Aghori: ಸ್ಮಶಾನದಲ್ಲೇ ವಾಸ, ಮೃತದೇಹಗಳೊಂದಿಗೆ ಸಹವಾಸ; ಇದು ಅಘೋರಿಗಳ ನಿಗೂಢ ಜಗತ್ತು
Aghori: ಮೈ ತುಂಬಾ ಬೂದಿ ಬಳಿದುಕೊಂಡು, ಕಪಾಲ ಕೈಯಲ್ಲಿ ಹಿಡಿದುಕೊಂಡು, ರುದ್ರಾಕ್ಷಿ ಧರಿಸಿಕೊಂಡು ಅಘೋರಿಗಳು ಕಾಣಿಸಿಕೊಳ್ಳುತ್ತಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಹಾಗಾದರೆ ಅವರ ನಿಗೂಢ ಜೀವನ ಶೈಲಿಗೆ ಕಾರಣವೇನು? ಅವರೆಲ್ಲಿ ವಾಸಿಸುತ್ತಾರೆ? ಇಲ್ಲಿದೆ ಸಮಗ್ರ ವಿವರ
ಲಖನೌ, ಜ. 17, 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (Maha Kumbh Mela 2025) ಆರಂಭವಾಗಿದೆ. ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಗೈಯ್ಯುತ್ತಿದ್ದಾರೆ. ಇವರ ಜತೆಗೆ ಸಾಧು-ಸಂತರು, ನಾಗ ಸನ್ಯಾಸಿಗಳು ಮತ್ತು ಅಘೋರಿಗಳು (Aghori) ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಈ ಪೈಕಿ ತಮ್ಮದೇ ಆದ ವೈಶಿಷ್ಟ್ಯ ಜೀವನ ವಿಧಾನದ ಮೂಲಕ ಅಘೋರಿಗಳು ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ವಿರಳವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಅವರು ತಮ್ಮದೇ ಆದ ಲೋಕದಲ್ಲಿರುತ್ತಾರೆ. ಹಾಗಾದರೆ ಯಾರು ಈ ಅಘೋರಿಗಳು? ಅವರ ನಿಗೂಢ ಶೈಲಿ ಹೇಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಯಾರು ಈ ಅಘೋರಿಗಳು?
ಅಘೋರಿಗಳು ಮೂಲತಃ ಶಿವ ಆರಾಧಕರು. ಇವರು ಕಪಾಲಿಕ ಸಂಪ್ರದಾಯವನ್ನು ಪಾಲಿಸುತ್ತಾರೆ. ಇದೇ ಕಾರಣಕ್ಕೆ ಅವರು ಸದಾ ಕಪಾಲ (ತಲೆ ಬುರುಡೆ)ವನ್ನು ಕೈಯಲ್ಲಿ ಹಿಡಿದು ಓಡಾಡುತ್ತಾರೆ. ಅಲ್ಲದೆ ಧರಿಸಿರುತ್ತಾರೆ. ಅಘೋರಿ ಎಂಬ ಪದ ಸಂಸ್ಕೃತದ ಅಘೋರ್‌ನಿಂದ ಉದ್ಭವವಾಗಿದೆ. ಹೀಗೆಂದರೆ ಭಯವಿಲ್ಲದವನು ಎಂದರ್ಥ. ಶಿವನ ಜತೆಗೆ ಇವರು ದೇವಿಯ ಉಗ್ರ ಅವತಾರವಾದ ಕಾಳಿಯನ್ನೂ ಆರಾಧಿಸುತ್ತಾರೆ. ಅಘೋರಿಗಳು ಇಡೀ ಶರೀರಕ್ಕೆ ಬೂದಿ ಮೆತ್ತಿಕೊಂಡಿರುತ್ತಾರೆ. ಅಲ್ಲದೆ ರುದ್ರಾಕ್ಷಿಯನ್ನು ಧರಿಸುತ್ತಾರೆ. ಜತೆಗೆ ಕಪಾಲ ಇದ್ದೇ ಇರುತ್ತದೆ.
ವೈಶಿಷ್ಟ್ಯಗಳು
* ಅಘೋರಿ ಸನ್ಯಾಸಿಗಳು ಏಕಾಂತದಲ್ಲಿ ವಾಸಿಸುತ್ತಾರೆ ಮತ್ತು ಸಾರ್ವಜನಿಕವಾಗಿ ವಿರಳವಾಗಿ ಕಂಡುಬರುತ್ತಾರೆ.
* ಸಾಮಾನ್ಯವಾಗಿ ಇವರು ಕುಂಭಮೇಳದಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದಾಗ ಮಾತ್ರ ಸಾರ್ವಜನಿಕವಾಗಿ ಕಂಡು ಬರುತ್ತಾರೆ.
* ಇವರು ಸ್ಮಶಾನ ಅಥವಾ ಜನ ವಿರಳ ಸ್ಥಳಗಳಲ್ಲಿ ವಾಸಿಸುತ್ತಾರೆ. ಆಧ್ಯಾತ್ಮಿಕ ಆಚರಣೆಗೆ ಅನುಕೂಲವಾಗುವಂತೆ ಅವರು ಇಂತಹ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ.
* ಅಘೋರಿ ಪಂಥದವರು 18ನೇ ಶತಮಾನದಲ್ಲಿ ವಾಸಿಸುತ್ತಿದ್ದ ಬಾಬಾ ಕಿನಾರಾಮ್ ಅವರ ಬೋಧನೆಗಳನ್ನು ಅನುಸರಿಸುತ್ತದೆ ಮತ್ತು ಇದು ತಮ್ಮ ಸಂಪ್ರದಾಯದ ಭಾಗವೆಂದು ಪರಿಗಣಿಸುತ್ತಾರೆ.
* ಅಘೋರಿ ಪಂಥವು ವಾರಣಾಸಿಯಲ್ಲಿ ಹುಟ್ಟಿಕೊಂಡು ಬಳಿಕ ದೇಶಾದ್ಯಂತ ಪಸರಿಸಿದೆ.
ಸ್ಮಶಾನದಲ್ಲೇ ವಾಸ
ಅಘೋರಿಗಳು ಆಗಾಗ್ಗೆ ತೀವ್ರವಾದ ಧ್ಯಾನದಲ್ಲಿ ತೊಡಗುತ್ತಾರೆ. ಶಿವನನ್ನು ಸರ್ವಜ್ಞ, ಸರ್ವವ್ಯಾಪಿ ಮತ್ತು ಸರ್ವಶಕ್ತ ಎಂಬುದು ಅವರ ನಂಬಿಕೆ. ಅಘೋರಿಗಳು ಜನನ ಮತ್ತು ಸಾವಿನ ಭಯವನ್ನು ಮೀರಿದ್ದಾರೆ. ಅದಕ್ಕಾಗಿಯೇ ಅವರಿಗೆ ಸ್ಮಶಾನಗಳಲ್ಲಿ ವಾಸಿಸಲು, ಶವದ ಮಧ್ಯೆ ಇರಲು ಯಾವುದೇ ಆತಂಕಗಳಿರುವುದಿಲ್ಲ.
ವಾಸ್ತವವಾಗಿ ಅವರು ಶವಗಳ ನಡುವೆ ರಾತ್ರಿ ಕಳೆಯಲು ಅಥವಾ ಅಂತ್ಯಕ್ರಿಯೆಯ ಚಿತೆಗಳಿಂದ ಭಾಗಶಃ ಸುಟ್ಟ ಮಾನವ ದೇಹದ ಮಾಂಸವನ್ನು ಸೇವಿಸಲು ಹಿಂಜರಿಯುವುದಿಲ್ಲ. ಚಿತೆಯಿಂದ ಅರ್ಧ ಸುಟ್ಟ ಮಾಂಸವನ್ನು ತಿನ್ನುವುದು ಅವರ ಸಂಪ್ರದಾಯದ ಒಂದು ಭಾಗವೆಂದು ಪರಿಗಣಿಸಲಾಗಿದೆ. ಭಯ ಅಥವಾ ಅಸಹ್ಯವಿಲ್ಲದೆ ಇದನ್ನು ಮಾಡಲು ಸಾಧ್ಯವಾದರೆ ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ ಹೊಂದುತ್ತಿದ್ದಾರೆ ಎಂಬ ಲೆಕ್ಕಾಚಾರವಿದೆ.
ಬಾಬಾ ಕೀನಾರಾಮ್ ಹಿನ್ನೆಲೆ
ಅಘೋರಿ ಪಂಥದ ಸ್ಥಾಪಕ ಎಂದೇ ಕರೆಯಲ್ಪಡುವ ಬಾಬಾ ಕೀನಾರಾಮ್ ಸುಮಾರು 150 ವರ್ಷಗಳ ಕಾಲ ಬದುಕಿದ್ದರು. 18ನೇ ಶತಮಾನದ ಮಧ್ಯಭಾಗದಲ್ಲಿ ಅವರು ನಿಧನ ಹೊಂದಿದರು. ಬಾಬಾ ಕೀನಾರಾಮ್ ಅವರನ್ನು ಶೈವ ಧರ್ಮದೊಳಗಿನ ಅಘೋರಿ ಪಂಥದ ಸ್ಥಾಪಕ ಎಂದು ಪರಿಗಣಿಸಲಾಗುತ್ತದೆ. ಶಿವನ ಅವತಾರವೆಂದು ಪೂಜಿಸಲ್ಪಡುವ ಅವರ ಜನನವು ಹಲವು ಪವಾಡಗಳೊಂದಿಗೆ ನಡೆಯಿತು ಎನ್ನಲಾಗುತ್ತಿದೆ.
ಬಾಬಾ ಕೀನಾರಾಮ್ 1658ರಲ್ಲಿ ಉತ್ತರ ಪ್ರದೇಶದ ರಾಮಗಢ ಗ್ರಾಮದಲ್ಲಿ ಕ್ಷತ್ರೀಯ ಕುಟುಂಬದಲ್ಲಿ ಜನಿಸಿದರು. ಅವರು ಚತುರ್ದಶಿಯಂದು ಜನ್ಮ ತಾಳಿದರು. ಶಿವನ ಆರಾಧನೆಗೆ ಶುಭವೆಂದು ಪರಿಗಣಿಸಲಾದ ಭಾದ್ರಪದ ಮಾಸದ 14ನೇ ದಿನವಾದ ಚತುರ್ದಶಿ ದಿನದಂದು ಅವರು ಜನಿಸಿದರು ಎನ್ನುತ್ತದೆ ಇತಿಹಾಸ. ಅವರು ಜನಿಸಿದಾಗಲೇ ಹಲ್ಲು ಮೊಳೆತಿತ್ತು. ಇದು ಅಪರೂಪದ ವಿದ್ಯಮಾನ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂಕೇತ ಎಂದು ನಂಬಲಾಗಿದೆ.
ನಿಗೂಢ ಪ್ರಪಂಚ
ಅಘೋರಿಗಳ ಬದುಕು ನಿಜಕ್ಕೂ ನಿಗೂಢ. ಅವರ ಬಗ್ಗೆ ಸ್ವಲ್ಪವೇ ಸ್ವಲ್ಪ ಮಾಹಿತಿ ಹೊರ ಜಗತ್ತಿಗೆ ತಿಳಿದಿದೆ. ಇದೇ ಕಾರಣಕ್ಕೆ ಅವರ ಬಗ್ಗೆ ಇಂದಿಗೂ ಜನ ಸಾಮಾನ್ಯರಲ್ಲಿ ಭಯವಿದೆ. ಅವರ ಜೀವನದ ತತ್ವವು ಸರಳ: "ನೀವು ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ನಮ್ಮ ವಿಮೋಚನೆಯ ಮಾರ್ಗವನ್ನು ಅನುಸರಿಸಲು ಅವಕಾಶ ಮಾಡಿಕೊಡಿʼʼ. ಒಟ್ಟಿನಲ್ಲಿ ಅವರು ಶಿವನ 5 ರೂಪಗಳಲ್ಲಿ ಒಂದಾದ ಅಘೋರವನ್ನು ಆರಾಧಿಸುವ ಮೂಲಕ ವಿಭಿನ್ನ ಜೀವನವನ್ನು ಅನುಸರಿಸುತ್ತಾರೆ.