ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತೆರೆಮೇಲೆ ಮತ್ತೊಂದು ಪೂರ್ಣಚಂದ್ರ ತೇಜಸ್ವಿ ಕಾದಂಬರಿ; ʼಜುಗಾರಿ ಕ್ರಾಸ್‌ʼನಲ್ಲಿ ರಾಜ್‌ ಬಿ. ಶೆಟ್ಟಿ ನಾಯಕ: ಟೈಟಲ್‌ ಪ್ರೋಮೋ ರಿಲೀಸ್‌

Jugari Cross Movie: ಕನ್ನಡದ ಪ್ರಮುಖ ಲೇಖಕರಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಮುಖ ಪತ್ತೇದಾರಿ ಕಾದಂಬರಿಯ ’ಜುಗಾರಿ ಕ್ರಾಸ್’ ಸಿನಿಮಾ ರೂಪ ಪಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ಯುವ ನಿರ್ದೇಶಕ ಗುರುದತ್ತ ಗಾಣಿಗ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಟೈಟಲ್‌ ಪ್ರೋಮೋ ರಿಲೀಸ್‌ ಆಗಿದೆ.

ಬೆಂಗಳೂರು: ಕನ್ನಡದ ಪ್ರಮುಖ ಲೇಖಕರಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (KP Poornachandra Tejaswi) ಅವರ ಪ್ರಮುಖ ಪತ್ತೇದಾರಿ ಕಾದಂಬರಿಯ ’ಜುಗಾರಿ ಕ್ರಾಸ್’ ಸಿನಿಮಾ (Jugari Cross Movie) ರೂಪ ಪಡೆಯುತ್ತಿದೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಸ್ಯಾಂಡಲ್‌ವುಡ್‌ನ ಯುವ ನಿರ್ದೇಶಕ ಗುರುದತ್ತ ಗಾಣಿಗ (Gurudatha Ganiga) ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದೀಗ ಚಿತ್ರದ ಟೈಟಲ್‌ ಪ್ರೋಮೋ ರಿಲೀಸ್‌ ಆಗಿದ್ದು, ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ (Raj B Shetty) ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್‌ ದೇವರಾಜ್‌ ಅಭಿನಯದ ʼಕರಾವಳಿʼ ಸಿನಿಮಾದ ಬಳಿಕ ರಾಜ್‌ ಬಿ. ಶೆಟ್ಟಿ ಮತ್ತು ಗುರುದತ್ತ ಗಾಣಿಗ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ.

ವಿಶೇಷ ಎಂದರೆ ಸಿನಿಮಾ ರೂಪ ಪಡೆದುಕೊಳ್ಳುತ್ತಿರುವ ಪೂರ್ಣಚಂದ್ರ ತೇಜಸ್ವಿ ಅವರ 6ನೇ ಕೃತಿ ಇದಾಗಿದೆ. ಈ ಹಿಂದೆ ʼಅಬಚೂರಿನ ಪೋಸ್ಟ್‌ ಆಫೀಸ್‌ʼ, ʼತಬರನ ಕಥೆʼ, ʼಕುಬಿ ಮತ್ತು ಇಯಾಳʼ, ʼಕಿರಗೂರಿನ ಗಯ್ಯಾಳಿಗಳುʼ ಹಾಗೂ ʼಡೇರ್‌ಡೆವಿಲ್‌ ಮುಸ್ತಫಾʼ ಚಲನಚಿತ್ರಗಳಾಗಿ ತೆರೆಮೇಲೆ ಮೂಡಿ ಬಂದಿದ್ದವು. ʼಡೇರ್‌ಡೆವಿಲ್‌ ಮುಸ್ತಫಾʼ 2023ರಲ್ಲಿ ರಿಲೀಸ್‌ ಆಗಿತ್ತು. ಇದೀಗ 2 ವರ್ಷಗಳ ಅಂತರದಲ್ಲಿ ಮತ್ತೊಂದು ಕಾದಂಬರಿ ಸಿನಿಮಾ ರೂಪ ಪಡೆಯುತ್ತಿದೆ.

ಟೈಟಲ್‌ ಪ್ರೋಮೋ ಇಲ್ಲಿದೆ:



ರೋಚಕ ಪತ್ತೇದಾರಿ ಕಾದಂಬರಿ

’ಜುಗಾರಿ ಕ್ರಾಸ್’ ರೋಚಕ ಪತ್ತೇದಾರಿ ಕಾದಂಬರಿ. ಜುಗಾರಿ ಕ್ರಾಸ್ ಎನ್ನುವ ಕಾಲ್ಪನಿಕ ಪ್ರದೇಶದಲ್ಲಿ ನಡೆಯುವ ಕಥೆಯೇ ಇದರ ಮುಖ್ಯ ತಿರುಳು. ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಇರುವ ಜುಗಾರಿ ಕ್ರಾಸ್‌ನಲ್ಲಿ ನಡೆಯುವ ಅಪರಾಧ ಪ್ರಕರಣಗಳು, ಏಲಕ್ಕಿ ವ್ಯಾಪಾರದ ಸುತ್ತಲಿನ ಚಿತ್ರಣ, ಅಪರೂಪದ ಬೆಲೆ ಬಾಳುವ ಕೆಂಪು ಮಣಿ, ಭೂ ಮಾಫಿಯಾ ಹೀಗೆ ಹಲವು ಕುತೂಹಲದ ಅಂಶಗಳು ಈ ಕಾದಂಬರಿಯಲ್ಲಿದೆ.

ʼ‘ಜುಗಾರಿ ಕ್ರಾಸ್‌’ ಸಿನಿಮಾವನ್ನು ಕಮರ್ಷಿಯಲ್‌ ದೃಷ್ಟಿಕೋನದ ಬದಲಾಗಿ ಕಾದಂಬರಿ ಓದುವಂತೆ ಮಾಡಬೇಕು ಎನ್ನುವುದು ಗುರುದತ್‌ ಉದ್ದೇಶ. ಈಗಾಗಲೇ ಓದಿದವರಿಗೆ ಒಂದು ಚೂರೂ ಬದಲಾಗಿಲ್ಲ ಎಂದನಿಸಬೇಕು. ಹಾಗೆ ತೆರೆಮೇಲೆ ಕಟ್ಟಿಕೊಡಬೇಕು ಎಂದು ಹಿಂದೊಮ್ಮೆ ಅವರು ಹೇಳಿದ್ದರು. ಇದೀಗ ಹೊರ ಬಂದಿರುವ ಟೈಟಲ್‌ ಪ್ರೋಮೋ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಚಿತ್ರಕ್ಕೆ ʼರಕ್ತ ಕಲ್ಲಿನ ಕಥೆʼ ಎನ್ನುವ ಅಡಿ ಬರಹವಿದೆ.

ನಿರ್ದೇಶಕ ಗುರುದತ್‌ ಗಾಣಿಗ ಜನವರಿಯಲ್ಲಿ ಸಿನಿಮಾ ಶೂಟಿಂಗ್‌ ಪ್ರಾರಂಭಿಸಿ, ಮಾರ್ಚ್ ಒಳಗೆ ಪೂರ್ಣಗೊಳಿಸಿ 2026ರ ದ್ವಿತಿಯಾರ್ಧದಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸದ್ಯ ಅವರು ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸುತ್ತಿರುವ 'ಕರಾವಳಿ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಸಂಪದಾ ಅಭಿನಯಿಸುತ್ತಿದ್ದು, ರಾಜ್‌ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಬಳ ಸ್ಪರ್ಧೆಯ ಸುತ್ತ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಎರಡು ಕೋಣಗಳ ನಡುವೆ ನಿಂತಿರುವ ರಾಜ್ ಬಿ. ಶೆಟ್ಟಿ ಪೋಸ್ಟರ್‌ ಈ ಹಿಂದೆ ವೈರಲ್‌ ಆಗಿತ್ತು.