Cyanide Movie: 20 ವರ್ಷಗಳ ಬಳಿಕ ಮೇ 23ರಂದು ಮರು ಬಿಡುಗಡೆಯಾಗಲಿದೆ ಎಎಂಆರ್ ರಮೇಶ್ ನಿರ್ದೇಶನದ ʼಸೈನೈಡ್ʼ ಚಿತ್ರ
Cyanide Movie: ಸೈನೈಡ್ʼ ಚಿತ್ರವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ ಜತೆಗೆ ಹತ್ತು ನಿಮಿಷ ಸಿನಿಮಾ ಅವಧಿಯನ್ನು ಹೆಚ್ಚಿಸಿ ಮೇ 23ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ. ʼಸೈನೈಡ್ʼ ಚಿತ್ರದ ಪ್ರೀಕ್ವೆಲ್ ಸಹ ಬರಲಿದ್ದು, ಅದರ ಕಾರ್ಯಗತಿಯೂ ಸಹ ಪ್ರಗತಿಯಲ್ಲಿದೆ ಎಂದು ನಿರ್ದೇಶಕ ಎಎಂಆರ್ ರಮೇಶ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಆಧರಿಸಿದ ಚಿತ್ರ ʼಸೈನೈಡ್ʼ (Cyanide Movie). ಅಕ್ಷಯ್ ಕ್ರಿಯೇಷನ್ಸ್‌ನಲ್ಲಿ ಕೆಂಚಪ್ಪ ಗೌಡ ಹಾಗೂ ಎಸ್. ಇಂದುಮತಿ ನಿರ್ಮಿಸಿದ್ದ, ಎಎಂಆರ್ ರಮೇಶ್ ನಿರ್ದೇಶಿಸಿದ್ದ ಹಾಗೂ ತಾರಾ, ರಂಗಾಯಣ ರಘು, ರವಿಕಾಳೆ, ಮಾಳವಿಕ, ಅವಿನಾಶ್, ಉಷಾ ಭಂಡಾರಿ ಮುಂತಾದವರು ಅಭಿನಯಿಸಿದ್ದ ʼಸೈನೈಡ್ʼ ಚಿತ್ರ 2006ರಲ್ಲಿ ಬಿಡುಗಡೆಯಾಗಿ ಜನಪ್ರಿಯವಾಗಿತ್ತು. ಈಗ ಇಪ್ಪತ್ತು ವರ್ಷಗಳ ಬಳಿಕ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ದೇಶಕ ಎಎಂಆರ್ ರಮೇಶ್ ನಿರ್ದೇಶಿಸಿದ್ದಾರೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಶಾಸಕ ಹ್ಯಾರಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ʼಸೈನೈಡ್ʼ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ನಡೆದ ಘಟನೆ ಆಧರಿಸಿದ ಚಿತ್ರ. 2006ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವಾಗ ಸೂಕ್ಷ್ಮವಾದ ವಿಷಯದ ಕುರಿತಾದ ಸಿನಿಮಾ. ಏನಾಗುತ್ತದೊ ಏನೋ ಎಂಬ ಆತಂಕವಿತ್ತು. ಆದರೆ ಬಿಡುಗಡೆ ಆದ ಮೇಲೆ ಜನ ಈ ಚಿತ್ರ ಸ್ವೀಕರಿಸಿದ ರೀತಿ ಕಂಡು ಆತಂಕ ದೂರವಾಯಿತು. ನಾಡಿನ ಖ್ಯಾತ ಸಾಹಿತಿಗಳು, ನಟರು ಹಾಗೂ ನಿರ್ದೇಶಕರು ಸಹ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದರು. ತಾರಾ ಅವರ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಿತ್ರ ಕೂಡ ಇದ್ದಾಗಿತ್ತು. ಪ್ರಸ್ತುತ ಈ ಚಿತ್ರವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ ಜತೆಗೆ ಹತ್ತು ನಿಮಿಷ ಸಿನಿಮಾ ಅವಧಿಯನ್ನು ಹೆಚ್ಚಿಸಿ ಮೇ 23ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ. ʼಸೈನೈಡ್ʼ ಚಿತ್ರದ ಪ್ರೀಕ್ವೆಲ್ ಸಹ ಬರಲಿದ್ದು, ಅದರ ಕಾರ್ಯಗತಿಯೂ ಸಹ ಪ್ರಗತಿಯಲ್ಲಿದೆ ಎಂದು ನಿರ್ದೇಶಕ ಎಎಂಆರ್ ರಮೇಶ್ ತಿಳಿಸಿದರು.
ನಾನು ʼಸೈನೈಡ್ʼ ಚಿತ್ರದಲ್ಲಿ ಮೃದುಲ ಎಂಬ ಮುಗ್ಧ ಹೆಣ್ಣು ಮಗಳ ಪಾತ್ರ ನಿರ್ವಹಿಸಿದ್ದೆ. ಇಪ್ಪತ್ತು ವರ್ಷಗಳ ಹಿಂದೆ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ಮೃದುಲ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟೆ. ಆಗಲಿಲ್ಲ. ಅವರ ಪತಿ ರಂಗನಾಥ್ ಚಿತ್ರೀಕರಣ ಸ್ಥಳಕ್ಕೆ ಬರುತ್ತಿದ್ದರು. ಅವರಿಂದ ಮೃದುಲ ಅವರ ಸ್ವಭಾವ ತಿಳಿದುಕೊಂಡು ನಟಿಸಿದ್ದೆ. ನನ್ನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂತು. ಈಗ ರಮೇಶ್ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಚಿತ್ರದ ತುಣುಕು ನೋಡಿದರು. ಚಿತ್ರವನ್ನು ಸಹ ನೋಡುತ್ತೇನೆ ಎಂದು ಹೇಳಿದ್ದಾರೆ ಎಂದು ನಟಿ ತಾರಾ ತಿಳಿಸಿದರು.
ʼಸೈನೈಡ್ʼ ಚಿತ್ರದಲ್ಲಿ ಟೆರರಿಸ್ಟ್ ಪಾತ್ರ ಮಾಡಿದ್ದನ್ನು ನಟಿ ಉಷಾ ಭಂಡಾರಿ ನೆನಪಿಕೊಂಡರು. ನಿರ್ಮಾಪಕರಾದ ಕೆಂಚಪ್ಪ ಗೌಡ, ಎಸ್ ಇಂದುಮತಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Metgala Fashion: ಮೆಟ್‌ಗಾಲಾದಲ್ಲಿ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದ ಬಾಲಿವುಡ್ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್