ಮೈಸೂರು: ಮೈಸೂರಿನಲ್ಲಿ ಘೋರ ಘಟನೆ ನಡೆದಿದ್ದು, ಮಹಿಳೆಯೊಬ್ಬರು 3 ವರ್ಷದ ಮಗನಿಗೆ ನೇಣು ಬಿಗಿದು ಕೊಂದ ಬಳಿಕ ತಾನೂ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮೈಸೂರಿನ ಮುರುಡನಹಳ್ಳಿಯಲ್ಲಿ ಘಟನೆ ನಡೆದಿದೆ. ದೀಪಿಕಾ (25), ಮಗ ಗಾನ್ವಿಕ್ (3) ಮೃತರು. ಆರು ವರ್ಷದ ಮಗಳು ಲೋಚನಾಳಿಗೂ ನೇಣು ಬಿಗಿಯಲು ತಾಯಿ ಯತ್ನಿಸಿದ್ದಾಳೆ. ಆದರೆ ಮಗಳು ಸಾವಿನಿಂದ ಪಾರಾಗಿದ್ದಾಳೆ. ಕೌಟುಂಬಿಕ ಕಾರಣಕ್ಕೆ ಬೇಸರಗೊಂಡು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರುಡನಹಳ್ಳಿ ನಿವಾಸಿ ಸ್ವಾಮಿ ಅವರ ಪತ್ನಿ ದೀಪಿಕಾ (25) ತನ್ನ ಮಗ ಗಾನ್ವಿಕ್‌ಗೆ ನೇಣು ಬಿಗಿದು ಕೊಂದು, ತಾನೂ ನೇಣು ಹಾಕಿಕೊಂಡಿದ್ದಾರೆ. 'ಪತಿ ನಗರದಲ್ಲಿ ಬಾಡಿಗೆ ಮನೆ ಮಾಡಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಮೃತರ ಸಹೋದರ ಮಹದೇವಸ್ವಾಮಿ ಜಯಪುರ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
ನಂಜನಗೂಡು ತಾಲೂಕು ಸಿದ್ದಯ್ಯನಹುಂಡಿ ಗ್ರಾಮದ ದೀಪಿಕಾ ಹಾಗೂ ಮುರಡನಹಳ್ಳಿ ನಿವಾಸಿ ಸ್ವಾಮಿ 2019ರಲ್ಲಿ ವಿವಾಹವಾಗಿದ್ದರು. ದಂಪತಿ ಮುರುಡನಹಳ್ಳಿಯಲ್ಲಿಯೇ ವಾಸವಿದ್ದರು. ಆದರೆ, ಕೆಲ ದಿನಗಳಿಂದೀಚಿಗೆ ನಾನು ಹಳ್ಳಿಯಲ್ಲಿ ಇರಲು ಆಗುತ್ತಿಲ್ಲ, ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ, ನಾವು ಅಲ್ಲಿಯೇ ವಾಸವಿರೋಣ ಎಂದು ಪತಿಯನ್ನು ಒತ್ತಾಯಿಸುತ್ತಿದ್ದರು. ಆದರೆ ಹಣಕಾಸಿನ ಸಮಸ್ಯೆ ಹಿನ್ನೆಲೆ ಸ್ವಲ್ಪ ದಿನ ಕಾಯುವಂತೆ ಸ್ವಾಮಿ ಪತ್ನಿಗೆ ಬುದ್ಧಿ ಹೇಳಿದ್ದರು. ದೀಪಿಕಾ ಕುಟುಂಬದವರು ಕೂಡ ಆಕೆಗೆ ಬುದ್ಧಿ ಹೇಳಿದ್ದರು. ಇದರಿಂದ ಬೇಸರಗೊಂಡು ಆಕೆ ಆ. 10 ರಂದು ಮಧ್ಯಾಹ್ನ ಮನೆಯಲ್ಲಿ ಪುತ್ರನಿಗೆ ನೇಣು ಬಿಗಿದು, ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನಲ್ಲಿ ಅನುಮಾನಾಸ್ಪದ ಸ್ಫೋಟ; ಬಾಲಕ ಸಾವು, 12 ಜನರ ಸ್ಥಿತಿ ಗಂಭೀರ

ಬೆಂಗಳೂರು: ವಿಲ್ಸನ್ ಗಾರ್ಡ್‌ನ ಚಿನ್ನಯ್ಯನ ಪಾಳ್ಯದ (Suspected Blast) ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತುವೊಂದು ಭಾರೀ ಸ್ಫೋಟಗೊಂಡಿದ್ದು, ಪರಿಣಾಮ ಬಾಲಕ ಮೃತಪಟ್ಟಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಮೃತ ಬಾಲಕನ್ನು ಮುಬಾರಕ್ (8) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಒಟ್ಟು 12 ಮಂದಿಗೆ ಗಾಯಗಳಾಗಿದ್ದು, 7 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ.
ಕಸ್ತೂರಮ್ಮ(35), ಸರಸಮ್ಮ(50), ಶಬೀರನಾ ಬಾನು(35), ಸುಬ್ರಮಣಿ(62), ಶೇಖ್ ನಜೀದ್ ಉಲ್ಲಾ(37), 8 ವರ್ಷದ ಬಾಲಕಿ ಫಾತಿಮಾ ಸೇರಿ 12 ಜನರಿಗೆ ಗಾಯಗಳಾಗಿದ್ದು, ಸಂಜಯ್ಗಾಂಧಿ ಮತ್ತು ಜಯನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. 8ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವ ಆಡುಗೋಡಿ ಠಾಣೆ ಪೊಲೀಸರು ಮೇಲ್ನೋಟಕ್ಕೆ ಸಿಲಿಂಡರ್ ಸ್ಟೋಟ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ.
ಗಾಯಾಳು ಕಸ್ತೂರಿಯ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಕಸ್ತೂರಿಗೆ 8 ವರ್ಷದ ಕಯಾಲ್ ಎಂಬಾ ಹೆಣ್ಣು ಮಗುವಿದೆ. ವಿಕ್ಟೋರಿಯಾ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮುಬಾರಕ್ ಬಾಲಕನ ಪಕ್ಕದ ಮನೆಯಲ್ಲಿ ಕಸ್ತೂರಿ ವಾಸವಿದ್ದರು. ಸ್ಫೋಟದ ತೀವ್ರತೆಗೆ ಜನ ಬೆಚ್ಚಿ ಬಿದ್ದಿದ್ದಾರೆ.
ಈ ಸುದ್ದಿಯನ್ನೂ ಓದಿ: IED Blast: ಒಡಿಶಾದಲ್ಲಿ ಮಾವೋವಾದಿಗಳಿಂದ ಐಇಡಿ ಸ್ಫೋಟ; ರೈಲ್ವೆ ಸಿಬ್ಬಂದಿ ಸಾವು
ಏಳು-ಎಂಟು ಗಂಟೆಗೆ ಸ್ಫೋಟ ಸಂಭವಿಸಿತು. ಏನಾಗಿದೆ ಅಂತಾನೆ ಗೊತ್ತಿಲ್ಲ. ದೊಡ್ಡ ಶಬ್ಧ ಬಂದಿತು. ಸಿಲಿಂಡರ್ ಸ್ಫೋಟ ಆಗಿದ್ದರೆ ಬೆಂಕಿ ಬರಬೇಕಿತ್ತು. ಬೆಂಕಿ ಬಂದಿಲ್ಲ ಏಕಾಏಕಿ ಅವಘಡ ಸಂಭವಿಸಿದೆ. ಕರೆಂಟ್ ಶಾಕ್‌ನಿಂದ ಹೀಗೆ ಆಗಿದ್ಯಾ ಅಥವಾ ಮೆಟ್ರೋ ಕಾಮಗಾರಿ ಇಲ್ಲಿ ನಡೆಯುತ್ತಿದೆ ಅದರಿಂದ ತೊಂದರೆಯಾಗಿದ್ಯಾ ಗೊತ್ತಾಗಿಲ್ಲ ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದ ಅನೇಕ ಜನರು ಲಾಲ್ ಬಾಗ್‌ನಲ್ಲಿ ಕೆಲಸ ಮಾಡುತ್ತಾರೆ. ಒಂದು ವೇಳೆ ಇಂದು ಕೆಲಸಕ್ಕೆ ಹೋಗದೆ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.