ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಭಾವನ ರಾಮಣ್ಣ (Bhavana Ramanna) ಐವಿಎಫ್ ಮೂಲಕ ಮಗು ಪಡೆದುಕೊಂಡಿದ್ದಾರೆ. ಇದೀಗ ನಟಿ ಮೊದಲ ಬಾರಿಗೆ ತನ್ನ ಮಗುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾವನಾ ಐವಿಎಫ್ ಮೂಲಕ ಎರಡು ಮಗುವನ್ನು ಪಡೆದುಕೊಂಡಿದ್ದರು. ಆದರೆ ದುರ್ವಿಧಿಯಂತೆ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಬದುಕುಳಿದಿದ್ದು, ಆರೋಗ್ಯವಾಗಿದೆ. ಮಗುವಿನ ಫೋಟೋವನ್ನು ಇದುವರೆಗೂ ಭಾವನ ರಿವೀಲ್ ಮಾಡಿಲ್ಲ.
ದೊಡ್ಡ ಮನೆ, ಪುಟ್ಟ ಕುಟುಂಬ. ನಾನು ಮತ್ತು ನನ್ನ ತಂದೆ, ಬೆಳದ್ದೆ ಎದ್ದು ಮನೆಯಂಗಳದಲ್ಲಿ ಕಾಫಿ ಹೀರುತ್ತಾ ಕೂತರೆ, ಇಲ್ಲಿ ಹಕ್ಕಿಗಳದ್ದೇ ನಾದ ನಿನಾದ... ಕು ಕು ಮೈನಾ, ಕಿಚಿ ಪಿಚಿ ಗುಬ್ಬಚ್ಚಿ, ನಿತ್ಯವೂ ಬರೀ ಹಕ್ಕಿಗಳದ್ದೇ ಕಲರವ. ಹಕ್ಕಿ ಪಿಕ್ಕಿಗಳ ಹಾಡು ಪಾಡು ಕೇಳುತ್ತಿದ್ದ ಮನೆಯಲ್ಲೀಗ ಹೊಸದೊಂದು ಪುಟ್ಟ ಹಕ್ಕಿಯ ಸರಿಗಮ ಎಂದಿದ್ದಾರೆ. ಮನೆಯ ಗೂಡಲ್ಲಿ ಚುಯ್ ಚುಯ್ ಸದ್ದು ಮಾಡುತ್ತಿರುವ ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು..? ನಮ್ಮನ್ನು ನಯವಾಗಿ ಬಂಧಿಸಿದ ಸುಂದರ ಬಲೆ, ಇದು ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಅವರು ತಮ್ಮ 40ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಭಾವನಾ ರಾಮಣ್ಣ ತಾವು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಗರ್ಭ ಧರಿಸಿರುವುದಾಗಿ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ಆಗಸ್ಟ್ 20ರಂದು ಹೆಣ್ಣು ಮಗುವಿಗೆ ಭಾವನಾ ರಾಮಣ್ಣ ಜನ್ಮ ನೀಡಿದ್ದು, ಮಗಳಿಗೆ ʻರುಕ್ಮಿಣಿʼ ಎಂದು ಹೆಸರಿಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Bhavana Ramanna: IVF ಮೂಲಕ ಗರ್ಭಿಣಿಯಾಗಿದ್ದ ನಟಿ ಭಾವನಾ ರಾಮಣ್ಣಗೆ ಹೆರಿಗೆ; ಅವಳಿ ಮಕ್ಕಳಲ್ಲಿ ಒಂದು ಮಗು ನಿಧನ
ಭಾವನಾ ಅವರ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಸಮಸ್ಯೆ ಆಗಿದ್ದರಿಂದಾಗಿ ಅವಧಿ ಪೂರ್ವವಾಗಿ ಆಪರೇಷನ್ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಇದೇ ಕಾರಣಕ್ಕೆ ಎರಡು ತಿಂಗಳ ಹಿಂದೆ ಅಂದರೆ ಎಂಟನೇ ತಿಂಗಳಲ್ಲಿಯೇ ಭಾವನಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಗುವಿನ ಪಾಲನೆಯಲ್ಲಿ ಭಾವನಾ ಈಗ ಬ್ಯುಸಿಯಾಗಿದ್ದಾರೆ.