ಬೆಂಗಳೂರು: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಅವರ ವಿವಾಹ ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿ ನೆರವೇರಿದೆ. ರೋಷನ್ (Roshan) ಜತೆ ಅನುಶ್ರೀ ಸಪ್ತಪದಿ ತುಳಿದಿದ್ದು, ಈ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿ ಶುಭ ಹಾರೈಸಿದರು (Anchor Anushree Marriage). ಇವರಿಬ್ಬರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಅನುಶ್ರೀ, ತಮ್ಮನ್ನು ಒಂದುಗೂಡಿಸಿದ್ದು ಪುನೀತ್ ರಾಜ್‌ಕುಮಾರ್ ಎಂದು ಭಾವುಕರಾಗಿ ನುಡಿದರು.
‘ʼಹಾಗೆ ನೋಡಿದರೆ ನಮ್ಮದು ಸಿಂಪಲ್ ಲವ್ ಸ್ಟೋರಿ. ಮೊದಲು ನಾವಿಬ್ಬರು ಫ್ರೆಂಡ್ಸ್ ಆಗಿದ್ದೆವು. ಬಳಿಕ ನನಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟ ಆದೆ. ಹೀಗಾಗಿ ಮದುವೆಯಾಗಲು ನಿರ್ಧರಿಸಿದೆವು. ರೋಷನ್ ಕೂಡ ಅಪ್ಪು ಅವರನ್ನು ಬಹಳ ಇಷ್ಟಪಡುವವರು. ನಾವು ಮೊದಲು ಭೇಟಿಯಾಗಿದ್ದು ಪುನೀತ ಪರ್ವ ಕಾರ್ಯಕ್ರಮದಲ್ಲಿ. ಒಂದು ಲೆಕ್ಕದಲ್ಲಿ ಅಪ್ಪು ಅವರೇ ನಮ್ಮನ್ನು ಸೇರಿಸಿದ್ದಾರೆ’ʼ ಎಂದು ಅನುಶ್ರೀ ಹೇಳಿದರು.
ಈ ಸುದ್ದಿಯನ್ನೂ ಓದಿ: Anchor Anushree And Roshan Marriage: ಅನುಶ್ರೀಗೆ ರೋಷನ್ ಪರಿಚಯವಾಗಿದ್ದು ಹೇಗೆ? ಸೀಕ್ರೆಟ್ ರಿವೀಲ್ ಮಾಡಿದ ನಿರ್ದೇಶಕ ತರುಣ್ ಸುಧೀರ್
ʼʼಮದುವೆ ಸುಂದರವಾಗಿ, ಸರಳವಾಗಿ ನೆರವೇರಿದೆ. ಬಹಳ ಕಡಿಮೆ ಜನರ ಸಮ್ಮುಖದಲ್ಲಿ ನಮ್ಮಿಬ್ಬರ ವಿವಾಹ ಆಗಬೇಕು ಎಂಬುದು ಆಸೆಯಾಗಿತ್ತು. ರೋಷನ್ ರಾಮಮೂರ್ತಿ ಕುಶಾಲ ನಗರ ಮೂಲದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು’ʼ ಎಂದು ತಿಳಿಸಿದರು. ʼʼಅಪ್ಪು ಪರವಾಗಿ ಮದುವೆ ಮಾಡಿಸಿದ್ದು, ಅರೇಂಜ್ಮೆಂಟ್ ಮಾಡಿದ್ದು, ಇದನ್ನೆಲ್ಲ ಮಾಡಿದ್ದು ವರುಣ್. ಅವರಿಗೆ ನನ್ನ ಧನ್ಯವಾದಗಳು’ʼ ಎಂದು ಅನುಶ್ರೀ ಹೇಳಿದ್ದಾರೆ.
ರೋಷನ್ ತಿಳಿಸಿದ್ದೇನು?
ʼʼ5 ವರ್ಷದಿಂದ ಅನುಶ್ರೀ ಪರಿಚಯ. ಕಳೆದ 3 ವರ್ಷದಿಂದ ಆಪ್ತರಾದೆವು. ದೊಡ್ಮನೆ ಸೊಸೆ ಶ್ರೀದೇವಿ ಬೈರಪ್ಪ ನನ್ನ ಬಾಲ್ಯ ಸ್ನೇಹಿತೆ. ಅವರಿಂದಾಗಿ ಅನುಶ್ರೀ ಪರಿಚಯ ಆಯಿತು. ಅನುಶ್ರೀ ಸಿಂಪಲ್ ಹುಡುಗಿ. ನನಗೆ ಎಂದಿಗೂ ಅವರೊಬ್ಬ ಸೆಲೆಬ್ರಿಟಿ ಅಂತ ಅನಿಸಿಯೇ ಇಲ್ಲ. ಆ ಗುಣವೇ ನನ್ನನ್ನು ಸೆಳೆಯಿತುʼʼ ಎಂದು ರೋಷನ್ ವಿವರಿಸಿದ್ದಾರೆ.
ಸ್ಯಾಂಡಲ್‌ವುಡ್ ತಾರೆಯರ ಸಮಾಗಮ
ಬೆಂಗಳೂರಿನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ನಡೆದ ಅನುಶ್ರೀ ವಿವಾಹ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಾಕ್ಷಿಯಾಗಿದ್ದು, ನೂತನ ವಧು-ವರರಿಗೆ ಶುಭ ಹಾರೈಸಿದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ತಾರಾ, ಪ್ರೇಮಾ, ಸಂಗೀತ ನಿರ್ದೇಶಕ ಹಂಸಲೇಖ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಶರಣ್, ವಿಜಯ ರಾಘವೇಂದ್ರ, ನೆನಪಿರಲಿ ಪ್ರೇಮ್, ಚೈತ್ರಾ ಜೆ. ಆಚಾರ್ ಮತ್ತಿತರರು ಭಾಗವಹಿಸಿದರು. ನಾನೇ ಗಂಡು ಹುಡುಕ್ತೀನಿ ಎಂದಿದೆ ಎಂಬುದಾಗಿ ಶಿವ ರಾಜ್‌ಕುಮಾರ್ ತಿಳಿಸಿದ್ದಾರೆ.
ಲವ್‌ಸ್ಟೋರಿಯನ್ನು ಗುಟ್ಟಾಗಿ ಇರಿಸಿದ್ದ ಜೋಡಿ
ಮಂಗಳೂರಿನ ಅನುಶ್ರೀ ಆ್ಯಂಕರ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಜನಪ್ರಿಯ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ತಮ್ಮ ಲವ್‌ಸ್ಟೋರಿಯನ್ನು ಗುಟ್ಟಾಗಿ ಇರಿಸಿದ್ದರು.