NITI Aayog: 179 ಸಮುದಾಯಗಳನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ ನೀತಿ ಆಯೋಗದ ಸಮಿತಿ
NITI Aayog: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಮಾನವ ಶಾಸ್ತ್ರೀಯ ಸಮೀಕ್ಷೆ ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಮೊದಲ ಬಾರಿಗೆ ಭಾರತದಾದ್ಯಂತ 268 ಡಿನೋಟಿಫೈಡ್, ಅರೆ ಅಲೆಮಾರಿ ಮತ್ತು ಅಲೆಮಾರಿ ಬುಡಕಟ್ಟುಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿದೆ. ನೀತಿ ಆಯೋಗವು ಕಡೆಗಣಿಸಲ್ಪಟ್ಟ 179 ಸಮುದಾಯಗಳನ್ನು ಕೇಂದ್ರ ಮಟ್ಟದಲ್ಲಿ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಪಟ್ಟಿಗಳಿಗೆ ಸೇರಿಸಲು ಶಿಫಾರಸು ಮಾಡಿದೆ.
ಹೊಸದಿಲ್ಲಿ: ಭಾರತೀಯ ಮಾನವ ಶಾಸ್ತ್ರೀಯ ಸಮೀಕ್ಷೆ (Anthropological Survey of India-AnSI) ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆಗಳು (Tribal Research Institutes-TRIs) ಮೊದಲ ಬಾರಿಗೆ ಭಾರತದಾದ್ಯಂತ 268 ಡಿನೋಟಿಫೈಡ್, ಅರೆ ಅಲೆಮಾರಿ ಮತ್ತು ಅಲೆಮಾರಿ ಬುಡಕಟ್ಟುಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿದೆ. ನೀತಿ ಆಯೋಗ (NITI Aayog) ನೇಮಿಸಿದ ಈ ಸಮಿತಿಯು 3 ವರ್ಷಗಳ ಸುದೀರ್ಘ ಅಧ್ಯಯನ ನಡೆಸಿ ಹಲವು ವರ್ಷಗಳಿಂದ ಕಡೆಗಣಿಸಲ್ಪಟ್ಟ 179 ಸಮುದಾಯಗಳನ್ನು ಕೇಂದ್ರ ಮಟ್ಟದಲ್ಲಿ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಪಟ್ಟಿಗಳಿಗೆ ಸೇರಿಸಲು ಶಿಫಾರಸು ಮಾಡಿದೆ.
ಈ ಪೈಕಿ 85 ಹೊಸ ಸೇರ್ಪಡೆಗಳಾಗಿವೆ. 46 ಸಮುದಾಯಗಳನ್ನು ಒಬಿಸಿ ಸ್ಥಾನಮಾನಕ್ಕಾಗಿ, 29 ಸಮುದಾಯಗಳನ್ನು ಎಸ್‌ಸಿ ಸ್ಥಾನಮಾನಕ್ಕಾಗಿ ಮತ್ತು 10 ಸಮುದಾಯಗಳನ್ನು ಎಸ್‌ಟಿ ಸ್ಥಾನಮಾನಕ್ಕಾಗಿ ಪ್ರಸ್ತಾವಿಸಲಾಗಿದೆ. 19 ಹೊಸ ಸೇರ್ಪಡೆಗಳೊಂದಿಗೆ ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದ್ದರೆ, ಆಂಧ್ರ ಪ್ರದೇಶ, ತಮಿಳುನಾಡು, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ತಲಾ 8 ಹೊಸ ಸೇರ್ಪಡೆಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.
ಇನ್ನು 9 ಸಮುದಾಯಗಳನ್ನು ಮರು ವರ್ಗೀಕರಣಕ್ಕಾಗಿ ಗುರುತಿಸಲಾಗಿದೆ. ಜತೆಗೆ ಇನ್ನೂ ಅನೇಕ ಸಮುದಾಯಗಳನ್ನು ಭಾಗಶಃ ಸೇರಿಸಲಾಗಿದೆ. 63 ಸಮುದಾಯಗಳು ಅಥವಾ ಶೇ. 20ಕ್ಕಿಂತ ಹೆಚ್ಚು ಸಮುದಾಯಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿದೆ. ಇವುಗಳನ್ನು ದೊಡ್ಡ ಗುಂಪುಗಳೊಂದಿಗೆ ವಿಲೀನಗೊಳಿಸಲಾಗುತ್ತದೆ ಅಥವಾ ಮರುನಾಮಕರಣ ಮಾಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Mahakumbh 2025 : ಮಹಾಕುಂಭ ಮೇಳಕ್ಕೆ ಕುಟುಂಬ ಸಮೇತ ಗೌತಮ್ ಅದಾನಿ ವಿಸಿಟ್; ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ
2020ರ ಫೆಬ್ರವರಿಯಂದು ಪ್ರಾರಂಭಿಸಲಾದ ಈ ಅಧ್ಯಯನ ಒಡಿಶಾ, ಗುಜರಾತ್ ಮತ್ತು ಅರುಣಾಚಲ ಪ್ರದೇಶದ ಟಿಆರ್‌ಐಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ.
4ನೇ ಮತ್ತು ಅಂತಿಮ ಹಂತವು 2022ರ ಆಗಸ್ಟ್‌ನಲ್ಲಿ ಕೊನೆಗೊಂಡಿತು. ಅದಾಗ್ಯೂ ಸಂಶೋಧನೆಗಳು ನೀತಿ ಆಯೋಗದ ಸಮಿತಿಯ ಪರಿಶೀಲನೆಯಲ್ಲಿವೆ. ಸಾಮಾಜಿಕ ನ್ಯಾಯ ಸಚಿವಾಲಯವು ತನ್ನ ಶಿಫಾರಸುಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.