ಗೋ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದ ಐಐಟಿ ಮದ್ರಾಸ್ ನಿರ್ದೇಶಕನ ಹೇಳಿಕೆಗೆ ವಿರೋಧ
V Kamakoti: ಗೋ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಹೇಳಿದ್ದು, ವಿಡಿಯೊ ವೈರಲ್ ಆಗಿದೆ. ಜತೆಗೆ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮತ್ತು ಡಿಎಂಕೆ ನಾಯಕರು ಟೀಕಿಸಿದ್ದಾರೆ. ಅಷ್ಟಕ್ಕೂ ವಿ. ಕಾಮಕೋಟಿ ಹೇಳಿದ್ದೇನು?
ಚೆನ್ನೈ: ಭಾರತೀಯ ಪರಂಪರೆಯಲ್ಲಿ ಗೋ ಮೂತ್ರಕ್ಕೆ ಧಾರ್ಮಿಕ ಮಹತ್ವವಿದೆ. ದೇಸಿ ಗೋ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಪ್ರಾಚೀನ ಭಾರತೀಯರು ನಂಬಿದ್ದರು. ಇದನ್ನು ಅನೇಕರು ಪ್ರತಿಪಾದಿಸುತ್ತಿದ್ದಾರೆ ಕೂಡ. ಇದೀಗ ಐಐಟಿ ಮದ್ರಾಸ್ ನಿರ್ದೇಶಕ (IIT Madras director) ವಿ. ಕಾಮಕೋಟಿ (V Kamakoti) ಅವರು ಗೋ ಮೂತ್ರವನ್ನು ಅದರ ಔಷಧೀಯ ಗುಣಕ್ಕಾಗಿ ಶ್ಲಾಘಿಸಿದ್ದು, ಸದ್ಯ ಈ ವಿಡಿಯೊ ವೈರಲ್ ಆಗಿದೆ.
ವಿಡಿಯೊದಲ್ಲಿ ಕಾಮಕೋಟಿ ಅವರು ಗೋ ಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಜೀರ್ಣಕಾರಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕರೆದಿದ್ದಾರೆ. ಅಲ್ಲದೆ ಗೋ ಮೂತ್ರವನ್ನು ಕರುಳಿನ ಸಿಂಡ್ರೋಮ್‌ನಂತಹ ರೋಗಗಳಿಗೆ ಔಷಧವಾಗಿಯೂ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
Madras #IIT Director V Kamakoti speaking in a Pongal festival in Chennai said diseases can be cured quickly by drinking cow urine.
— Suresh Kumar (@journsuresh) January 19, 2025
Kamakoti addedthat when his father had a fever, drank cow urine on the advice of a sanyasi and the fever subsided after fifteen minutes. he said… pic.twitter.com/JA40Qsicnv
ಜ. 15ರಂದು ಚೆನ್ನೈಯ ಗೋ ಸಂರಕ್ಷಣಾ ಶಾಲಾದಲ್ಲಿ ಮಾತನಾಡಿದ ಅವರು, ತೀವ್ರ ಜ್ವರ ಬಂದಾಗ ಸನ್ಯಾಸಿಯೊಬ್ಬರು ಗೋ ಮೂತ್ರ ಸೇವಿಸುವಂತೆ ನೀಡಿದ ಸಲಹೆಯನ್ನು ನೆನಪಿಸಿಕೊಂಡರು. ''ಒಮ್ಮೆ ನನ್ನ ತಂದೆ ಜ್ವರದಿಂದ ಬಳಲುತ್ತಿದ್ದರು. ಆ ವೇಳೆ ಸನ್ಯಾಸಿಯೊಬ್ಬರು ವೈದ್ಯರ ಬಳಿ ಹೋಗುವ ಬದಲು ಗೋ ಮೂತ್ರ ಸೇವಿಸುವಂತೆ ಸಲಹೆ ನೀಡಿದರು. ಕೂಡಲೇ ತಂದೆ ಗೋ ಮೂತ್ರ ಸೇವಿಸಿದರು. ಅಚ್ಚರಿ ಎಂಬಂತೆ ಕೆಲವೇ ಹೊತ್ತಲ್ಲಿ ಜ್ವರ ಇಳಿದು ಹೋಗಿತ್ತು. ನನಗೆ ಆ ಸಲಹೆ ನೀಡಿದ ಸನ್ಯಾಸಿಯ ಹೆಸರು ನೆನಪಿಲ್ಲʼʼ ಎಂದು ಕಾಮಕೋಟಿ ತಿಳಿಸಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ತೀವ್ರ ವಿರೋಧ
ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದೆ. ಜತೆಗೆ ಹಲವರು ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇಟ ಕಝಗಂ (DMK) ಈ ಹೇಳಿಕೆಗಾಗಿ ಕಾಮಕೋಟಿ ಅವರನ್ನು ಟೀಕಿಸಿದೆ. ಕಾಂಗ್ರೆಸ್ ಮುಖಂಡ ಕಾರ್ತಿ ಪಿ.ಚಿದಂಬರಂ ಮಾತನಾಡಿ, ಐಐಟಿ ಮದ್ರಾಸ್ ನಿರ್ದೇಶಕರು "ಹುಸಿ ವಿಜ್ಞಾನವನ್ನು ಹರಡುತ್ತಿದ್ದಾರೆ" ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ: Saif Ali Khan: ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಕೇಸ್; ಆರೋಪಿ 5 ದಿನ ಪೊಲೀಸ್ ಕಸ್ಟಡಿಗೆ
ಡಿಎಂಕೆ ನಾಯಕ ಟಿ.ಕೆ.ಎಸ್.ಇಳಂಗೋವನ್ ಕೂಡ ನಿರ್ದೇಶಕರ ಹೇಳಿಕೆಯನ್ನು ಖಂಡಿಸಿದರು ಮತ್ತು ಅವರನ್ನು ಸಂಸ್ಥೆಯಿಂದ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. "ಕಾಮಕೋಟಿ ಅವರನ್ನು ಐಐಟಿಯಿಂದ ವರ್ಗಾಯಿಸಬೇಕು. ಐಐಟಿಯಲ್ಲಿದ್ದುಕೊಂಡು ಅವರುಏನು ಮಾಡುತ್ತಾರೆ? ಇದು ಎಂಜಿನಿಯರಿಂಗ್ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದೆ" ಎಂದು ಹೇಳಿದರು. ಅವರನ್ನು ಏಮ್ಸ್ ನಿರ್ದೇಶಕರನ್ನಾಗಿ ನೇಮಿಸಬೇಕು ಎಂದು ಸಲಹೆ ನೀಡಿದರು.