Unni Mukundan: ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್ ಕಸಿದುಕೊಂಡ ʼಮಾರ್ಕೋʼ ಚಿತ್ರದ ನಾಯಕ
ಮಲಯಾಳಂನ ಖ್ಯಾತ ನಟ ಉಣ್ಣಿ ಮುಕುಂದನ್ ಅವರು ಸೆಲ್ಫಿ ಕೇಳಲು ಬಂದ ಅಭಿಮಾನಿಯ ಬಳಿ ದುರ್ವರ್ತನೆ ತೋರಿದ ವಿಡಿಯೊ ವೈರಲ್ ಆಗಿದೆ. ಅವರು ಅಭಿಮಾನಿಯ ಮೊಬೈಲ್ ಕಿತ್ತು ಕೋಪದಿಂದ ಕಿಸೆಯೊಳಗೆ ಹಾಕಿಕೊಂಡಿರುವ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ.

Unni Mukundan

ನವದೆಹಲಿ: ಸಿನಿಮಾ ನೋಡುವ ಅಭಿಮಾನಿಗಳಿಗೆ ತಮ್ಮ ಪ್ರೀತಿಯ ಸ್ಟಾರ್ ನಟ ನಟಿಯರ ಜತೆ ಸೆಲ್ಫಿ ತೆಗೆಸಿಕೊಳ್ಳಬೇಕು ಎಂಬ ಆಸೆ ಇರುವುದು ಸಹಜ. ಇಂತಹ ಸ್ಟಾರ್ ನಟರು ಸಾರ್ವಜನಿಕ ಸ್ಥಳದಲ್ಲಿ ಕಾಣಸಿಕೊಂಡಾಗ ಅಭಿಮಾನಿಗಳು ಸೆಲ್ಫಿಗಾಗಿ ಮುಗಿದು ಬೀಳುತ್ತಾರೆ. ಇಂತಹ ಸನ್ನಿವೇಶವನ್ನು ಕೆಲವು ಕಲಾವಿದರು ನಾಜೂಕಾಗಿ ನಿಭಾಯಿಸಿದರೆ ಇನ್ನು ಕೆಲವರು ಸಾರ್ವಜನಿಕವಾಗಿಯೇ ತಮ್ಮ ಸಿಟ್ಟು ಹೊರ ಹಾಕಿಬಿಡುತ್ತಾರೆ. ಇದೀಗ ಮಲಯಾಳಂ ಖ್ಯಾತ ನಟ ಉಣ್ಣಿ ಮುಕುಂದನ್ (Unni Mukundan) ಅವರು ಸೆಲ್ಫಿ ಕೇಳಲು ಬಂದ ಅಮಾನಿಯ ಬಳಿ ದುರ್ವರ್ತನೆ ತೋರಿದ ಸುದ್ದಿ ಸದ್ದು ಮಾಡುತ್ತಿದೆ. ಸೆಲ್ಫಿ ಕೇಳಿದ ಅಭಿಮಾನಿಯ ಮೊಬೈಲ್ ಕಿತ್ತು ಕೋಪದಿಂದ ಅವರು ತಮ್ಮ ಕಿಸೆಯೊಳಗೆ ಹಾಕಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟನಿಗೆ ಇಷ್ಟೊಂದು ದುರಹಂಕಾರ ಇರಬಾರದು ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಮಾಲಿವುಡ್ ನಟ ಉಣ್ಣಿ ಮುಕುಂದನ್ ಅಭಿನಯದ ʼಮಾರ್ಕೋʼ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲೀಸ್ಟ್ ಗೆ ಸೇರಿದೆ. ಈ ಸಿನಿಮಾದ ಮೂಲಕ ಮುಕುಂದನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇದರ ಬೆನ್ನಲ್ಲೆ ಇವರ ನಟನೆಯ ಮತ್ತೊಂದು ಸಿನಿಮಾ ಮಲಯಾಳಂನ ʼಗೆಟ್ ಸೆಟ್ ಬೇಬಿʼ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ನಟ ಉಣ್ಣಿ ಮುಕುಂದನ್ ಮಾಲ್ ಒಂದಕ್ಕೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಸೆಲ್ಫಿ ಕೇಳಲು ಬಂದ ಅಭಿಮಾನಿಯೊಬ್ಬರ ಮೇಲೆ ಫುಲ್ ಗರಂ ಆಗಿದ್ದಾರೆ.
ಘಟನೆ ವಿವರ
ʼಗೆಟ್ ಸೆಟ್ ಬೇಬಿʼ ಸಿನೆಮಾ ಪ್ರಚಾರ ಮಾಡುವ ಸಂದರ್ಭದಲ್ಲಿ ನಟ ಉಣ್ಣಿ ಮುಕುಂದನ್ ಜತೆ ಅಭಿಮಾನಿಯೊಬ್ಬರು ಫೋಟೊ ತೆಗೆಯಲು ಮುಂದಾಗಿದ್ದಾರೆ. ನಟ ಮುಕುಂದನ್ ಮುಖದ ಸಮೀಪಕ್ಕೆ ಬಂದು ಆತ ಫೋಟೊ ತೆಗೆಯಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ನಟ ಮುಕುಂದನ್ ತಾಳ್ಮೆ ಕಳೆದುಕೊಂಡು ಅಭಿಮಾನಿಯ ಫೋನ್ ಕಸಿದು ತನ್ನ ಜೇಬಿಗೆ ಹಾಕಿಕೊಂಡು ಕೋಪದಿಂದ ವರ್ತಿಸಿದ್ದಾರೆ. ಇದನ್ನು ಕಂಡು ಅಭಿಮಾನಿ ಕೂಡ ಕಕ್ಕಾಬಿಕ್ಕಿಯಾಗಿ ತನ್ನ ಫೋನ್ ಮರಳಿಸುವಂತೆ ಮನವಿ ಮಾಡಿದ್ದಾನೆ. ಕೊನೆಗೆ ಮೊಬೈಲ್ ಫೋನ್ ಮರಳಿ ಲಭಿಸಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಉಣ್ಣಿ ಮುಕುಂದರ್ ಅವರ ಈ ರೀತಿಯ ವರ್ತನೆ ಸರಿಯಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನು ಓದಿ: Tumkur News: 89ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ
ಉಣ್ಣಿ ಮುಕುಂದನ್ ಅವರಿಗೆ ಯಶಸ್ಸು ನೆತ್ತಿಗೇರಿದೆ, ಈ ರೀತಿಯ ದುರಹಂಕಾರ ವರ್ತಿಸಬಾರದಿತ್ತು ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಿಮ್ಮ ಸಿನಿಮಾದ ಯಶಸ್ಸನ್ನು ಸಂಭ್ರಮಿಸಲು ಅಭಿಮಾನಿಗಳು ಬೇಕು. ಆದರೆ ಆಭಿಮಾನಿಗಳ ಜತೆ ಈ ರೀತಿಯ ವರ್ತನೆ ಸರಿಯೇ? ಈ ನಡೆ ಬದಲಿಸಿಕೊಳ್ಳಿ ಎಂದು ಗರಂ ಆಗಿದ್ದಾರೆ.
ವಿನಯ್ ಗೋವಿಂದ್ ನಿರ್ದೇಶನದ ʼಗೆಟ್ ಸೆಟ್ ಬೇಬಿʼ ಸಿನೆಮಾ ತೆರೆಕಂಡು 3 ದಿನಗಳಲ್ಲಿ 1.22 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ನಟನ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದು, ಚಿತ್ರದ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಬೀಳಬಹುದಾ ಎನ್ನುವ ಅನುಮಾನ ಕಾಡುತ್ತಿದೆ.