ಹೊಸದಿಲ್ಲಿ: ನಾಳೆ (ಫೆ. 14) ಪ್ರೇಮಿಗಳ ದಿನ (Valentine’s Day). ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಪ್ರೇಮಿಗಳು ಈ ವಿಶೇಷ ದಿನದಂದು ಒಟ್ಟಿಗೆ ಸಮಯ ಕಳೆಯಲು ಬಯಸುತ್ತಾರೆ. ಇದಕ್ಕಿರುವ ಜನಪ್ರಿಯ ಆಯ್ಕೆ ಎಂದರೆ ಹೋಟೆಲ್(Lodge)ನಲ್ಲಿ ತಂಗುವುದು. ಅದಾಗ್ಯೂ ಮದುವೆಯಾಗದ ಪ್ರೇಮಿಗಳು ಹೋಟೆಲ್‌ನಲ್ಲಿ ಒಟ್ಟಿಗೆ ಕಂಡು ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇದಕ್ಕೆ ಕಾರಣ ಅನೇಕ. ಹೋಟೆಲ್ ವಾಸ್ತವ್ಯದ ಹೊರತಾಗಿ, ದಂಪತಿ ಅಜಾಗರೂಕತೆಯಿಂದ ಕಾನೂನು ತೊಂದರೆಯಲ್ಲಿ ಸಿಲುಕಿಕೊಳ್ಳಬಹುದಾದ ಹಲವು ಸಂದರ್ಭಗಳಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ವಕೀಲ ವಿಕಾಸ್ ನಾಗವಾನ್ ಕೆಲವೊಂದು ಸಲಹೆ ನೀಡಿದ್ದಾರೆ.
ಕಾನೂನು ಏನು ಹೇಳುತ್ತದೆ?
18 ವರ್ಷ ಪೂರ್ತಿಯಾದ ಯಾವುದೇ ಜೋಡಿ ಹೋಟೆಲ್‌ನಲ್ಲಿ ತಂಗಬಹುದು. ಆದರೆ ಈ ವೇಳೆ ಕೆಲವೊಂದು ಗುರುತಿನ ಚೀಟಿಯನ್ನು ಹಾಜರುಪಡಿಸಬೇಕಾಗುತ್ತದೆ. ಒಂದು ವೇಳೆ ಸೂಕ್ತ ದಾಖಲೆ ಒದಗಿಸದಿದ್ದರೆ ಪೊಲೀಸರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ವಿಕಾಸ್ ನಾಗವಾನ್ ಹೇಳಿದ್ದಾರೆ.
ಒಂದು ವೇಳೆ ಹೋಟೆಲ್ ಗುರುತಿನ ಚೀಟಿ ಕೇಳದಿದ್ದರೆ ಅದು ಕಾನೂನುಬಾಹಿರ ಚಟುವಟಿಕೆ ನಡೆಯುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಇದಕ್ಕಾಗಿ ಜೋಡಿ ತಮ್ಮ ವಾಸ್ತವ್ಯದ ಪುರಾವೆಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವಂತೆ ಅವರು ಸಲಹೆ ನೀಡಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಕಾನೂನುಬದ್ಧವಾಗಿ ಹೋಟೆಲ್ ಕೊಠಡಿಯನ್ನು ಬುಕ್ ಮಾಡಲು ಸಾಧ್ಯವಿಲ್ಲ. ಒಂದುವೇಳೆ ಗ್ರಾಹಕರು ಬುಕ್ ಮಾಡಲು ಮುಂದಾದರೆ ಅದನ್ನು ತಪ್ಪಿಸಬೇಕು. ಯಾಕೆಂದರೆ ಇದು ಮುಂದೆ ಕಾನೂನು ತೊಂದರೆಗೆ ಕಾರಣವಾಗಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಕೆಲವು ಹೋಟೆಲ್‌ಗಳು ಪ್ರೇಮಿಗಳ ದಿನಕ್ಕಾಗಿ ಗಂಟೆಗಳ ಅವಧಿಯಲ್ಲಿ ಬಾಡಿಗೆಗೆ ಲಭ್ಯ. ಆದರೆ ಇದು ಕಾನೂನುಬಾಹಿರ. ಹೀಗಾಗಿ ಇಂತಹ ಕ್ರಮ ಕಂಡುಬಂದರೆ ಈ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.
ವಿಕಾಸ್ ನಾಗವಾನ್ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ಪರಸ್ಪರ ಕೈ ಹಿಡಿಯುವುದು ಅಥವಾ ಸಂಗಾತಿಯನ್ನು ತೋಳುಗಳಲ್ಲಿ ಎತ್ತುವುದು ಕಾನೂನು ಪ್ರಕಾರ ತಪ್ಪಲ್ಲ. ಆದರೆ ಅತಿಯಾಗಿ ಅಶ್ಲೀಲವಾಗಿ ವರ್ತಿಸುವುದರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.
ಅಲ್ಲದೆ ಲಾಂಗ್ ಡ್ರೈವ್ ಸಮಯದಲ್ಲಿ ಕಾರಿನಲ್ಲಿ ದಂಪತಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದರೆ ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅನಗತ್ಯ ಕಾನೂನು ತೊಡಕುಗಳನ್ನು ತಪ್ಪಿಸಲು, ಸಾರ್ವಜನಿಕ ಸ್ಥಳಗಳಲ್ಲಿ ವರ್ತನೆಯ ಬಗ್ಗೆ ಜಾಗರೂಕರಾಗಿರಬೇಕು ಮತ್ತು ನಿಯಮಗಳ ಬಗ್ಗೆ ತಿಳಿದಿರಬೇಕು ಎಂದು ವಿಕಾಸ್ ನಾಗವಾನ್ ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಸಿಂಗಲ್ಸ್ ಖುಷಿ ಪಡೋ ಸುದ್ದಿ ಇದು... ಇಲ್ಲಿ ಸಂಗಾತಿ ಬಾಡಿಗೆಗಿದ್ದಾರೆ..!
ಪ್ರೇಮಿಗಳಿಬ್ಬರೂ ಜತೆಯಾಗಿದ್ದರೆ ಪ್ರತಿ ದಿನವೂ ಹಬ್ಬವೇ. ಆದರೂ ಈ ವ್ಯಾಲಂಟೈನ್ ಡೇಗಾಗಿ ಸಂಗಾತಿಗಳು ವರ್ಷ ಪೂರ್ತಿ ಎದುರು ನೋಡುತ್ತಾರೆ. ಈ ದಿನ ನಿಮ್ಮ ಸಂಗಾತಿಗೆ ರೊಮ್ಯಾಂಟಿಕ್ ಜಾಗದಲ್ಲಿ ಡಿನ್ನರ್, ಪಾರ್ಟಿ ಕೊಡಿಸಿ. ಇಲ್ಲವೇ ಲಾಂಗ್ ರೈಡ್ ಹೋಗಬಹುದು. ನಿಮ್ಮ ಸಂಗಾತಿಯನ್ನು ಭೇಟಿಯಾಗಿ ಈ ದಿನವನ್ನು ಇನ್ನಷ್ಟು ವಿಶೇಷ ಮತ್ತು ಸಿಹಿಯಾಗಿಸಿಕೊಳ್ಳಿ. ಆದರೆ ಗಮನಿಸಿ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ.