಮಿಶ್ರಣವನ್ನು ಬಳಸಲಾಗಿತ್ತು ಎಂದು ಉನ್ನಿ ಮುಕುಂದನ್ ತಿಳಿಸಿದ್ದರು. “ಇದು ಸಕ್ಕರೆಯಿಂದ ತುಂಬಿತ್ತು. ಮಧುಮೇಹಿಗಳು ಇಂತಹ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಬಾರದು, ಏಕೆಂದರೆ ಇದು ತುಂಬಾ ಸಿಹಿಯಾಗಿತ್ತು” ಎಂದು ತಮಾಷೆಯಾಗಿ ಹೇಳಿದ್ದರು. ‘ಮಾರ್ಕೋ’ ಚಿತ್ರದಲ್ಲಿ ಸಿದ್ದಿಕ್, ಜಗದೀಶ್, ಕಬೀರ್ ದುಹಾನ್ ಸಿಂಗ್, ಅಭಿಮನ್ಯು, ಶಮ್ಮಿ ತಿಲಕನ್, ಆನ್ಸನ್ ಪೌಲ್, ಇಶಾನ್ ಶೌಕತ್ ಮತ್ತು ಯುಕ್ತಿ ತರೇಜಾ ಇದ್ದರು.