ಹೈದರಾಬಾದ್: ಟಾಲಿವುಡ್ ನಟ, ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಸದ್ಯ ಉಪಮುಖ್ಯಮಂತ್ರಿಯಾಗಿ ಬ್ಯುಸಿಯಾಗಿಯಾಗಿದ್ದಾರೆ. 'ಭೀಮ್ಲಾ ನಾಯಕ್', 'ವಕೀಲ್ ಸಾಬ್', 'ಯವುಡು 3', ಅಜ್ಞಾತವಾಸಿ' ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೇಗೆ ತೆರೆಕಂಡ ಪವನ್ ಕಲ್ಯಾಣ್ ಅಭಿನಯದ 'ಹರಿಹರ ವೀರ ಮಲ್ಲು' (Hari Hara Veera Mallu) ಇದೀಗ ಒಟಿಟಿಗೆ ಲಗ್ಗ ಇಟ್ಟಿದೆ. ಥಿಯೇಟರ್‌ನಲ್ಲಿ ಚಿತ್ರ ಯಶಸ್ಸು ಕಾಣದಿದ್ದರೂ ಪವನ್ ಅಭಿನಯಕ್ಕೆ ಅಭಿಮಾನಿಗಳು ಮನ ಸೋತಿದ್ದರು. ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಇನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
ಜುಲೈ 24ರಂದು ವಿಶ್ವಾದ್ಯಂತ ರಿಲೀಸ್ ಆದ ʼಹರಿಹರ ವೀರ ಮಲ್ಲುʼ ಸಿನಿಮಾ ತಿಂಗಳ ಮೊದಲೇ ಅಂದರೆ ಆಗಸ್ಟ್ 20ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಐತಿಹಾಸಿಕ ಕಥಾಹೊಂದಿರುವ ಈ ಚಿತ್ರಕ್ಕೆ ಸಿನಿಮಾ ಮಂದಿರದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಒಟಿಟಿಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇತ್ತೀಚಿನ ದಿನಗಳಲ್ಲಿ ಥಿಯೇಟರ್‌ನಲ್ಲಿ ಸಿನಿಮಾ ತೆರೆ ಕಂಡ ಕೆಲವೇ ದಿನದಲ್ಲಿ ಒಟಿಟಿಗೆ ಬರುವ ಪರಿಪಾಠ ಆರಂಭವಾಗಿದೆ. ಇದೀಗ ನಟ ಪವನ್ ಕಲ್ಯಾಣ್ ಅಭಿನಯದ ʼಹರಿಹರ ವೀರ ಮಲ್ಲುʼ ಸಿನಿಮಾ ಕೂಡ ಬಿಡುಗಡೆಯಾಗಿ ತಿಂಗಳೊಳಗೆ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾದ ಬಳಿಕ ಬಿಡುಗಡೆಯಾದ ಮೊದಲ ಸಿನಿಮಾ ಇದು ಎನ್ನುವುದು ವಿಶೇಷ.
ಈ ಸಿನಿಮಾ 5 ವರ್ಷಗಳ ಹಿಂದೆ ಸೆಟ್ಟೇರಿತ್ತು. ಬಳಿಕ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾಗುತ್ತಲೇ ಇತ್ತು. ಕೊನೆಗೂ ಸಿನಿಮಾ ತೆರೆಗೆ ಬಂದಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಲು ವಿಫಲವಾಗಿದೆ. ಈ ಸಿನಿಮಾ ಇದೀಗ ಅಮೇಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ಹೀಗಾಗಿ ನೀವು ಕೂಡ 5 ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಿಸಬಹುದು.
ಅಮೇಜಾನ್ ಪ್ರೈಮ್ ವಿಡಿಯೊ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿ ಕೊಂಡಿದ್ದು, ಮೊಘಲರ ಆಳ್ವಿಕೆಯ ದಂಗೆ, ಕ್ರೋಧ ಮತ್ತು ಸದಾಚಾರದ ಕಥೆ ಇಲ್ಲಿದೆ. ಅದ್ಭುತ ಸಿನಿಮಾವನ್ನು ಈಗ ನೀವು ಪ್ರೈಮ್‌ನಲ್ಲಿ ವೀಕ್ಷಸಬಹುದು ಎಂದು ಬರೆಯಲಾಗಿದೆ. ಒಟಿಟಿಗೆ ಬಿಡುಗಡೆಯಾಗುವ ಕೆಲವು ಗಂಟೆ ಮೊದಲು ಈ ಪೋಸ್ಟ್ ವೈರಲ್ ಆಗಿತ್ತು.
ಐತಿಹಾಸಿಕ ಘಟನಾವಳಿಗಳ ಸುತ್ತ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಯೋಧನ ಪಾತ್ರ ದಲ್ಲಿ ನಟ ಪವನ್ ಕಲ್ಯಾಣ್ ನಟಿಸಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ಅಬ್ಬರಿಸಿದ್ದಾರೆ. ಗ್ಲಾಮರಸ್ ನಟಿ ನಿಧಿ ಅಗರ್‌ವಾಲ್ ಕೂಡ ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ದೇಶದಲ್ಲಿ 84.3 ಕೋಟಿ ರೂ. ಗಳಿಸಿದೆ. ವಿಶ್ವಾದ್ಯಂತ 113.85 ಕೋಟಿ ರೂ.ಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.