ಮುಂಬೈ: ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ʼಸೀತಾರಾಮಮ್ʼ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಸಂಚಲನ ಉಂಟು ಮಾಡಿದ್ದು, ನಾಯಕಿಯಾಗಿ ಮೃಣಾಲ್ ಠಾಕೂರ್ (Mrunal Thakur) ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದರು. ಬಳಿಕ ಅವರಿಗೆ ಸಾಲು ಸಾಲು ಸಿನಿಮಾ ಆಫರ್ಸ್ ಕೂಡ ಬರುತ್ತಿದ್ದು, ಭಾರತೀಯ ಸಿನಿಮೋದ್ಯಮದಲ್ಲಿ ಭರವಸೆಯ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿರುವ ಅವರು ಇತ್ತೀಚೆಗೆ ವೃತ್ತಿ ಜೀವನಕ್ಕಿಂತಲೂ ವೈಯಕ್ತಿಕ ವಿಚಾರದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ತಮಿಳು ಸೂಪರ್ ಸ್ಟಾರ್ ಖ್ಯಾತಿಯ ನಟ ಧನುಷ್ ಜತೆಗೆ ಮೃಣಾಲ್ ಠಾಕೂರ್ ಲಿವ್ ಇನ್ ಸಂಬಂಧದಲ್ಲಿದ್ದಾರೆ ಎಂಬ ವದಂತಿ ಸಿನಿಮಾ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ. ಇದೀಗ ಮೃಣಾಲ್ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಚಿತ್ರರಂಗವಾದರೂ ಲವ್ ರಿಲೇಶನ್ ಶಿಪ್ ಕುರಿತು ಗಾಸಿಪ್‌ಗಳು ಆಗಾಗ ಹರಿ ದಾಡುತ್ತಲೇ ಇರುತ್ತವೆ. ದಕ್ಷಿಣ ಭಾರತದ ಖ್ಯಾತ ನಟ ಧನುಷ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಮೃಣಾಲ್ ಠಾಕೂರ್ ಕೊನೆಗೂ ಮೌನ ಮುರಿದಿದ್ದಾರೆ. ಇತ್ತೀಚೆಗಷ್ಟೆ ಅವರು ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ಧನುಷ್ ಒಳ್ಳೆ ಸ್ನೇಹಿತ ಅಷ್ಟೇ ಎಂದು ಹೇಳುವ ಮೂಲಕ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ.
ನಟಿ ಮೃಣಾಲ್ ಠಾಕೂರ್ ಅಭಿನಯದ ʼಸನ್ ಆಫ್ ಸರ್ದಾರ್ 2ʼ ಬಾಲಿವುಡ್ ಸಿನಿಮಾ ಇತ್ತೀಚೆಗಷ್ಟೆ ತೆರೆ ಕಂಡಿದ್ದು ಇದರ ಪ್ರೀಮಿಯರ್ ಶೋಗೆ ಧನುಷ್ ಅವರನ್ನು ಆಹ್ವಾನಿಸಲಾಗಿತ್ತು. ಆನಂದ್ ಎಲ್. ರಾಯ್ ನಿರ್ದೇಶನದ ಧನುಷ್ ನಟನೆಯ ಬಹುನಿರೀಕ್ಷಿತ 'ತೇರೆ ಇಷ್ಕ್ ಮೇ' ಚಿತ್ರಕ್ಕೆ ಸಂಬಂಧಿಸಿದ ಸಮಾರಂಭದಲ್ಲಿ ಮೃಣಾಲ್ ಕೂಡ ಭಾಗಿಯಾಗಿದ್ದರು. ಹೀಗಾಗಿ ಅವರಿಬ್ಬರ ನಡುವಿನ ಗಾಸಿಪ್ ವಿಚಾರ ಮತ್ತಷ್ಟು ಹೈಲೈಟ್ ಆಗಿತ್ತು. ಹೀಗಾಗಿ ನಟಿ ಮೃಣಾಲ್ ಇದಕ್ಕೂ ಕೂಡ ಸ್ಪಷ್ಟನೆ ನೀಡಿದ್ದಾರೆ.
ʼʼಧನುಷ್ ಅವರನ್ನು ʼಸನ್ ಆಫ್ ಸರ್ದಾರ್ 2ʼ ಕಾರ್ಯಕ್ರಮಕ್ಕೆ ನಾನು ಆಹ್ವಾನಿಸಿದ್ದಲ್ಲ. ಅಜಯ್ ದೇವಗನ್ ಅವರ ಕೋರಿಕೆಯಂತೆ ಸಿನಿಮಾ ಪ್ರೀಮಿಯರ್ ಶೋಗೆ ಬಂದಿದ್ದರು. ಈ ಮೂಲಕ ಮೃಣಾಲ್ ಡೇಟಿಂಗ್ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಮೃಣಾಲ್, ಇಂತಹ ವದಂತಿ ಆಧಾರ ರಹಿತವಾಗಿದ್ದು, ಧನುಷ್ ನನಗೆ ಒಳ್ಳೆಯ ಸ್ನೇಹಿತ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಧನುಷ್ ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರನ್ನು ವಿವಾಹವಾಗಿ 18 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ದಂಪತಿಗೆ ಲಿಂಗ ಮತ್ತು ಯಾತ್ರಾ ಹೆಸರಿನ ಇಬ್ಬರು ಮಕ್ಕಳು ಇದ್ದಾರೆ. ಬಳಿಕ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ 2022ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಹೀಗಾಗಿ ನಟ ಧನುಷ್ ಜತೆ ಆಗಾಗ ಬೇರೆ ಬೇರೆ ನಟಿಯರ ಹೆಸರು ಥಳುಕು ಹಾಕುತ್ತಲೇ ಇರುತ್ತದೆ.