ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IED Blast: ಒಡಿಶಾದಲ್ಲಿ ಮಾವೋವಾದಿಗಳಿಂದ ಐಇಡಿ ಸ್ಫೋಟ; ರೈಲ್ವೆ ಸಿಬ್ಬಂದಿ ಸಾವು

ಒಡಿಶಾ-ಜಾರ್ಖಂಡ್‌ ಗಡಿಯ ಸಂದರ್‌ಗಢ್‌ ಜಿಲ್ಲೆಯಲ್ಲಿ ಭಾನುವಾರ (ಆಗಸ್ಟ್‌ 3) ಐಇಡಿ ಸ್ಫೋಟಗೊಂಡು ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಫೋಟದ ಹಿಂದೆ ಮಾವೋವಾದಿಗಳ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಮಾವೋವಾದಿಗಳಿಂದ ಐಇಡಿ ಸ್ಫೋಟ; ರೈಲ್ವೆ ಸಿಬ್ಬಂದಿ ಸಾವು

ಸಾಂದರ್ಭಿಕ ಚಿತ್ರ.

Ramesh B Ramesh B Aug 3, 2025 8:04 PM

ಭುವನೇಶ್ವರ: ಒಡಿಶಾ-ಜಾರ್ಖಂಡ್‌ ಗಡಿಯ ಸಂದರ್‌ಗಢ್‌ ಜಿಲ್ಲೆಯಲ್ಲಿ (Sundergarh district) ಭಾನುವಾರ (ಆಗಸ್ಟ್‌ 3) ಐಇಡಿ (Improvised Explosive Device) ಸ್ಫೋಟಗೊಂಡು ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ (IED blast). ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಫೋಟದ ಹಿಂದೆ ಮಾವೋವಾದಿಗಳ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರನ್ನು ಇಟುವ ಓರ್ಮನ್‌ (37) (Itua Oram) ಎಂದು ಗುರುತಿಸಲಾಗಿದೆ. ರೈಲ್ವೆ ಹಳಿಯಲ್ಲಿ ಮಾವೋವಾದಿಗಳು ಹುದುಗಿಸಿಟ್ಟ ಐಇಡಿ ಸ್ಫೋಟಗೊಂಡಿತು ಎಂದು ಮೂಲಗಳು ತಿಳಿಸಿವೆ.

ʼʼಸ್ಫೋಟದ ಸ್ಥಳವು ಒಡಿಶಾದ ಸುಂದರ್‌ಗಢ ಜಿಲ್ಲೆಯ ಕೆ. ಬಲಂಗ್ ಪೊಲೀಸ್ ಠಾಣೆಯ ರೆಂಜ್ಡಾ ನಿಲ್ದಾಣದಿಂದ ಕೆಲವು ಕಿಲೋ ಮೀಟರ್ ದೂರದಲ್ಲಿದೆ. ಮಾವೋವಾದಿಗಳ ಭದ್ರಕೋಟೆ ಎನಿಸಿಕೊಂಡಿರುವ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ದಟ್ಟವಾದ ಸಾರಂಡಾ ಕಾಡು ಸಮೀಪದಲ್ಲೇ ಇದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



ಈ ಸುದ್ದಿಯನ್ನೂ ಓದಿ: IED Blast: ಜಮ್ಮು-ಕಾಶ್ಮೀರದಲ್ಲಿ ಶಂಕಿತ ಐಇಡಿ ಸ್ಫೋಟ; ಇಬ್ಬರು ಸೈನಿಕರು ಹುತಾತ್ಮ

ಮಾವೋವಾದಿಗಳಿಗೆ ಬೆಂಬಲ ಸೂಚಿಸುವ ಪೋಸ್ಟರ್‌ ಲಭ್ಯ

ಮೃತ ಇಟುವ ಓರ್ಮನ್‌ ರೈಲ್ವೆಯ ಪ್ರಮುಖ ಹುದ್ದೆ ನಿಭಾಯಿಸುತ್ತಿದ್ದರು. ಸ್ಫೋಟ ನಡೆದ ಸಮೀಪದಲ್ಲೇ ಮಾವೋವಾದಿಗಳಿಗೆ ಬೆಂಬಲ ಸೂಚಿಸುವ ಪೋಸ್ಟರ್‌ ಲಭ್ಯವಾಗಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ಆರಂಭವಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಗಾಯಗೊಂಡ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ʼʼಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಐಇಡಿ ಸ್ಫೋಟ ಸಂಭವಿಸಿದ್ದು, ಇದರ ಪರಿಣಾಮವಾಗಿ ಆಗ್ನೇಯ ರೈಲ್ವೆ (SER) ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರಿಗೆ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆʼʼ ಎಂದು ಎಸ್‌ಪಿ ನಿತೇಶ್‌ ಹೇಳಿದ್ದಾರೆ. ʼʼಈ ಪ್ರದೇಶದಲ್ಲಿ ಮಾವೋವಾದಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂಬ ಮಾಹಿತಿ ಶನಿವಾರ ರಾತ್ರಿ 11:30ರ ಸುಮಾರಿಗೆ ಬಂದಿತ್ತುʼʼ ಎಂದಿದ್ದಾರೆ. ರೂರ್ಕೆಲಾ-ಬರ್ಸುವಾನ್-ರೆಂಜ್ಡಾ-ತೋಪದಿಹಿ-ಕರಂಪಡ ರೈಲು ಮಾರ್ಗವನ್ನು ಪ್ರಾಥಮಿಕವಾಗಿ ಖನಿಜ ಸಾಗಣೆಗೆ ಬಳಸಲಾಗುತ್ತಿದೆ.

ʼʼಬಿಮ್ಲಗಢ ವಿಭಾಗದ ಕರಂಪಡ ಮತ್ತು ರೆಂಜ್ಡಾವನ್ನು ಸಂಪರ್ಕಿಸುವ ರೈಲ್ವೆ ಹಳಿಗಳಲ್ಲಿ ಸ್ಫೋಟ ಸಂಭವಿಸಿದೆ. ಹಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಆದಾಗ್ಯೂ ಇದು ಲೂಪ್ ಲೈನ್ ಆಗಿರುವುದರಿಂದ ಯಾವುದೇ ಪ್ರಯಾಣಿಕ ರೈಲಿನ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲʼʼ ಎಂದು ಆಗ್ನೇಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

ಜುಲೈ 28ರಿಂದ ಆಗಸ್ಟ್ 3ರವರೆಗೆ ಹುತಾತ್ಮರ ವಾರ ಅಥವಾ 'ಶಾಹಿದ್ ಸಪ್ತಾಹ್' ಆಚರಿಸಲು ಮಾವೋವಾದಿಗಳು ಕರೆ ನೀಡಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ ಪ್ರಕಾರ, ಸ್ಫೋಟ ನಡೆದ ಸ್ಥಳವು ಸಾರಂಡಾ ಅರಣ್ಯ ವ್ಯಾಪ್ತಿಯಲ್ಲಿದೆ.

10 ಲಕ್ಷ ರೂ. ಪರಿಹಾರ

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಸ್ಫೋಟದಲ್ಲಿ ಮೃತಪಟ್ಟ ರೈಲ್ವೆ ಸಿಬ್ಬಂದಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ (CMRF) ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ (CMO) ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.