ನವದೆಹಲಿ: ಇತ್ತೀಚೆಗೆ ತೆರೆಕಂಡ ʼಲೋಕ ಚಾಪ್ಟರ್ 1: ಚಂದ್ರʼ (Lokah Chapter 1 Movie) ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ವಿಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗಿಂತ ಅದಿಕ ದೋಚಿಕೊಂಡಿದೆ. ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan) ಈ ಸಿನಿಮಾದಲ್ಲಿ ಸೂಪರ್ ವುಮೆನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ದೇಶದ ಮೊದಲ ಸೂಪರ್ ವುಮೆನ್ ಚಿತ್ರ ಎನಿಸಿಕೊಂಡಿದೆ. ವೇಫೇರರ್ ಫಿಲ್ಮ್ಸ್ ಅಡಿಯಲ್ಲಿ ನಟ ದುಲ್ಖರ್ ಸಲ್ಮಾನ್ ಸಲ್ಮಾನ್ (Dulquer Salmaan) ಈ ಚಿತ್ರದ ನಿರ್ಮಿಸಿದ್ದಾರೆ. ಡೊಮಿನಿಕ್ ಅರುಣ್ ನಿರ್ದೇಶಿಸಿರುವ ಈ ಸಿನಿಮಾವು ಹೊಸ ದಾಖಲೆ ಬರೆದಿದೆ. ಅತಿ ಹೆಚ್ಚು ಗಳಿಸಿದ ಮಲಯಾಳಂ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಯಾವಾಗ ಒಟಿಟಿಎ ಬರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.
ಯಾವಾಗ ಒಟಿಟಿ ರಿಲೀಸ್?
ಮಹಿಳಾ ಪ್ರಧಾನ ಕಥೆ ಇರುವ ʼಲೋಕ ಚಾಪ್ಟರ್ 1: ಚಂದ್ರʼ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಹೀಗಾಗಿ ಪಾರ್ಟ್ 2 ಬರುವುದನ್ನು ಕೂಡ ಜನರು ಕಾಯುತ್ತಿದ್ದಾರೆ. ಅದರೊಂದಿಗೆ ಶೀಘ್ರವೇ ಒಟಿಟಿಗೆ ಬರಲಿ ಎಂದು ಕಾದವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಸಿನಿಮಾ ತಯಾರಕರು ಇನ್ನೂ ನಿಖರವಾದ ದಿನಾಂಕವನ್ನು ದೃಢೀಕರಿಸದಿದ್ದರೂ, ದೀಪಾವಳಿ ಹಬ್ಬದ ಭಾಗವಾಗಿ ಅಕ್ಟೋಬರ್ 20ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ.
ʼಲೋಕ ಚಾಪ್ಟರ್ 1: ಚಂದ್ರʼ ಚಿತ್ರದ ಟ್ರೈಲರ್ ಇಲ್ಲಿದೆ:
ಸಿನಿಮಾದಲ್ಲಿ ಅಂತಹದ್ದೇನಿದೆ?
ʼಲೋಕʼ ಸಿನಿಮಾದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಫೈಟ್ ಮಾತ್ರವೇ ಜನರಿಗೆ ಇಷ್ಟವಾಗಿಲ್ಲ. ಬದಲಾಗಿ ಕಲಾವಿದರ ಅಭಿನಯವೂ ಪ್ರಶಂಸೆ ಗಳಿಸಿದೆ. ಕಲ್ಯಾಣಿ ಪ್ರಿಯದರ್ಶನ್ ಜತೆಗೆ ಚಿತ್ರದಲ್ಲಿ ನಸ್ಲೆನ್, ಸ್ಯಾಂಡಿ ಮಾಸ್ಟರ್ ಮತ್ತು ಸನ್ನಿ ವೇಯ್ನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೇಕ್ಸ್ ಬಿಜಾಯ್ ಅವರ ಸಂಗೀತ ಸಂಯೋಜನೆಯು ಗಮನ ಸೆಳೆದಿದೆ.
ಇತ್ತೀಚೆಗಷ್ಟೇ ಸಿನಿಮಾ ತಂಡವು ಚಾಪ್ಟರ್ 2 ರಿಲೀಸ್ ಮಾಡುವ ಬಗ್ಗೆ ಹಿಂಟ್ ನೀಡಿತ್ತು. ಚಾಪ್ಟರ್ 2 ಸಿನಿಮಾದ ಟೀಸರ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಕೂಡ ವೈರಲ್ ಆಗುತ್ತಿದೆ. ಚಾಪ್ಟರ್ 2 ಚಿತ್ರದಲ್ಲಿ ದುಲ್ಖರ್ ಸಲ್ಮಾನ್ ನಟಿಸಲಿದ್ದಾರೆ. ಸೂಪರ್ ಹೀರೋ ಹಾಗೂ ಸೂಪರ್ ವುಮೆನ್ ಪಾತ್ರವೂ ಇರಲಿದೆ.
ʼಲೋಕ ಚಾಪ್ಟರ್ 1: ಚಂದ್ರʼ ಸಿನಿಮಾವು ವಿವಿಧ ಭಾಷೆಗಳಲ್ಲಿ ತೆರೆಕಂಡಿದ್ದು, ಇದುವರೆಗೆ ಒಟ್ಟು 200 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಬರೀ ಮಲಯಾಳಂ ಆವೃತ್ತಿಯಲ್ಲೇ 119.46 ಕೋಟಿ ರೂ. ದೋಚಿಕೊಂಡಿದೆ. ಈ ಮೂಲಕ ನಟ ಮೋಹನ್ ಲಾಲ್ ಅವರ ʼತುಡರುಮ್ʼ ಮತ್ತು ʼಎಲ್ 2: ಎಂಪುರಾನ್ʼನಂತಹ ಮಾಲಿವುಡ್ ಸಿನಿಮಾದ ದಾಖಲೆಗಳನ್ನು ಅಳಿಸಿಹಾಕಿದೆ.