ಬೆಂಗಳೂರು: ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದ್ದ ಸ್ಯಾಂಡಲ್‌ವುಡ್ ಇದೀಗ ಮೈಕೊಡವಿ ನಿಂತಿದೆ. ಈ ವರ್ಷದ ದ್ವಿತೀಯಾರ್ಧ ಏನಿದ್ದರೂ ತನ್ನದೆ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದೆ. ಹೊಸಬರ 'ಸು ಫ್ರಮ್ ಸೋ' ಚಿತ್ರ (Su From So Movie) ಅಂತಹದ್ದೊಂದು ಮ್ಯಾಜಿಕ್ ಮಾಡುವಲ್ಲಿ ಸಫಲವಾಗಿದೆ (Su From So Box Office Collection). ಕಳೆದ ವಾರ ರಿಲೀಸ್ ಆದ ಈ ಸಿನಿಮಾ 8 ದಿನ ಕಳೆದ ಬಳಿಕವೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಪರಭಾಷೆಗಳ ಸ್ಟಾರ್ ಚಿತ್ರಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ. ಈ ಅಪ್ಪಟ ನೆಲದ ಕಥೆ ಜನರನ್ನು ಆಕರ್ಷಿಸುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾ 8 ದಿನಗಳಲ್ಲಿ ಒಟ್ಟು 27 ಕೋಟಿ ರೂ. ಗಳಿಸಿದೆ.
ಯಾವುದೇ ಸ್ಟಾರ್‌ಗಳಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ ತೆರೆಗೆ ಬಂದ ಈ ಚಿತ್ರ ಕರಾವಳಿ ಕರ್ನಾಟಕದ ಕಥೆ ಹೇಳುತ್ತದೆ. ಅದಕ್ಕಿಂತ ಹೆಚ್ಚಾಗಿ ಅಲ್ಲಿನ ಜನ ಜೀವನವನ್ನೇ ಚಿತ್ರತಂಡ ತೆರೆಮೇಲೆ ತಂದಿದೆ. ಜತೆಗೆ ಕರಾವಳಿ ಭಾಷೆಯ ಸೊಗಡನ್ನು ಸರಿಯಾಗಿ ಬಳಸಿಕೊಂಡಿದೆ. ಕರಾವಳಿಯ ಮರ್ಲೂರು ಮತ್ತು ಸೋಮೇಶ್ವರ ಎನ್ನುವ ಹಳ್ಳಿಯಲ್ಲಿ ಜನ ಜೀವಿಸುವ ರೀತಿಗೆ ನಿರ್ದೇಶಕ ಜೆ.ಪಿ. ತುಮಿನಾಡ್ ಸಿನಿಮಾ ಸ್ಪರ್ಶ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್ ಸೋʼ ಮ್ಯಾಜಿಕ್; ಗೆಲುವಿಗೆ ಕಾರಣವೇನು?
ಕಲೆಕ್ಷನ್ ಎಷ್ಟಾಯ್ತು?
ಸಾನ್‌ಸಿಕ್ ವರದಿಯ ಪ್ರಕಾರ, ಹಾರರ್ ಕಾಮಿಡಿ ʼಸು ಫ್ರಮ್ ಸೋʼ 8 ದಿನಗಳಲ್ಲಿ ಭಾರತಾದ್ಯಂತ 23.96 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಜಾಗತಿಕವಾಗಿ 3 ಕೋಟಿ ರೂ.ಗಿಂತ ಹೆಚ್ಚು ಬಾಚಿಕೊಂಡಿದೆ. ಒಟ್ಟಾರೆಯಾಗಿ 27.87 ಕೋಟಿ ರೂ. ಸಂಗ್ರಹಿಸಿದೆ. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಅದರ ಹಲವು ಪಟ್ಟು ಹೆಚ್ಚು ದೋಚಿಕೊಂಡಿದೆ. ಜತೆಗೆ ವೀಕೆಂಡ್‌ಗಳಲ್ಲಿ ತನ್ನ ನಾಗಾಲೋಟ ಮುಂದುವರಿಸಲಿದೆ.
ದಿನವಾರು ಕಲೆಕ್ಷನ್
ಮೊದಲ ದಿನ (ಜುಲೈ 25)-78 ಲಕ್ಷ ರೂ., 2ನೇ ದಿನ-2.17 ಕೋಟಿ ರೂ., 3ನೇ ದಿನ-3.5 ಕೋಟಿ ರೂ., 4ನೇ ದಿನ-3.5 ಕೋಟಿ ರೂ., 5ನೇ ದಿನ- 3.4 ಕೋಟಿ ರೂ., 6ನೇ ದಿನ- 3.5 ಕೋಟಿ ರೂ., 7ನೇ ದಿನ-3.75 ಕೋಟಿ ರೂ., 8ನೇ ದಿನ-3.76 ಕೋಟಿ ರೂ. ಗಳಿಸಿದೆ. ಅದರಲ್ಲಿಯೂ ವಾರದ ದಿನವಾದ ಆಗಸ್ಟ್ 1ರಂದು 3.76 ಕೋಟಿ ರೂ. ಕಲೆಕ್ಷನ್ ಮಾಡಿರುವುದು ವಿಶೇಷ.
ಕೇರಳದಲ್ಲಿಯೂ ಅಬ್ಬರ
ಇದೀಗ ‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಚಿತ್ರರಂಗದ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕಾಲಿಟ್ಟಿದೆ. ಈ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ರಿಲೀಸ್ ಮಾಡಲಾಗಿದ್ದು, ಕೇರಳದಲ್ಲಿಯೂ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಬುಕ್ ಮೈ ಶೋದಲ್ಲಿಯೂ ಮಲಯಾಳಂ ವರ್ಷನ್ಗೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಜತೆಗೆ ಚಿತ್ರ ನೋಡಿದವರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾತ್ರವಲ್ಲ ವಿದೇಶದಲ್ಲಿಯೂ ತೆರೆಕಂಡಿದೆ.
ಜೆ.ಪಿ. ತುಮಿನಾಡ್ ನಿರ್ದೇಶನದ ಜತೆಗೆ ಮುಖ್ಯ ಪಾತ್ರದಲ್ಲಿ ಕಾನಿಸಿಕೊಂಡಿರುವ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಬಣ್ಣ ಹಚ್ಚಿದ್ದಾರೆ.