ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಮ್ಯಾಜಿಕ್‌; ಗೆಲುವಿಗೆ ಕಾರಣವೇನು?

J.P. Tuminad: ಸೋತು ಸೊರಗಿದ್ದ ಸ್ಯಾಂಡಲ್‌ವುಡ್‌ ಇದೀಗ ಕೊನೆಗೂ ಗೆಲುವಿನ ನಗೆ ಬೀರಿದೆ. ಕರಾವಳಿ ಪ್ರತಿಭೆ ಜೆ.ಪಿ. ತುಮಿನಾಡ್ ನಿರ್ದೇಶನದ ʼಸು ಫ್ರಮ್‌ ಸೋʼ ಮೂಲಕ ಅಪರೂಪದ ಗೆಲುವು ತಂದುಕೊಟ್ಟಿದ್ದಾರೆ. ಜು. 25ರಂದು ತೆರೆಕಂಡಿರುವ ಜೆ.ಪಿ. ತುಮಿನಾಡ್ ಚೊಚ್ಚಲ ನಿರ್ದೇಶನದ ʼಸು ಫ್ರಮ್‌ ಸೋʼ ಹಾರರ್‌ ಕಾಮಿಡಿ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಹಾಗಾದರೆ ಈ ಅಪರೂಪದ

ಸ್ಯಾಂಡಲ್‌ವುಡ್‌ನಲ್ಲಿʼಸು ಫ್ರಮ್‌ ಸೋʼ ಮ್ಯಾಜಿಕ್‌; ಯಶಸ್ಸಿಗೆ ಕಾರಣವೇನು?

Ramesh B Ramesh B Jul 28, 2025 11:06 PM

ಬೆಂಗಳೂರು: ನಟ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ (J.P. Tuminad) ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ಇತಹಾಸ ನಿರ್ಮಿಸಿದ್ದಾರೆ. ಸೋತು ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ ʼಸು ಫ್ರಮ್‌ ಸೋʼ (Su From So Movie) ಮೂಲಕ ಅಪರೂಪದ ಗೆಲುವು ತಂದುಕೊಟ್ಟಿದ್ದಾರೆ. ಜು. 25ರಂದು ತೆರೆಕಂಡಿರುವ ಜೆ.ಪಿ. ತುಮಿನಾಡ್ ಚೊಚ್ಚಲ ನಿರ್ದೇಶನದ ʼಸು ಫ್ರಮ್‌ ಸೋʼ ಹಾರರ್‌ ಕಾಮಿಡಿ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಕರಾವಳಿ ಸೊಗಡಿನ ಈ ಹೊಸಬರ ಚಿತ್ರ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, 3 ದಿನಗಳಲ್ಲಿ 6 ಕೋಟಿ ರೂ.ಗಿಂತ ಅಧಿಕ ಗಳಿಸಿದೆ.

ಯಾವುದೇ ಸ್ಟಾರ್‌ಗಳಿಲ್ಲದ, ಅಬ್ಬರದ ಪ್ರಚಾರವಿಲ್ಲದೆ ತೆರೆಗೆ ಬಂದ ಸುಲೋಚನ ಫ್ರಮ್‌ ಸೋಮೇಶ್ವರ ಅರ್ಥಾತ್‌ ʼಸು ಫ್ರಮ್‌ ಸೋʼ ಚಿತ್ರ ಮೊದಲ ಗಳಿಸಿದ್ದು ಕೇವಲ 78 ಲಕ್ಷ ರೂಪಾಯಿ. ಬಳಿಕ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ದಿನದ ಗಳಿಕೆ 3 ಪಟ್ಟು ಅಧಿಕವಾಯ್ತು. ಬಹುತೇಕ ಎಲ್ಲ ಕಡೆ ಹೌಸ್‌ಫುಲ್‌ ಪ್ರದರ್ಶನದ ಕಂಡ ಈ ಚಿತ್ರ ಶನಿವಾರ ಒಟ್ಟು 2.17 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನವಾದ ಭಾನುವಾರ ಚಿತ್ರಕ್ಕೆ 3.86 ಕೋಟಿ ರೂಪಾಯಿ ಹರಿದು ಬಂತು. ಈ ಮೂಲಕ ಸಿನಿಮಾ ಮೂರು ದಿನಗಳಲ್ಲಿ 6.81 ಕೋಟಿ ರೂಪಾಯಿ ಗಳಿಸಿದೆ. ದೇಶಾದ್ಯಂತ ಒಟ್ಟು 7.82 ಕೋಟಿ ರೂಪಾಯಿ ಸಂಗ್ರಹಿಸಿದ್ದು, ಪ್ರೀಮಿಯರ್ ಶೋಗಳ ಗಳಿಕೆಯನ್ನೂ ಲೆಕ್ಕೆಕ್ಕೆ ತೆಗೆದುಕೊಂಡರೆ ಸುಮಾರು 8 ಕೋಟಿ ರೂಪಾಯಿ ಬಾಚಿಕೊಂಡಿದೆ. ಯಾವುದೇ ಸ್ಟಾರ್‌ಗಳಿಲ್ಲದೆ ಚಿತ್ರವೊಂದು ಇಷ್ಟೊಂದು ಕಲೆಕ್ಷನ್‌ ಮಾಡಿದ್ದು ಸ್ಯಾಂಡಲ್‌ವುಡ್‌ಗೆ ಸಂಬಂಧಿಸಿ ಬಹುದೊಡ್ಡ ಸಾಧನೆ ಎಂದು ಬಾಕ್ಸ್‌ ಆಫೀಸ್‌ ತಜ್ಞರು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಸುನಾಮಿ; ಮತ್ತೊಂದು ʼಕಾಂತಾರʼ ಎಂದ ಫ್ಯಾನ್ಸ್‌

ಟಿಕೆಟ್‌ ಸಿಗುತ್ತಿಲ್ಲ

ಇದುವರೆಗೆ ಪ್ರೇಕ್ಷಕರಿಲ್ಲದೆ ಸೊರಗಿದ್ದ ಥಿಯೇಟರ್‌ ಇದೀಗ ಅಕ್ಷರಶಃ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಹೌದು. ʼಸು ಫ್ರಮ್‌ ಸೋʼ ಚಿತ್ರದ ಶೋಗಳು ಬಹುತೇಕ ಎಲ್ಲ ಕಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿವೆ. ಭಾನುವಾರವಂತೂ ಟಿಕೆಟ್‌ ಸಿಗದೆ ಹಲವರು ಪರದಾಡುವ ಸ್ಥಿತಿಯೂ ನಿರ್ಮಾಣವಾಗಿತ್ತು ಎಂದರೆ ಈ ಚಿತ್ರ ಸೃಷ್ಟಿಸಿರುವ ಕ್ರೇಜ್‌ ಎಂತಹದ್ದು ಎನ್ನುವುದನ್ನು ಊಹಿಸಬಹುದು. ಉತ್ತಮ ಚಿತ್ರಗಳನ್ನು ಪ್ರೇಕ್ಷಕರು ಎಂದಿಗೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಮೊದಲ ದಿನ ಕೆಲವೇ ಶೋ ಇದ್ದರೂ ಭಾನುವಾರ ರಾಜ್ಯಾದ್ಯಂತ 750ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ ಎನ್ನುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿ.

ಸರಳ ಕಥೆ, ಮನಮುಟ್ಟುವ ಚಿತ್ರಕಥೆ

ಕರಾವಳಿ ಕರ್ನಾಟಕದ ಊರೊಂದರಲ್ಲಿ ನಡೆಯುವ ಜನ ಜೀವನವನ್ನು ಜೆ.ಪಿ. ತುಮಿನಾಡ್‌ ಈ ಚಿತ್ರದ ಮೂಲಕ ತೆರೆ ಮೇಲೆ ತಂದಿದ್ದಾರೆ. ಜೆ.ಪಿ. ತುಮಿನಾಡ್ ಜತೆಗೆ ರಾಜ್‌ ಬಿ. ಶೆಟ್ಟಿ, ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್‌, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಬಣ್ಣ ಹಚ್ಚಿದ್ದಾರೆ. ಯಾವುದೇ ಅಬ್ಬರವಿಲ್ಲದೆ, ಕಡಿಮೆ ಬಜೆಟ್‌ನಲ್ಲಿ ಚಿತ್ರ ತಯಾರಾದರೂ ಗಟ್ಟಿ ಕಥೆ, ಬಿಗಿಯಾದ ಚಿತ್ರಕಥೆಯಿಂದ ಗಮನ ಸೆಳೆಯಬಹುದು ಎನ್ನುವುದನ್ನು ಇದು ಸಾಬೀತುಪಡಿಸಿದೆ. ಒಮ್ಮೆ ನೋಡಿದವರು ಮತ್ತೊಮ್ಮೆ ನೋಡಲು ಮುಂದಾಗುತ್ತಿದ್ದಾರೆ ಎನ್ನುವುದು ʼಸು ಫ್ರಮ್‌ ಸೋʼದ ಹೆಗ್ಗಳಿಕೆ. ಕರಾವಳಿ ಭಾಗದ ಭಾಷೆಯನ್ನು, ಅಲ್ಲಿನ ಜನರ ನಿತ್ಯ ಜೀವನವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ಕಲಾವಿದರು ನಟಿಸದೆ ತಾವೇ ಪಾತ್ರವಾಗಿ ಜೀವಿಸಿದ್ದು ಈ ಚಿತ್ರದ ಪ್ಲಸ್‌ ಪಾಯಿಂಟ್‌.

ಗಮನ ಸೆಳೆದ ಕಾಮಿಡಿ

ಚಿತ್ರ ಆರಂಭದಿಂದಲೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತ ಸಾಗುತ್ತದೆ. ಹಾಸ್ಯವನ್ನು ಬೇಕೆಂದೇ ತುರಕದೆ ಅದೇ ಕಥೆಯ ಭಾಗವಾಗಿ ಬೆರೆತು ಹೋಗಿರುವುದು ಮತ್ತೊಂದು ಹೆಚ್ಚುಗಾರಿಕೆ. ಕನ್ನಡದಲ್ಲಿ ಇದುವರೆಗೆ ಹಲವು ಹಾಸ್ಯ ಪ್ರಧಾನ ಸಿನಿಮಾಗಳು ತೆರೆಗೆ ಬಂದಿವೆ. ಆದರೆ ʼಸು ಫ್ರಮ್‌ ಸೋʼ ತನ್ನ ಕಂಟೆಂಟ್‌ ಕಾರಣದಿಂದ ಅವೆಲ್ಲಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಸಿದ್ಧಸೂತ್ರಗಳನ್ನು ಬದಿಗೊತ್ತಿ ಪ್ರೇಕ್ಷಕರಿಗೆ ಹೊಸದೊಂದು ಫೀಲ್‌ ನೀಡುತ್ತದೆ. ಇದೇ ಕಾರಣಕ್ಕೆ ಕರಾವಳಿ ಮೂಲದ ಕಥೆಯಾದರೂ ಇಡೀ ರಾಜ್ಯದ ಪ್ರೇಕ್ಷಕರನ್ನು ಸೆಳೆದಿದೆ. ಒಂದು ಸಿನಿಮಾದ ಯಶಸ್ಸಿಗೆ ಬೇಕಾದುದು ಗಟ್ಟಿ ಕಥೆ ಮತ್ತು ಸುಂದರ ನಿರೂಪಣೆ ಎನ್ನುವುದನ್ನು ಮತ್ತೊಮ್ಮೆ ಸಾರಿ ಹೇಳಿದೆ.

ಯಾರು ಈ ಜೆ.ಪಿ. ತುಮಿನಾಡ್?

ಚೆಂದದ ಚಿತ್ರದ ನೀಡುವ ಮೂಲಕ ನಿರ್ದೇಶಕ ಜೆ.ಪಿ. ತುಮಿನಾಡ್ ಸದ್ಯ ಚಿತ್ರರಂಗದ ಗಮನ ಸೆಳೆದಿದ್ದಾರೆ. ಇವರು ರಂಗಭೂಮಿ ಹಿನ್ನೆಲೆಯವರು. ಈ ಹಿಂದೆ ʼಕಟಪಾಡಿ ಕಟ್ಟಪ್ಪʼ ಎನ್ನುವ ತುಳು ಚಿತ್ರವನ್ನು ನಿರ್ದೇಶಿಸಿದ್ದರು. ಜತೆಗೆ ಕನ್ನಡದ ‘ಗರುಡ ಗಮನ ವೃಷಭ ವಾಹನ’, ‘ಸಪ್ತ ಸಾಗರದಾಚೆ ಎಲ್ಲೊ’, ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಸಿನಿಮಾಗಳಲ್ಲಿ ತೆರೆಯ ಹಿಂದೆ ಕೆಲಸ ಮಾಡುವ ಜತೆಗೆ ಅಭಿನಯಿಸಿದ್ದರು.

ಹೊಸಬರ ಈ ಸಾಹಸಕ್ಕೆ ಬೆನ್ನುಲುಬಾಗಿ ನಿಂತವರು ರಾಜ್‌ ಬಿ. ಶೆಟ್ಟಿ. ʼಸು ಫ್ರಮ್‌ ಸೋʼ ಚಿತ್ರವನ್ನು ಶಶಿಧರ್‌ ಶೆಟ್ಟಿ, ರವಿ ರೈ ಜತೆ ಸೇರಿ ರಾಜ್‌ ಬಿ. ಶೆಟ್ಟಿ ನಿರ್ಮಿಸುವ ಜತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಚಿತ್ರರಂಗಕ್ಕೆ ಸಿಕ್ಕ ಗೆಲುವು ಎಂದು ರಾಜ್‌ ಬಿ. ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಪರಭಾಷೆಗೆ ಹೊರಟ ಸುಲೋಚನ

ವಿಶೇಷ ಎಂದರೆ ʼಸು ಫ್ರಮ್‌ ಸುಲೋಚನʼ ಇದೀಗ ಪರಭಾಷೆಗೂ ಹೊರಟಿದೆ. ಮಲಯಾಳಂ ಮತ್ತು ಹಿಂದಿಗೆ ಡಬ್‌ ಆಗಿ ರಿಲೀಸ್‌ ಆಗಲಿದೆ. ಅನಿಲ್‌ ತಡಾನಿ ಒಡೆತನದ ಬಾಲಿವುಡ್‌ನ ಖ್ಯಾತ ವಿತರಣಾ ಸಂಸ್ಥೆ ಎಎ ಫಿಲ್ಮ್ಸ್‌ ಚಿತ್ರದ ಉತ್ತರ ಭಾರತದ ವಿತರಣಾ ಹಕ್ಕನ್ನು ಪಡೆದಿದೆ. ಇನ್ನು ಆಗಸ್ಟ್‌ 1ರಂದು ‘ಸು ಫ್ರಂ ಸೋ’ ಸಿನಿಮಾದ ಮಲಯಾಳಂ ಆವೃತ್ತಿ ಕೇರಳದಲ್ಲಿ ಬಿಡುಗಡೆಯಾಗಲಿದೆ. ದುಲ್ಕರ್ ಸಲ್ಮಾನ್ ಒಡೆತನದ ವೇಫೆರರ್ ಫಿಲ್ಮ್ಸ್‌​ ಕೇರಳದಾದ್ಯಂತ ಸಿನಿಮಾ ವಿತರಣೆ ಮಾಡಲಿದೆ. ಆಗಸ್ಟ್‌ 1ರಂದೇ ವಿದೇಶದಲ್ಲಿಯೂ ತೆರೆಗೆ ಬರಲಿದೆ. ಒಟ್ಟಿನಲ್ಲಿ ಸದ್ಯದ ಟ್ರೆಂಡ್‌ ಗಮನಿಸಿದರೆ ʼಸು ಫ್ರಮ್‌ ಸೋʼ ಮತ್ತೊಂದು ʼಕಾಂತಾರʼವಾಗುವ ಎಲ್ಲ ಸಾಧ್ಯತೆ ಇದೆ.