Whatsapp Group Admin: ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್‌ಗಳೇ, ನಿಮ್ಮ ಹೊಣೆ ಗೊತ್ತಿರಲಿ, ಇಲ್ಲವಾದರೆ ಜೈಲಿಗೆ ಹೋಗಬೇಕಾದೀತು!
ಅಡ್ಮಿನ್‌ಗಳು ತಮ್ಮ ಗ್ರೂಪ್ ಅಥವಾ ಪೇಜ್‌ಗಳ ಬಗ್ಗೆ ಎಚ್ಚರದಿಂದ ಇರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನು ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಇದರಲ್ಲಿ ಅಡ್ಮಿನ್ ಕೂಡಾ ಹೊಣೆಗಾರ. ಸದಸ್ಯರು ಮಾಡಿದ ತಪ್ಪಿಗೆ ಅಡ್ಮಿನ್ ಕೋರ್ಟ್ ಕಟಕಟೆಯಲ್ಲಿ ನಿಲ್ಲಬಾರದು ಎಂದಿದ್ದರೆ, ಈ ಅಂಶಗಳನ್ನು ಗಮನಿಸಿ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (Vinay Somaiah) ಆತ್ಮಹತ್ಯೆ (Self harming) ಪ್ರಕರಣ ಇದೀಗ ಭಾರಿ ಸುದ್ದಿಯಾಗುತ್ತಿದೆ. ಅವರು ಅಡ್ಮಿನ್ ಆಗಿದ್ದ ವಾಟ್ಸ್ಯಾಪ್ ಗ್ರೂಪ್ ಒಂದರಲ್ಲಿ ಯಾರೋ ಹಾಕಿದ ಆಕ್ಷೇಪಾರ್ಹ ಪೋಸ್ಟ್‌ನ ಪರಿಣಾಮ ವಿನಯ್ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ಇದರಿಂದ ಉಂಟಾಗಿದ್ದ ಮಾನಸಿಕ ಯಾತನೆಯಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ (Social media rules) ಅಡ್ಮಿನ್‌ಗಳ (WhatsApp group admin) ಜವಾಬ್ದಾರಿ ಕುರಿತು ಮಹತ್ವದ ಚರ್ಚೆಯಾಗುತ್ತಿದೆ.
ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ವೈಯಕ್ತಿಕ ತೇಜೋವಧೆ, ಆಕ್ಷೇಪಾರ್ಹ ಬರಹ, ಸುಳ್ಳು ಮಾಹಿತಿ ಹಂಚಿಕೊಳ್ಳುವವರ ವಿರುದ್ಧ ದೂರು ಸಲ್ಲಿಕೆಯಾಗುತ್ತಿದ್ದು, ಕೆಲವು ಪ್ರಕರಣಗಳಲ್ಲಿ ಅಡ್ಮಿನ್‌ಗಳಿಗೆ ಸಂಕಷ್ಟ ತಂದೊಡ್ಡುತ್ತಿವೆ. ವಿನಯ್ ಪ್ರಕರಣದ ಬೆನ್ನಲ್ಲೇ, ತುಂಬಾ ಗ್ರೂಪ್‌ಗಳಲ್ಲಿ ಅಡ್ಮಿನ್‌ಗಳನ್ನು ಹೊರತುಪಡಿಸಿ ಸದಸ್ಯರಿಗೆ ಸಂದೇಶ ಕಳುಹಿಸುವ ಆಯ್ಕೆಯನ್ನು ತೆಗೆಯಲಾಗಿದೆ. ಇನ್ನೂ ಕೆಲವು ಗ್ರೂಪ್‌ಗಳಲ್ಲಿ ಈ ಕುರಿತ ಎಚ್ಚರಿಕೆಗಳನ್ನು ಗ್ರೂಪ್ ಸದಸ್ಯರಿಗೆ ನೀಡಲಾಗುತ್ತಿದೆ.
ಇಲ್ಲಿ ಅಡ್ಮಿನ್‌ಗಳ ಪಾತ್ರವೇನು?
ಸೋಷಿಯಲ್ ಮೀಡಿಯಾದಲ್ಲಿ ಗ್ರೂಪ್ ಅಥವಾ ಪೇಜ್‌ಗಳ ನಿರ್ವಹಣೆ ಅಡ್ಮಿನ್‌ಗಳದ್ದಾಗಿರುತ್ತದೆ. ಇಲ್ಲಿ ಸದಸ್ಯರನ್ನು ಸೇರಿಸುವುದು ಮತ್ತು ತೆಗೆಯುವುದು ಮಾತ್ರವಲ್ಲದೇ ಸಂಬಂಧವಿಲ್ಲದ ಅಥವಾ ಹಾನಿಕಾರಕ ವಿಷಯಗಳನ್ನು ತೆಗೆದು ಹಾಕುವುದು. ಗ್ರೂಪ್‌ಗಳಲ್ಲಿನ ಚಟುವಟಿಕೆಗಳು ನಿಯಮಬದ್ಧವಾಗಿದೆಯೇ ಎಂದು ನೋಡಿಕೊಳ್ಳುವುದು ಅಡ್ಮಿನ್ ಜವಾಬ್ದಾರಿ. ಸೂಕ್ತ, ನಿಖರ ಮತ್ತು ಸಾಮಾಜಿಕ ಹೊಣೆಗಾರಿಕೆಯುಳ್ಳ ಮಾಹಿತಿಗಳನ್ನು ಮಾತ್ರ ಹಂಚಿಕೊಳ್ಳುತ್ತಿರುವ ಬಗ್ಗೆ ಅಡ್ಮಿನ್ ನೋಡಿಕೊಳ್ಳಬೇಕಿದೆ.
ಅಡ್ಮಿನ್‌ಗಳು ತಮ್ಮ ಗ್ರೂಪ್ ಅಥವಾ ಪೇಜ್‌ಗಳ ಬಗ್ಗೆ ಎಚ್ಚರದಿಂದ ಇರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನು ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಕೆಲ ವಿಷಯದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿರುವುದಿಲ್ಲ. ಪರೋಕ್ಷವಾಗಿ ತೇಜೋವಧೆ ಮಾಡುವ ಪ್ರಕರಣಗಳೂ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕಾನೂನು ರೂಪಿಸಬೇಕಿದೆ.
ಒಂದು ಕಾಲದಲ್ಲಿ ವಾಟ್ಸಪ್ ಗ್ರೂಪ್ ಸದಸ್ಯರು, ಅವಹೇಳನಕಾರಿ ಸಂದೇಶ, ದ್ವೇಷ ಪ್ರಚೋಚನೆ, ದೇಶದ್ರೋಹ, ಅನುಮತಿ ಇಲ್ಲದ ವ್ಯಕ್ತಿಗಳ ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಂಡ್ರೆ ಅಡ್ಮಿನ್ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿತ್ತು. ಈ ವ್ಯಾಖ್ಯಾನದ ಬಳಿಕ ದೇಶದ ಹಲವೆಡೆ ವಾಟ್ಸಪ್ ಅಡ್ಮಿನ್‌ಗಳ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. 2020ರಲ್ಲಿ 'ಮ್ಯಾನುಯಲ್ ವರ್ಸಸ್ ಕೇರಳ ಸರಕಾರʼ ಪ್ರಕರಣ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಎಲ್ಲಾ ಸಂದೇಶಗಳಿಗೂ ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಸ್ವತಃ ಅಡ್ಮಿನ್ ಈ ರೀತಿಯ ಮೆಸೇಜ್ ಹಾಕಿದರೆ ಅಥವಾ ಅವುಗಳಿಗೆ ಪ್ರತಿಕ್ರಿಯಿಸಿದರೆ ಮಾತ್ರ ಅಡ್ಮಿನ್ ಹೊಣೆಗಾರನಾಗುತ್ತಾನೆ ಎಂದು ನ್ಯಾಯಾಲಯ ಹೇಳಿದೆ.
ಅಡ್ಮಿನ್ ಯಾವಾಗ ಹೊಣೆ?
- ಜಾತಿ, ಧರ್ಮ, ಲಿಂಗ ಅಥವಾ ರಾಷ್ಟ್ರ ವಿರೋಧಿ ವಿಷಯಗಳು ಗ್ರೂಪ್‌ಗಳಲ್ಲಿ ಶೇರ್ ಆದರೆ ಅಡ್ಮಿನ್ ಕೂಡಾ ಕಾನೂನು ವಿಚಾರಣೆಗೆ ಒಳಪಡಬೇಕಾಗುತ್ತದೆ.
- ಗ್ರೂಪ್‌ಗಳಲ್ಲಿ ಪರಿಶೀಲಿಸದೇ ಸುಳ್ಳು ಸುದ್ದಿಗಳನ್ನು ಹಂಚಿದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಡ್ಮಿನ್ ಸಮ್ಮತಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
- ಪೋರ್ನೋಗ್ರಫಿ ಅಥವಾ ಅಶ್ಲೀಲ ವಿಷಯಗಳನ್ನು ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದ್ದು, ಇದರಲ್ಲಿ ಹಂಚಿದವರ ಜತೆ ಅಡ್ಮಿನ್‌ಗಳನ್ನೂ ಆರೋಪಿಗಳಾಗಿ ಪರಿಗಣಿಸಬಹುದು.
- ಅವಹೇಳನಕಾರಿ ಸಂದೇಶ, ದ್ವೇಷ ಪ್ರಚೋಚನೆ, ದೇಶದ್ರೋಹ, ಅನುಮತಿ ಇಲ್ಲದ ವ್ಯಕ್ತಿಗಳ ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಂಡ್ರೆ ಅಡ್ಮಿನ್ ಅವರಿಗೆ ಎಚ್ಚರಿಕೆ ನೀಡಬೇಕು.
-
ಸದಸ್ಯರಿಗೆ ಪ್ರಚೋದನಕಾರಿ/ತಿರುಚಿದ ವಿಡಿಯೋ ಅಥವಾ ಫೋಟೋ ಹಾಕಲು ಸೂಚಿಸಿದರೆ ಅಡ್ಮಿನ್ ಹೊಣೆಗಾರನಾಗುತ್ತಾನೆ.
- ಆಕ್ಷೇಪಾರ್ಹ ಸಂದೇಶ ಅಥವಾ ವಿಡಿಯೋ ಅಥವಾ ಫೋಟೋಗಳಿಗೆ ಅಡ್ಮಿನ್ ಲೈಕ್ ಅಥವಾ ಅವುಗಳ ಪರವಾಗಿ ಪ್ರತಿಕ್ರಿಯಿಸಿದ್ರೆ ನೇರ ಹೊಣೆಗಾರನಾಗುತ್ತಾನೆ.
- ತಮ್ಮ ಗ್ರೂಪ್‌ನಲ್ಲಿ ಬಂದ ಸಂದೇಶಗಳ ವಿರುದ್ಧ ದೂರು ದಾಖಲಾದ ಬಳಿಕ ಅವುಗಳನ್ನು ಡಿಲೀಟ್ ಮಾಡಿದರೆ ಮತ್ತು ಸದಸ್ಯರನ್ನು ರಿಮೂವ್ ಮಾಡಿದರೆ ಅಥವಾ ಇಡೀ ಗ್ರೂಪ್ ಡಿಲೀಸ್ ಮಾಡಿದರೆ ಅಡ್ಮಿನ್ ಜವಾಬ್ದಾರನಾಗುತ್ತಾನೆ.
ಇದನ್ನೂ ಓದಿ: Viral News: ವಾಟ್ಸ್‌ಆ್ಯಪ್ ಗ್ರೂಪ್‍ನಿಂದ ತೆಗೆದುಹಾಕಿದ್ದಕ್ಕೆ ಅಡ್ಮಿನ್‌ನನ್ನು ಗುಂಡಿಕ್ಕಿ ಕೊಂದ ಭೂಪ