ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಾಪ್‌, ಸ್ಪಾಂಜ್‌ ಬಳಸಿ ಮೈದಾನ ಒಣಗಿಸಲು ಹರಸಾಹಸ; ಟ್ರೋಲ್‌ ಆದ ಪಾಕ್‌

Champions Trophy 2025: ವರದಿಗಳ ಪ್ರಕಾರ, ಕ್ರೀಡಾಂಗಣ ನವೀಕರಣ ಕಾರ್ಯಕ್ಕೆ ಪಿಸಿಬಿ 12.3 ಬಿಲಿಯನ್‌ ಪಾಕಿಸ್ತಾನಿ ರೂ. (ಅಂದಾಜು 383 ಕೋಟಿ) ಆಗಬಹುದು ಎಂದು ಅಂದಾಜಿಸಿತ್ತು. ಆದರೆ, ಈಗಾಗಲೇ 18 ಬಿಲಿಯನ್‌ ಪಾಕಿಸ್ತಾನಿ ರೂ (ಅಂದಾಜು 561 ಕೋಟಿ) ಖರ್ಚಾಗಿದ್ದು, ಪಿಸಿಬಿ ಸಾಲದ ಸುಳಿಯಲ್ಲಿ ಸಿಲುಕಿದೆ ಎನ್ನಲಾಗಿದೆ.

ಕರಾಚಿ: ಹಾಗೂ ಹೀಗೂ ಸರ್ಕಸ್‌ ಮಾಡಿ ಮೂರೂ ಕ್ರೀಡಾಂಗಣಗಳ ನವೀಕರಣ ಕಾರ್ಯವನ್ನು ಪೂರ್ತಿಗೊಳಿಸಿ, ಹೋರಾಡಿ ಆತಿಥ್ಯದ ಹಕ್ಕು ಉಳಿಸಿಕೊಂಡ ಪಾಕ್‌ ಕ್ರಿಕೆಟ್‌ ಮಂಡಳಿಯ ನಿಜ ಬಣ್ಣ ಇದೀಗ ಬಯಲಾಗಿದೆ. ಸ್ವತಃ ಪಾಕ್‌ ಕ್ರಿಕೆಟ್‌ ಅಭಿಮಾನಿಗಳೇ ಆಕ್ರೋಶ ಹೊರಹಾಕಿದ್ದಾರೆ. ಶುಕ್ರವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಮಳೆಯಿಂದ ಆಸ್ಟ್ರೇಲಿಯಾ ಮತ್ತು ಅಫಘಾನಿಸ್ತಾನ ನಡುವಣ ಪಂದ್ಯ ರದ್ದಾಗಿತ್ತು. ಮಳೆ ನಿಂತರೂ ಕೂಡ ಇಲ್ಲಿನ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣದಿಂದ ನೀರು ಮೈದಾನದಿಂದ ಹೊರಹಾಕಲು ಸಾಧ್ಯವಾಗದೆ ಪಂದ್ಯ ರದ್ದುಕೊಂಡಿತ್ತು. ಮೈದಾನ ಸಿಬ್ಬಂದಿಗಳು ಮಾಪ್‌ಗಳು ಮತ್ತು ಸ್ಪಾಂಜುಗಳನ್ನು ಸಹ ಬಳಸಿ ನೀರು ಒಣಗಿಸಲು ಪ್ರಯತ್ನಿಸಿದರು. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಕಲತಾಣದಲ್ಲಿ ವೈರಲ್‌ ಆಗಿದೆ.

ಮಾರ್ಚ್‌ 5 ರಂದು ಲಾಹೋರ್‌ನಲ್ಲಿ ನಡೆಯುವ ಸೆಮಿ ಫೈನಲ್‌ ಪಂದ್ಯಕ್ಕೂ ಮಳೆ ಬಂದರೆ ಏನು ಗತಿ ಎಂದು ಕೆಲವರು ಪಿಸಿಬಿಗೆ ಪ್ರಶ್ನೆ ಮಾಡಿದ್ದಾರೆ. ದುಬೈನಲ್ಲಿ ಪಂದ್ಯಾವಳಿಯನ್ನು ನಡೆಸುವ ಅವಕಾಶ ಇದ್ದರೂ ಕೂಡ ಇದನ್ನು ಕಡೆಗಣಿಸಿದ ಕ್ರಿಕೆಟ್‌ ಮಂಡಳಿಯ ಕೆಟ್ಟ ನಿರ್ಧಾರದಿಂದ ದೇಶದ ಹೆಸರಿಗೂ ಕಳಂಕ ಬರುವಂತಾಯಿತು ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



2021ರ ನವೆಂಬರ್‌ನಲ್ಲೇ 2025ರ ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಘೋಷಣೆಯಾಯಿತು. 2008ರಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ, 10 ವರ್ಷಕ್ಕೂ ಹೆಚ್ಚು ಕಾಲ ಪಾಕಿಸ್ತಾನಕ್ಕೆ ಯಾವ ವಿದೇಶಿ ತಂಡವೂ ಹೋಗಿರಲಿಲ್ಲ. ಪಂದ್ಯಗಳ ಕೊರತೆಯಿಂದಾಗಿ, ಪಾಕಿಸ್ತಾನದ ಕ್ರಿಕೆಟ್‌ ಕ್ರೀಡಾಂಗಣಗಳು ಪಾಳು ಬಿದ್ದ ಸ್ಥಿತಿ ತಲುಪಿದ್ದವು. ಐಸಿಸಿ ಟೂರ್ನಿಗೆ ಆತಿಥ್ಯ ನೀಡಬೇಕಿದ್ದರೆ ವಿಶ್ವ ದರ್ಜೆಯ ಕ್ರೀಡಾಂಗಣಗಳು ಬೇಕು ಎನ್ನುವುದನ್ನು ಅರಿತ ಪಿಸಿಬಿ ಲಾಹೋರ್‌, ರಾವಲ್ಪಿಂಡಿ ಹಾಗೂ ಕರಾಚಿ ಕ್ರೀಡಾಂಗಣಗಳ ನವೀಕರಣಕ್ಕೆ ಕೈಹಾಕಿತ್ತು. ದುಡ್ಡನ್ನು ನೀರಿನಂತೆ ಚೆಲ್ಲಿ ನವೀಕರಣ ಕಾರ್ಯ ಕೈಗೊಳ್ಳುತ್ತಿದ್ದಾಗ, ಟೂರ್ನಿ ಪಾಕಿಸ್ತಾನದ ಸ್ಥಳಾಂತರಗೊಳ್ಳಬಹುದು ಎನ್ನುವ ಸುದ್ದಿ ಪಿಸಿಬಿ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಹೋರಾಟ ನಡೆಸಿ ಆತಿಥ್ಯ ಹಕ್ಕು ಉಳಿಸಿಕೊಂಡರೂ, ಕ್ರೀಡಾಂಗಣಗಳ ನವೀಕರಣಕ್ಕೆ ಭಾರೀ ವೆಚ್ಚ ಮಾಡಿತ್ತು.



ವರದಿಗಳ ಪ್ರಕಾರ, ನವೀಕರಣ ಕಾರ್ಯಕ್ಕೆ ಪಿಸಿಬಿ 12.3 ಬಿಲಿಯನ್‌ ಪಾಕಿಸ್ತಾನಿ ರೂ. (ಅಂದಾಜು 383 ಕೋಟಿ) ಆಗಬಹುದು ಎಂದು ಅಂದಾಜಿಸಿತ್ತು. ಆದರೆ, ಈಗಾಗಲೇ 18 ಬಿಲಿಯನ್‌ ಪಾಕಿಸ್ತಾನಿ ರೂ (ಅಂದಾಜು 561 ಕೋಟಿ) ಖರ್ಚಾಗಿದ್ದು, ಪಿಸಿಬಿ ಸಾಲದ ಸುಳಿಯಲ್ಲಿ ಸಿಲುಕಿದೆ.

ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿದ್ದರೆ, ಪಿಸಿಬಿ ಮಾಡಿದ ವೆಚ್ಚ ಬಡ್ಡಿ ಸಮೇತ ವಸೂಲಿಯಾಗುತ್ತಿತ್ತು. ಆದರೆ, ತನ್ನ ತಂಡವನ್ನು ಕಳುಹಿಸಲ್ಲ ಎಂದು ಬಿಸಿಸಿಐ ಕಡ್ಡಿ ತುಂಡು ಮಾಡಿದ ರೀತಿ ಹೇಳಿದ್ದರಿಂದ ಪಿಸಿಬಿ ಅಧಿಕಾರಿಗಳಿಗೆ ಕನಸಿನಲ್ಲೂ ಸಾಲಗಾರರು ಕಾಡುತ್ತಿದ್ದರೂ ಅಚ್ಚರಿಯಿಲ್ಲ.