ಕೋಲ್ಕತ್ತಾ: ಬಂಗಾಳಿ ನಟಿ (Bengali Actress) ದಿತಿಪ್ರಿಯಾ ರಾಯ್ (Ditipriya Roy) ಅವರೊಂದಿಗೆ ಚಿರೋದಿನಿ ತುಮಿ ಜೆ ಅಮರ್ (Chirodini Tumi Je Amar) ಸಹನಟ ಜೀತು ಕಮಲ್ (Jeetu Kamal) ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತು ಮಾತನಾಡಿರುವ ನಟಿ ದಿತಿಪ್ರಿಯಾ ಕೃತಕ ಬುದ್ದಿ (AI) ಮತ್ತೆ ಬಳಸಿ ತಯಾರಿಸಿರುವ ಚಿತ್ರವನ್ನು ಜೀತು ತಮಗೆ ಕಳುಹಿಸಿದ್ದಾರೆ. ಇದರಲ್ಲಿ ನಾವಿಬ್ಬರು ಚುಂಬಿಸುತ್ತಿರುವ ದೃಶ್ಯವಿದೆ. ಅದನ್ನು ನನ್ನ ಗೆಳೆಯನಿಗೆ ತೋರಿಸಲು ಅವರು ಹೇಳಿದ್ದಾರೆ. ಈ ಕುರಿತು ನಾಟಕ ಸೃಷ್ಟಿಸಲು ಬಯಸದ ಕಾರಣ ನಾನು ಸುಮ್ಮನಿದ್ದೆ. ಆದರೆ ಇನ್ನು ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜೀತು ಕಮಲ್ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ದಿತಿ ಆರೋಪಿಸಿದ್ದು, ನಾವು ಚುಂಬಿಸುತ್ತಿರುವುದನ್ನು ತೋರಿಸುವ ಕೃತಕ ಬುದ್ಧಿಮತ್ತೆಯಿಂದ ಮಾಡಿರುವ ಫೋಟೊವನ್ನು ಅವರು ನನಗೆ ಕಳುಹಿಸಿದ್ದಾರೆ. ಅನುಚಿತ ಸಂದೇಶಗಳನ್ನು ರವಾನಿಸಿದ್ದಾರೆ ಎಂದು ದೂರಿದ್ದಾರೆ.
ದಿತಿಪ್ರಿಯಾ ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಂಗಾಳಿ ಭಾಷೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ನನ್ನ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ನಾನು ಮೌನವಾಗಿರಲು ನಿರ್ಧರಿಸಿದೆ. ಯಾಕೆಂದರೆ ಅಜ್ಞಾನವೇ ಆನಂದ ಎಂದು ನಾನು ನಂಬುತ್ತೇನೆ. ಇದೆಲ್ಲವೂ ಒಂದು ಫೋಟೊದಿಂದ ಉಂಟಾಗಿದೆ. ನಿರ್ಮಾಣ ತಂಡವು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ನಮಗೆ ಕೆಲವು ಚಿತ್ರಗಳನ್ನು ಒದಗಿಸುತ್ತದೆ. ನನ್ನ ಸಹ ನಟ ಆ ಫೋಟೊಗಳಲ್ಲಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅವುಗಳಲ್ಲಿ ನನಗೆ ವೈಯಕ್ತಿಕವಾಗಿ ಇಷ್ಟವಾಗದ ಒಂದು ಫೋಟೊ ಇತ್ತು. ಅವರು ಅಂತಿಮವಾಗಿ ಅದನ್ನು ಡಿಲೀಟ್ ಮಾಡಿದರು. ಆದರೆ ಅನಂತರ ಅದರಿಂದ ನನಗೆ ಅನೇಕ ಸಂದರ್ಶನಗಳಲ್ಲಿ ಕೆಟ್ಟ ಅನುಭವವಾಯಿತು. ಅವರು ಪದೇ ಪದೆ ನಾನು ಪೋಸ್ಟ್ ಮಾಡಿದ ಫೋಟೊಗೆ ಅನೇಕ ಕೆಟ್ಟ ಮತ್ತು ಅಸಭ್ಯ ಕಮೆಂಟ್‌ಗಳು ಬಂದವು ಮತ್ತು ಅದರಿಂದ ತುಂಬಾ ನೋವಾಯಿತು ಎಂದು ಹೇಳಿದರು. ಆದರೆ ಸತ್ಯವೆಂದರೆ ನಾನು ಅವರೊಂದಿಗೆ ಎಂದಿಗೂ ಅದರ ಬಗ್ಗೆ ಮಾತನಾಡಲಿಲ್ಲ.
ನಾನು ನಿರ್ಮಾಣ ತಂಡಕ್ಕೆ ಮಾತ್ರ ತಿಳಿಸಿದ್ದೆ. ಯಾಕೆಂದರೆ ಅವರು ಫೋಟೊ ತೆಗೆದಿದ್ದಾರೆ. ಅದು ನನ್ನ ದೃಷ್ಟಿಕೋನದಿಂದ ಸೂಕ್ತವಲ್ಲ ಎಂದು ನಾನು ಭಾವಿಸಿದೆ ಎಂದು ಅವರು ಹೇಳಿದ್ದಾರೆ.
ಜೀತು ಕಮಲ್ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿರುವ ದಿತಿ, ಅವರು ಪ್ರಾರಂಭದಲ್ಲೇ ನನ್ನೊಂದಿಗೆ ನೇರವಾಗಿ ಮಾತನಾಡುವುದನ್ನು ನಿಲ್ಲಿಸಿದ್ದರು. ವಾಟ್ಸ್‌ಆ್ಯಪ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು. ಯಾಕೆ ಎಂದು ಕೇಳಿದಾಗ, ನನಗೆ ನಿಮ್ಮ ತಾಯಿಯ ಬಗ್ಗೆ ಭಯವಿದೆ, ಆದರೆ ನನಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರು.
ಅವರಲ್ಲಿರುವ ಪ್ರೀತಿ ಮತ್ತು ಗೌರವ ಎಷ್ಟಿದೆಯೆಂದರೆ ಒಂದು ದಿನ ಅವರು ನೀವು ಆ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೀರಾ? ಎಂದು ಕೇಳಿದರು. ನಾನು, ಇಲ್ಲ, ನನಗೆ ವೈದ್ಯರ ಅಪಾಯಿಂಟ್‌ಮೆಂಟ್ ಇದೆ ಎಂದು ಉತ್ತರಿಸಿದೆ. ಅನಂತರ ಅವರು, ಯಾಕೆ, ನೀವು ಗರ್ಭಿಣಿಯಾಗಿದ್ದೀರಾ? ಎಂದು ಕೇಳಿದರು.
ಬಳಿಕ ಅವರು ನನಗೆ ತಡರಾತ್ರಿಯಲ್ಲಿ ಎಐ ರಚಿತವಾದ ಚಿತ್ರವನ್ನು ಕಳುಹಿಸಿದರು. ಅದರಲ್ಲಿ ನಾವಿಬ್ಬರು ಚುಂಬಿಸುತ್ತಿರುವಂತೆ ಚಿತ್ರಿಸಲಾಗಿದೆ ಮತ್ತು ಇದನ್ನು ನಿಮ್ಮ ಗೆಳೆಯನಿಗೆ ಕಳುಹಿಸಿ. ಇವತ್ತೇ ನಿಮ್ಮ ಸಂಬಂಧ ಕೊನೆಯಾಗುತ್ತದೆ. ನಾನು ನಿಮ್ಮೊಂದಿಗೆ ಮಾತನಾಡಬೇಕು, ನಿಮ್ಮ ತಾಯಿಗೆ ತಿಳಿಯದಂತೆ ನೋಡಿಕೊಳ್ಳಿ. ಅವರ ಬಗ್ಗೆ ಭಯವಾಗಿದೆ ಎಂದು ಸಂದೇಶದಲ್ಲಿ ಬರೆದಿದ್ದರು.
ಆರಂಭದಲ್ಲಿ ಇದನ್ನು ನಾನು ನಿರ್ಲಕ್ಷಿಸಿದರೂ ಬಳಿಕ ಇದು ಹೆಚ್ಚಾಗತೊಡಗಿತು. ಸೆಟ್‌ನಲ್ಲಿನ ಕೆಲವು ಸಮಸ್ಯೆಗಳು ಕಾಡಲು ಪ್ರಾರಂಭವಾದವು ಎಂದು ದಿತಿ ಹೇಳಿದ್ದಾರೆ. ಜೀತುವಿನೊಂದಿಗೆ ತಾವು ಮಾತ್ರವಲ್ಲ ಹಲವು ಇತರ ನಟರು ಈ ರೀತಿಯ ತೊಂದರೆಯನ್ನು ಎದುರಿಸಿದ್ದಾರೆ ಎಂದು ದಿತಿಪ್ರಿಯಾ ಹೇಳಿದ್ದು, ಈ ಕುರಿತು ನಿರ್ಮಾಣ ಸಂಸ್ಥೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.