Viral News: ಸಿಂಗಲ್ಸ್ ಖುಷಿ ಪಡೋ ಸುದ್ದಿ ಇದು... ಇಲ್ಲಿ ಸಂಗಾತಿ ಬಾಡಿಗೆಗಿದ್ದಾರೆ..!
ವ್ಯಾಲೆಂಟೈನ್ಸ್ ಡೇ ಹತ್ತಿರವಾಗುತ್ತಿದೆ. ‘ಈ ಬಾರಿಯೂ ನಂಗೊಂದು ಪಾರ್ಟ್ನರ್ ಸಿಗ್ಲಿಲ್ಲ..’ ಎಂದು ನೀವು ಕೊರಗ್ತಿದ್ದೀರಾ.. ಹಾಗಾದ್ರೆ ಆ ಚಿಂತೆ ಬಿಡಿ! ಇದೀಗ ನಿಮಗೆ ಬೇಕಾದ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡನ್ನು ಬಾಡಿಗೆಗೆ ಪಡೆಯುವ ಅವಕಾಶವಿದೆ. ಇದು ಹಲವು ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದ್ದು, ನಮ್ಮಲ್ಲೂ ಇದೆಯಾ? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
![ವ್ಯಾಲೆಂಟೈನ್ಸ್ ಡೇ ಬರ್ತಿದೆ – ಇಲ್ಲೊಂದು ಸ್ಪೆಷಲ್ ಸರ್ವಿಸ್ ಇದೆ!](https://cdn-vishwavani-prod.hindverse.com/media/original_images/Valentine_couple_1.jpg)
ಸಾಂದರ್ಭಿಕ ಚಿತ್ರ
![Profile](https://vishwavani.news/static/img/user.png)
ನವದೆಹಲಿ: ತಮಗೊಪ್ಪುವ ಒಂದೊಳ್ಳೆ ಪಾರ್ಟ್ನರ್ ಅನ್ನು ಪಡೆಯುವುದು ಪ್ರತೀಯೊಬ್ಬ ಸಿಂಗಲ್ಸ್ ಗಳ ಕನಸೂ ಹೌದು. ಅದ್ರಲ್ಲೂ ಪ್ರೇಮಿಗಳ ದಿನ ಹತ್ತಿರ ಬಂದಾಗಲಂತೂ ಕೆಲವರು, ತಮಗೆ ಸರಿಯಾದ ಜೋಡಿ ಸಿಗ್ಲಿಲ್ವೇ ಎಂದು ಕೊರಗುವುದೂ ಇದೆ! ಇಂದಿನ ಈ ಡಿಜಿಟಲ್ ಯುಗದಲ್ಲಿ ಯುವ ಜನತೆ ತಮಗೊಪ್ಪುವ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರಾದ್ರೂ, ಕೆಲವವರು ಈ ಭಾಗ್ಯದಿಂದ ವಂಚಿತರಾಗಿರ್ತಾರೆ! ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಬರಲಿದೆ. ಈ ವ್ಯಾಲೆಂಟೈನ್ಸ್ ವೀಕ್ ಅನ್ನು ತಮ್ಮ ಜೀವನದಲ್ಲಿ ನೆನಪಿನಲ್ಲಿ ಉಳಿಯುವಂತೆ ಮಾಡಲು ಜೊಡಿ ಹಕ್ಕಿಗಳು ಹಲವು ರೀತಿಯ ಪ್ಲ್ಯಾನ್ ಮಾಡ್ತಿರ್ತಾರೆ. ತಮ್ಮ ಸಂಗಾತಿಗೊಪ್ಪುವ ಉಡುಗೊರೆಗಳು, ಸರ್ಪೈಸ್ ಗಿಫ್ಟ್ ಗಳು, ಪ್ರೀತಿಯ ಹಗ್.. ಇದೆಲ್ಲಾ ನಡೀತದೆ. ಆದ್ರೆ ಸಿಂಗಲ್ ರೋಮಿಯೋಗಳು ಏನ್ ಮಾಡೋದಪ್ಪ..!? ಅವರೀಗ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಅಂತವರಿಗೆಂದೇ ಸ್ಪೆಷಲ್ ಸರ್ವಿಸ್ ಒಂದು ಇದೀಗ ಪ್ರಾರಂಭವಾಗಿದೆ. ಅದೇ ಗರ್ಲ್/ಬಾಯ್ ಫ್ರೆಂಡ್ ಬಾಡಿಗೆ ಪಡೆದುಕೊಳ್ಳುವುದು!
ಯೆಸ್ ನಿವು ಕೇಳಿದ್ದು, ನಾವು ಹೇಳಿದ್ದು ಸರಿಯಾಗೇ ಇದೆ! ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್-ಫಾರ್-ಹೈರ್ ಸೇವೆಗಳು ಹಲವು ದೇಶಗಳಲ್ಲಿ ಲಭ್ಯವಿದೆ. ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಅವರು ನಿಮಗೆ ಒಡನಾಟವನ್ನು ಒದಗಿಸಲು ಮತ್ತು ನಿಮ್ಮ ಒಂಟಿತನವನ್ನು ಹೋಗಲಾಡಿಸಲು ನಿಮ್ಮ ಸೇವೆಗೆ ಸದಾ ಸಿದ್ಧರಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಗೆಳೆಯ-ಗೆಳತಿಯರನ್ನು ಬಾಡಿಗೆಗೆ ಪಡೆಯುವ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಕೆಲಸದ ಒತ್ತಡ, ಕಾಡುವ ಒಂಟಿತನ, ಆತಂಕದಂತಹ ಮಾನಸಿಕ ಸಮಸ್ಯೆಗಳಿಂದಾಗಿ ಇಂದಿನ ಯುವ ಜನತೆಯಲ್ಲಿ ಈ ಬೇಡಿಕೆ ಹೆಚ್ಚಾಗಿದೆ. ಈ ಸೇವೆಗಳು ಚೀನಾ, ಜಪಾನ್ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ತುಂಬಾನೇ ಜನಪ್ರಿಯವಾಗಿವೆ. ಈ ದೇಶಗಳಲ್ಲಿ ತಾತ್ಕಾಲಿಕ ಸಂಗಾತಿಯನ್ನು ಖರೀದಿಸಲು ಮತ್ತು ಅವರೊಂದಿಗೆ ಕೆಲವು ಗಂಟೆಗಳ ಕಾಲ ಸಮಯ ಕಳೆಯಲು ಅವಕಾಶವನ್ನು ನೀಡುತ್ತಾರೆ.
ಪ್ರತೀ ವರ್ಷ ವ್ಯಾಲೆಂಟೈನ್ಸ್ ವೀಕ್ ಬಂದ್ರೆ ಸಾಕು ಇಂತದ್ದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. "ಸಿಂಗಲ್ ಆಗಿದ್ದವರಿಗೆ ಇದು ಒಳ್ಳೆಯ ಅವಕಾಶ. ಈ ಮೂಲಕ ಪ್ರೇಮಿಗಳ ದಿನವನ್ನು ನಿಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಕಳೆಯಬಹುದು" ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಇನ್ನು ಯಾರೇ ಆಗಲಿ ಒಬ್ಬರನ್ನು ಪ್ರೀತಿಸುತ್ತಿದ್ದರೆ ಸಂಬಂಧದ ಉಳಿವಿಗೆ ತುಂಬಾ ಜವಾಬ್ದಾರಿಯುತದಿಂದ ಇರಬೇಕು. ಅವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಬೇಕು. ಆದಾಗ್ಯೂ, ಕೆಲವೊಮ್ಮೆ ಈ ಜವಾಬ್ದಾರಿಗಳು ತನ್ನ ಪಾರ್ಟ್ನರ್ ಮೇಲೆ ಒತ್ತಡ, ಭಯವನ್ನುಂಟುಮಾಡಬಹುದು. ಇಂತಹ ಸಮಯದಲ್ಲಿ, ಬಿಟ್ಟುಬಿಡುವುದು ಉತ್ತಮ ಎಂಬ ಆಲೋಚನೆಗಳು ಬರುತ್ತವೆ. ಇದೇ ಕಾರಣಕ್ಕೆ ಹೆಚ್ಚಿನವರು ಸಿಂಗಲ್ ಆಗಿಯೇ ಉಳಿದುಬಿಡುತ್ತಾರೆ. ಅಂತವರಿಗಾಗಿಯೇ ಇದೀಗ ಈ ಬಾಡಿಗೆಗೆ ಪಾರ್ಟ್ನರ್ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಇದನ್ನೂ ಓದಿ: Valentines Day 2024: ಇವತ್ತು ಕಿಸ್ ಡೇ- ನಲ್ಮೆಯ ಸಂಗಾತಿಗೆ ಚುಂಬಿಸುವ ಮುನ್ನ ಇದನ್ನು ತಿಳಿಯಿರಿ
ನೀವು ಸಂಗಾತಿಯನ್ನು ಬಾಡಿಗೆಗೆ ಪಡೆದರೆ ಟೆನ್ಷನ್ ಇರೋದಿಲ್ಲ! ಯಾವುದೇ ಕಮಿಟ್ಮೆಂಟ್ ಗಳೂ ಇರೋದಿಲ್ಲ! ಈ ಸಬಂಧವನ್ನು ಉಳಿಸಬೇಕು ಎನ್ನುವ ಹಪಾಹಪಿಯೂ ಇರೋದಿಲ್ಲ! ಹುಡುಗನಿಗಾಗಿ ಹುಡುಕುತ್ತಿರುವ ಹುಡುಗಿ, ಹುಡುಗಿಗಾಗಿ ಕಾಯುತ್ತಿರುವ ಹುಡುಗ... ಯಾರಾದರೂ ಬಾಡಿಗೆ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಆನಂದಿಸಬಹುದು. ಒಟ್ಟಿಗೆ ಊಟ ಮಾಡುವುದು, ಹೊರಗೆ ಹೋಗುವುದು ಅಥವಾ ಸಿನಿಮಾ ನೋಡಲು ಹೋಗುವುದು ಹೀಗೆ ಎಂಜಾಯ್ ಮಾಡಬಹುದು.
ಈ ಬಾಡಿಗೆ ಪ್ರೇಮಿಗಳ ಜನಕರೆಂಬ ಖ್ಯಾತಿ ಚೀನಾದವರದ್ದಾಗಿದೆ! 2018 ರಲ್ಲಿ ಚೀನಾದಲ್ಲಿ ಈ ವಿಶಿಷ್ಟ ಸರ್ವಿಸ್ ಪ್ರಾರಂಭವಾಯಿತು. ಆರಂಭದಲ್ಲಿ, ಗ್ರಾಹಕರನ್ನು ಆಕರ್ಷಿಸಲು ಶಾಪಿಂಗ್ ಮಾಲ್‌ಗಳು ಈ ವಿಶಿಷ್ಟ ಸೇವೆಯನ್ನು ಒದಗಿಸುತ್ತಿದ್ದವು. ಕೇವಲ 10 ರೂ.ಗಳಿಗೆ ಬಾಡಿಗೆ ಸಂಗಾತಿಯೊಂದಿಗೆ 20 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ನಡೆಸಬಹುದಾದ ಸೇವೆಯನ್ನು ಅಲ್ಲಿ ನೀಡಲಾಗಿತ್ತು ಎಂದು ವರದಿಯಾಗಿದೆ. ಅಂದಿನಿಂದ, ಸೇವೆಗಳು ಕ್ರಮೇಣ ಹೆಚ್ಚುತ್ತಿವೆ. ಚಾಟ್‌ಗಳಿಂದ ಪ್ರಾರಂಭವಾದ ಸೇವೆಗಳು ಈಗ ಡೇಟಿಂಗ್‌ಗೆ ವಿಸ್ತರಿಸಿವೆ. ಇನ್ನು, ಇತ್ತೀಚೆಗೆ ಈ ಪೃವೃತ್ತಿಯಲ್ಲಿ ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಎಲ್ಲವೂ ಬಾಡಿಗೆಗೆ ಸಿಗೋ ಸಮಯ ಬಂದಿದೆ. ಮುಂದೊಂದು ದಿನ, ಹೆಂಡತಿ ಮಕ್ಕಳೂ ಬಾಡಿಗೆಗಿದ್ದಾರೆ ಎಂದು ಬೋರ್ಡ್ ಹಾಕದಿದ್ರೆ ಸಾಕು ಮಾರಾಯ್ರೆ..!