Tharun Sudhir: 'ಮಹಾನಟಿ' ಶೋ ವಿನ್ನರ್ ಪ್ರಿಯಾಂಕಾಗೆ ಒಲಿದ ಬಂಪರ್ ಚಾನ್ಸ್; ತರುಣ್ ಸುಧೀರ್ ಚಿತ್ರಕ್ಕೆ ನಾಯಕಿ
ಕ್ರೇಜಿ ಕ್ವೀನ್ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿರುವ ʼಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆʼ ಚಿತ್ರದ ನಾಯಕಿಯಾಗಿ ಮೈಸೂರಿನ ಪ್ರಿಯಾಂಕಾ ಆಚಾರ್ ಆಯ್ಕೆಯಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ನಿರ್ಮಾಣದ ಈ ಚಿತ್ರವನ್ನು ಪುನೀತ್ ರಂಗಸ್ವಾಮಿ ನಿರ್ದೇಶಿಸುತ್ತಿದ್ದಾರೆ.

ಪ್ರಿಯಾಂಕಾ ಆಚಾರ್.

ಬೆಂಗಳೂರು: ʼಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆʼಯ ನಾಯಕನಾಗಿ ಕ್ರೇಜಿ ಕ್ವೀನ್ ರಕ್ಷಿತಾ ತಮ್ಮ ರಾಣಾ (Rana) ಅವರನ್ನು ಪರಿಚಯಿಸಿದ್ದ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಈಗ ನಾಯಕಿಯನ್ನು ಘೋಷಿಸಿದ್ದಾರೆ. ʼಗುರು ಶಿಷ್ಯರುʼ ಸಿನಿಮಾ ನಿರ್ಮಿಸಿ ಯಶಸ್ಸು ಪಡೆದ ಬಳಿಕ ತರುಣ್, ಅಟ್ಲಾಂಟಾ ನಾಗೇಂದ್ರ ಎಂಬುವವರ ಜತೆಗೂಡಿ ನಿರ್ಮಿಸುತ್ತಿರುವ ಹೊಸ ಕಥೆಗೆ ಹೊಸ ನಾಯಕಿಯನ್ನು ಕರೆ ತಂದಿದ್ದಾರೆ.
ತರುಣ್ ಸುಧೀರ್ ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಎಂಬುವವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ನೈಜ ಘಟನೆಯ ಪ್ರೇಮಕಥೆಯಲ್ಲಿ ಮೈಸೂರಿನ ಪ್ರಿಯಾಂಕಾ ಆಚಾರ್ (Priyanka Achar) ನಾಯಕಿಯಾಗಿ ನಟಿಸುತ್ತಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ʼಮಹಾನಟಿʼ ಶೋ ವಿನ್ನರ್ ಆಗಿದ್ದ ಪ್ರಿಯಾಂಕಾ ಅವರು ತರುಣ್ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮಹಾನಟಿ ಶೋ ಜಡ್ಜ್ ಆಗಿದ್ದಾಗಲೇ ಪ್ರಿಯಾಂಕಾ ಅಭಿನಯವನ್ನು ತರುಣ್ ಸುಧೀರ್ ಮೆಚ್ಚಿಕೊಂಡಿದ್ದರು. ಇದೀಗ ಅವರದ್ದೇ ನಿರ್ಮಾಣದ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುವ ಬೊಂಬಾಟ್ ಚಾನ್ಸ್ ಪ್ರಿಯಾಂಕಾಗೆ ಸಿಕ್ಕಿದೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ನಟಿಯಬೇಕು ಎಂಬ ಕನಸಿತ್ತು. ಆ ಕನಸಿಗೆ ತರುಣ್ ಸಾಥ್ ಕೊಡುತ್ತಿದ್ದಾರೆ.
ತರುಣ್ ಸುಧೀರ್ ಹೊಸ ನಾಯಕಿಯರನ್ನು ಪರಿಚಯಿಸುವುದರಲ್ಲಿ ನಿಸ್ಸಿಮರು. ʼರಾಬರ್ಟ್ʼ ಚಿತ್ರದ ಮೂಲಕ ಆಶಾ ಭಟ್, ʼಕಾಟೇರʼ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಆರಾಧನ ರಾಮ್ ಅವರನ್ನು ನಾಯಕಿ ಆಗಿ ಕನ್ನಡ ಸಿನಿಮಾಪ್ರೇಮಿಗಳ ಎದುರು ತಂದಿದ್ದ ತರುಣ್ ಈಗ ಪ್ರಿಯಾಂಕಾ ಆಚಾರ್ ಅವರನ್ನು ತಮ್ಮದೇ ನಿರ್ಮಾಣದ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ಅದ್ವೈತ್ ಗುರುಮೂರ್ತಿ ಈ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Mr Rani Movie: ‘ಲಕ್ಷ್ಮಿ ನಿವಾಸ’ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ ಅಭಿನಯದ ‘ಮಿಸ್ಟರ್ ರಾಣಿ’ ಚಿತ್ರ ಫೆ.7ಕ್ಕೆ ರಿಲೀಸ್
2023ರಲ್ಲಿ ತೆರೆಕಂಡ ತರುಣ್ ನಿರ್ದೇಶನದ, ದರ್ಶನ್ ಅಭಿನಯದ ʼಕಾಟೇರʼ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಸದ್ಯ ತರುಣ್ ಯಾವ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳುತ್ತಿಲ್ಲ. ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.