ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ನಟ ಶಿವ ಕಾರ್ತಿಕೇಯನ್ ಹಾಗೂ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕ- ನಾಯಕಿಯಾಗಿ ನಟಿಸಿರುವ, ಎ.ಆರ್. ಮುರುಗದಾಸ್ ನಿರ್ದೇಶನದ ʼಮದರಾಸಿʼ ಚಿತ್ರವು (Madharasi Movie) ಸೆಪ್ಟೆಂಬರ್ 5ರಂದು ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರಿನ ಕೋರಮಂಗಲದ ನಕ್ಸಸ್ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು. ಅಭಿಮಾನಿಗಳ ಹರ್ಷೋದ್ಗಾರ ಮತ್ತು ಸಂಭ್ರಮದ ನಡುವೆ ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಭಾಷೆಗಳ ಟ್ರೇಲರ್ ಪ್ರದರ್ಶನ ಮಾಡಲಾಯಿತು. ಶಿವ ಕಾರ್ತಿಕೇಯನ್, ರುಕ್ಮಿಣಿ ವಸಂತ್, ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ʼಅಮರನ್ʼ ಚಿತ್ರದ ಬಳಿಕ ಬೆಂಗಳೂರಿನಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವ ಕಾರ್ತಿಕೇಯನ್, ಬೆಂಗಳೂರಿನ ಅಭಿಮಾನಿಗಳ ಅಭಿಮಾನದ ಮಳೆಯಲ್ಲಿ ಮಿಂದರು. ಈ ವೇಳೆ ʼಮದರಾಸಿʼ ಚಿತ್ರದ ಹುಕ್ ಸ್ಟೆಪ್‌ಗೆ ಹೆಜ್ಕೆ ಹಾಕಿ ಅಭಿಮಾನಿಗಳ ಜತೆ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಶಿವ ಕಾರ್ತಿಕೇಯನ್, ರುಕ್ಮಿಣಿ ವಸಂತ್ ಅವರಂತಹ ನಟಿಯನ್ನು ತಮಿಳಿಗೆ ನೀಡಿದ ಬೆಂಗಳೂರಿಗೆ ಧನ್ಯವಾದಗಳು. ನನ್ನ ಹಿಂದಿನ ಚಿತ್ರಗಳಿಗೆ ತಾವುಗಳು ನಿರೀಕ್ಷೆಗೂ ಮೀರಿ ಯಶಸ್ಸನ್ನು ನೀಡಿದ್ದೀರಿ. ಈ ಚಿತ್ರಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ, ʼಮದರಾಸಿʼ ಕಾಲ್ಪನಿಕ ಕಥೆ. ನಿರ್ದೇಶಕ ಮುರುಗದಾಸ್ ಅವರೇ ಕಥೆ ಬರೆದಿದ್ದಾರೆ. ಸೆಪ್ಟೆಂಬರ್ 5ರಂದು ನಮ್ಮ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ನಾಯಕಿ ರುಕ್ಮಿಣಿ ವಸಂತ್ ಮಾತನಾಡಿ, ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರಕ್ಕೆ ಸಹಕಾರ ಬೆಂಬಲ ಇರಲಿ ಎಂದು ಕೋರಿದರು. ವಿಕೆ ಫಿಲಂಸ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Mehndi Trend 2025: ಕಥೆ ಹೇಳುವ ಬ್ರೈಡಲ್ ಮೆಹಂದಿ ಡಿಸೈನ್ಸ್