ಅನಾರೋಗ್ಯದಿಂದ ಬಳಲುತ್ತಿರುವ ಶುಭಮನ್ ಗಿಲ್ ದುಲೀಪ್ ಟ್ರೋಫಿಯಿಂದ ಔಟ್?
ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಬರುವ 2025ರ ದುಲೀಪ್ ಟ್ರೋಫಿ ಟೂರ್ನಿಯಿಂದ ಹೊರ ನಡೆದಿದ್ದಾರೆಂದು ವರದಿಯಾಗಿದೆ. ಅವರ ಅನುಪಸ್ಥಿತಿಯಲ್ಲಿ ಅಂಕಿತ್ ಕುಮಾರ್ ಅವರು ಉತ್ತರ ವಲಯವನ್ನು ಮುನ್ನಡೆಸಲಿದ್ದಾರೆ. ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರು ಕೂಡ ಒಂದು ಪಂದ್ಯದ ಬಳಿಕ ಟೂರ್ನಿಯನ್ನು ತೊರೆಯಲಿದ್ದಾರೆ.

ದುಲೀಪ್ ಟ್ರೋಫಿ ಟೂರ್ನಿಯಿಂದ ಶುಭಮನ್ ಗಿಲ್ ಔಟ್!

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಗೂ ಮುನ್ನ ದುಲೀಪ್ ಟ್ರೋಫಿ (Duleep Trophy 2025) ಟೂರ್ನಿಯಲ್ಲಿ ಆಡಲು ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ (Shubman Gill) ಬಯಸಿದ್ದರು. ಆದರೆ, ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ದೇಶಿ ಟೂರ್ನಿಯಿಂದ ಹೊರ ನಡೆದಿದ್ದಾರೆಂದು ವರದಿಯಾಗಿದೆ. ಆಗಸ್ಟ್ 28 ರಂದು ಬೆಂಗಳೂರಿನ ಸೆಂಟರ್ ಎಕ್ಸಲೆನ್ಸ್ ಸೆಂಟರ್‌ನಲ್ಲಿ ದುಲೀಪ್ ಟ್ರೋಫಿ ಆರಂಭವಾಗಲಿದೆ. ಸದ್ಯ ಶುಭಮನ್ ಗಿಲ್ ಅವರು ಚಂಡೀಗಢದ ತಮ್ಮ ಮನೆಯಲ್ಲಿ ಅನಾರೋಗ್ಯದಿಂದ ಗುಣಮುಖರಾಗುತ್ತಿದ್ದಾರೆ.
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಉತ್ತರ ವಲಯ ತಂಡದ ನಾಯಕನಾಗಿ ನೇಮಕಗೊಂಡಿರುವ ಶುಭಮನ್ ಗಿಲ್ ಇತ್ತೀಚೆಗೆ ತಂಡದ ಭೌತಚಿಕಿತ್ಸಕರಿಂದ ವೈದ್ಯಕೀಯ ಮೌಲ್ಯಮಾಪನಕ್ಕೆ ಒಳಗಾಗಿದ್ದರು ಹಾಗೂ ಅವರ ಆರೋಗ್ಯ ವರದಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸಲ್ಲಿಸಲಾಗಿದೆ. ಶುಭಮನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ಉತ್ತರ ವಲಯ ತಂಡವನ್ನು ಅಂಕಿತ್ ಕುಮಾರ್ ಮುನ್ನಡೆಸುವ ಸಾಧ್ಯತೆ ಇದೆ. ಶುಭಮ್ ರೊಹಿಲ್ಲಾ ಅವರನ್ನು ಗಿಲ್ ಸ್ಥಾನದಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Asia Cup 2025: ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಸಂಜಯ್ ಮಾಂಜ್ರೇಕರ್ ಪ್ರತಿಕ್ರಿಯೆ!
ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರು ಭಾರತ ಏಷ್ಯಾ ಕಪ್ ತಂಡದಲ್ಲಿದ್ದಾರೆ. ಹಾಗಾಗಿ ಇವರು ಯುಎಇಗೆ ತೆರಳುವುದಕ್ಕೂ ಮುನ್ನ ಇವರಿಬ್ಬರೂ ಪೂರ್ವ ವಲಯ ವಿರುದ್ಧದ ಪಂದ್ಯಕ್ಕೆ ಮಾತ್ರ ಲಭ್ಯರಿದ್ದಾರೆ. ಇವರಿಬ್ಬರ ಸ್ಥಾನಕ್ಕೆ ಗುರ್ನೂರ್ ಬ್ರಾರ್ ಮತ್ತು ಅನುಜ್ ಥಾರ್ಕಲ್ ಅವರನ್ನು ಇಟ್ಟುಕೊಳ್ಳಲಾಗಿದೆ.
ದುಲೀಪ್ ಟ್ರೋಫಿ ಟೂರ್ನಿಗೆ ಉತ್ತರ ವಲಯ ತಂಡ: ಶುಭಮನ್ ಗಿಲ್ (ನಾಯಕ), ಶುಭಮ್ ಖಜೂರಿಯಾ, ಅಂಕಿತ್ ಕುಮಾರ್, ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಿಂಧು, ಸಹಿಲ್ ಲೊಟ್ರಾ, ಮಯಾಂಕ್ ದಾಗರ್, ಯುಧ್ವೀರ್ ಸಿಂಗ್ ಚರಕ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಷುಲ್ ಕಾಂಬೋಜ್, ಆಕಿಬ್ ನಬಿ, ಕನ್ಹಯ್ಯ ವಾಧವಾನ್ (ವಿ.ಕೀ).
ಮೀಸಲು ಆಟಗಾರರು: ಶುಭಮ್ ಅರೋರ (ವಿ.ಕೀ), ಜಸ್ಕರಣ್‌ವೀರ್ ಸಿಂಗ್ ಪಾಲ್, ರವಿ ಚೌವ್ಹಾಣ್, ಅಬಿದ್ ಮುಷ್ತಾಕ್, ನಿಶಾಂಕ್ ಬಿರ್ಲಾ, ಉಮರ್ ನಾಝಿರ್, ದಿವೇಶ್ ಶರ್ಮಾ
🚨 Shubman Gill likely to miss #DuleepTrophy after a bout of illness
— Cricbuzz (@cricbuzz) August 23, 2025
The Indian skipper is currently resting at his home in Chandigarh pic.twitter.com/uMbKdexF7Z
ಏಷ್ಯಾ ಕಪ್ ಆಡಲಿರುವ ಗಿಲ್
ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಗಾಗಿ ಭಾರತದ ಟಿ20 ತಂಡದ ಉಪನಾಯಕನಾಗಿ ಶುಭಮನ್ ಗಿಲ್ ಅವರನ್ನು ಇತ್ತೀಚೆಗೆ ನೇಮಿಸಲಾಗಿತ್ತು. ಭಾರತ ತಂಡ, ಸೆಪ್ಟೆಂಬರ್ 10ರ ಬುಧವಾರ ಯುಎಇ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಗಿಲ್, ಐದು ಟೆಸ್ಟ್‌ಗಳಲ್ಲಿ 75.40ರ ಸರಾಸರಿಯಲ್ಲಿ 754 ರನ್ ಗಳಿಸಿದ್ದರು. ಇದರಲ್ಲಿ ಅವರು ನಾಲ್ಕು ಶತಕಗಳನ್ನು ದಾಖಲಿಸಿದರು ಮತ್ತು ಒಂದೇ ಇಂಗ್ಲಿಷ್ ಸರಣಿಯಲ್ಲಿ 700 ರನ್‌ಗಳನ್ನು ದಾಟಿದ ಮೊದಲ ಏಷ್ಯಾದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದರು.