ಬೆಂಗಳೂರು: ಸ್ಯಾಂಡಲ್‌ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa) ತಮ್ಮ ತಾಯಿಯ ನೆನಪಿನಲ್ಲಿ ಸಾಮಾಜಿಕ ಕಾರ್ಯವೊಂದನ್ನು ಆರಂಭಿಸಿದ್ದಾರೆ. ಸುದೀಪ್ ಅವರ ತಾಯಿ ಸರೋಜಾ (Saroja) ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅನಾರೋಗ್ಯದಿಂದ ನಿದನ ಹೊಂದಿದ್ದರು. ಆಗಸ್ಟ್ 30 ಅವರು ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಸುದೀಪ್ ಅವರ ನೆನಪಿನಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ಆ ಮೂಲಕ ಅವರ ನೆನಪನ್ನು ಶಾಶ್ವತವಾಗಿರಿಸಲು ಮುಂದಾಗಿದ್ದಾರೆ. ಅವರಿಲ್ಲದ ಮೊದಲ ಹುಟ್ಟುಹಬ್ಬ ಈ ದಿನದಂದು ಅಪರೂಪದ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಸುದೀಪ್ ತಮ್ಮ ತಾಯಿಯವರ ಹುಟ್ಟುಹಬ್ಬದ ಪ್ರಯುಕ್ತ ಗಿಡಗಳನ್ನು ನೆಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಗಿಡಗಳನ್ನು ನೆಡಲಾಯ್ತು. ಈ ಕಾರ್ಯಕ್ಕೆ ಸ್ವತಃ ಸುದೀಪ್ ಚಾಲನೆ ನೀಡಿದರು. ಸುದೀಪ್ ಹಾಗೂ ಅವರ ಕುಟುಂಬದವರು ಸೇರಿಕೊಂಡು ತೆಂಗಿನ ಗಿಡವೊಂದನ್ನು ನೆಟ್ಟರು. ಆ ಮೂಲಕ ಹಸಿರು ಪರಿಸರ ನಿರ್ಮಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.
‘ಅಮ್ಮನ ಹೆಜ್ಜೆಗೆ ಹಸಿರ ಹೆಜ್ಜೆ’ ಎಂಬ ಹೆಸರಿನಲ್ಲಿ ಈ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಲಾಗಿದ್ದು, ಸುದೀಪ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮ್ಮನ ನೆನಪು ಶಾಶ್ವತವಾಗಿಸಲು ಇದೊಂದು ಉತ್ತಮ ಹೆಜ್ಜೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ (75) 2024ರ ಅಕ್ಟೋಬರ್ 20ರ ನಿಧನರಾದರು. ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸರೋಜಾ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಸೆಪ್ಟೆಂಬರ್ 2ರಂದು ಅಭಿಮಾನಿಗಳ ಜತೆ ಕಿಚ್ಚನ ಹುಟ್ಟುಹಬ್ಬ
ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬ ಆಚರಿಸಲಿದ್ದಾರೆ. ಅಂದು ಅವರು ತಮ್ಮ ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಿಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 1ರ ಮಧ್ಯರಾತ್ರಿಯೇ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುವುದಾಗಿ ತಿಳಿಸಿದ್ದರು. ಅದಾಗ್ಯೂ, ಮನೆ ಬಳಿ ಬರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಸುದೀಪ್ ಅವರಿಗೆ ಅಮ್ಮನಿಲ್ಲದ ಮೊದಲ ಹುಟ್ಟುಹಬ್ಬ ಇದಾಗಿದ್ದು, ಈ ನೋವಿನಲ್ಲೂ ಅಭಿಮಾನಿಗಳ ಜತೆಗೆ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಎಲ್ಲಿ, ಹೇಗೆ? ಎನ್ನುವುದನ್ನು ಸದ್ಯದಲ್ಲೇ ಅವರು ತಿಳಿಸಲಿದ್ದಾರೆ.
ತಮ್ಮ ಹುಟ್ಟುಹಬ್ಬ ಆಚರಣೆ ಬಗ್ಗೆ ಸುದೀಪ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ‘ʼಸೆಪ್ಟೆಂಬರ್ 2ರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ? ಸೆಪ್ಟೆಂಬರ್ 2ರಂದು ನೀವು ನನ್ನನ್ನು ಭೇಟಿ ಮಾಡುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆʼʼ ಎಂದಿದ್ದರು.
ಸದ್ಯ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 12ರ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದು, 2 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ʼಬಿಲ್ಲ ರಂಗ ಭಾಷʼ ಮತ್ತು ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 2ರಂದು ಈ ಎರಡೂ ಚಿತ್ರಗಳ ಹೊಸ ಪೋಸ್ಟರ್ ರಿಲೀಸ್ ಆಘಲಿದೆ.