ನವದೆಹಲಿ: ಬಾಲಿವುಡ್ ಖ್ಯಾತ ನಟ ಹಾಗೂ ರಾಜಕಾರಣಿ ರವಿ ಕಿಶನ್ (Ravi Kishan) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಆ್ಯಕ್ಟಿವ್ ಆಗಿರುವ ಇವರು ಇತ್ತೀಚೆಗಷ್ಟೆ ಬಾಲಿವುಡ್ ನ ಜನಪ್ರಿಯ ಕಾಮಿಡಿ ಶೋ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವೈಯಕ್ತಿಕ ಜೀವನದ ಅಪರೂಪದ ಸಂಗತಿ ಒಂದನ್ನು ಹಂಚಿಕೊಂಡಿದ್ದಾರೆ. ಪ್ರತೀ ದಿನ ತಾವು ಮಲಗುವ ಮುನ್ನ ಪತ್ನಿಯ ಪಾದ ಮುಟ್ಟಿ ಕ್ಷಮೆ ಕೇಳುವುದಾಗಿ ನಟ ಅವರು ತಿಳಿಸಿದ್ದು, ಅವರ ಅಭಿಮಾನಿಗಳಿಗೆ ಈ ವಿಚಾರ ಅಚ್ಚರಿ ಎನಿಸಿದೆ.
ಅಜಯ್ ದೇವಗನ್, ಮೃಣಾಲ್ ಠಾಕೋರ್, ರವಿ ಕಿಶನ್ ಅಭಿನಯದ 'ಸನ್ ಆಫ್ ಸರ್ದಾರ್ 2' ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕಾಗಿ ಅವರು ʼದಿ ಗ್ರೇಟ್ ಇಂಡಿಯನ್ ಕಪಿಲ್ ಶೋʼಗೆ ಆಗಮಿಸಿದ್ದರು. ಭೋಜ್‌ಪುರಿ ಸೂಪರ್‌ಸ್ಟಾರ್ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಇದೇ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಅತೀ ಆಸಕ್ತಿಕರ ವಿಚಾರ ನ್ನನು ಬಹಿರಂಗಪಡಿಸಿ ಅಜಯ್ ದೇವವಗನ್ ಸೇರಿದಂತೆ ಎಲ್ಲರನ್ನೂ ಅಚ್ಚರಿಗೊಳಪಡಿಸಿದರು.
ಶೋ ನಿರೂಪಕ ಕಪಿಲ್ ಆರಂಭದಲ್ಲಿ ರವಿ ಕಿಶನ್ ಬಳಿ ನೀವು ಪ್ರತಿದಿನ ಯಾವ ಒಂದು ಅಪ ರೂಪದ ಹವ್ಯಾಸ ಫಾಲೋ ಮಾಡುವುದಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ್ದ ರವಿ ಕಿಶನ್, ʼʼನಾನು ನಿತ್ಯ ರಾತ್ರಿ ಮಲಗುವ ಮುನ್ನ ಪತ್ನಿಯ ಪಾದಗಳನ್ನು ಮುಟ್ಟುತ್ತೇನೆʼʼ ಎಂದು ತಿಳಿಸಿದ್ದಾರೆ. ಅದಕ್ಕೆ ಪುನಃ ಕಪಿಲ್ ಯಾಕೆ ಎಂದು ಪ್ರಶ್ನಿಸಿದ್ದಾರೆ. ʼʼಎಷ್ಟೋ ಸಲ ನಮ್ಮ ವೈಯಕ್ತಿಕ ಜೀವನದ ಕಾರಣಕ್ಕೆ ದಿನವಿಡೀ ಕೆಲವು ಜನರನ್ನು ಭೇಟಿಯಾಗುತ್ತೇವೆ. ಕೆಲವೊಮ್ಮೆ ಸುಳ್ಳು ಹೇಳಬೇಕಾದ ಅನಿವಾರ್ಯತೆ ಸಹ ಎದುರಾಗುತ್ತದೆ. ಇದರ ಜತೆ ಅನೇಕ ತಪ್ಪುಗಳನ್ನು ಕೂಡ ಮಾಡುತ್ತೇವೆ. ಹೀಗಾಗಿ ಎಲ್ಲ ಪಾಪಗಳಿಂದ ಹೊರಬರಲು ನನ್ನ ಪತ್ನಿಯ ಪಾದಗಳನ್ನು ಸ್ಪರ್ಶಿಸಿ ಕ್ಷಮೆಯಾಚಿ ಸುತ್ತೇನೆ. ಆಗ ನನಗೆ ನೆಮ್ಮದಿಯಿಂದ ನಿದ್ದೆ ಬರುತ್ತದೆʼʼ ಎಂದಿದ್ದಾರೆ.
ಇದನ್ನು ಓದಿ:Hikora Movie: ನೀನಾಸಂ ಕಿಟ್ಟಿ ನಿರ್ದೇಶಿಸಿ, ನಟಿಸಿರುವ ʼಹಿಕೋರಾʼ ಚಿತ್ರದ ಹಾಡುಗಳು ರಿಲೀಸ್
ʼʼನಿಮ್ಮ ಪತ್ನಿ ಸುಮ್ಮನೆ ಇರುತ್ತಾರೆಯೇ?ʼʼ ಎಂದು ಮತ್ತೆ ಪ್ರಶ್ನಿಸಿದ್ದಕ್ಕೆ, ʼʼಆಕೆ ಮಲಗಿದ ಮೇಲೆ ತಿಳಿ ಯದಂತೆ ಪಾದ ಮುಟ್ಟುವೆ. ಅವಳು ಹಣ ನೋಡಿ ಬಂದವಳಲ್ಲ. ನನ್ನ ಕಷ್ಟ ಕಾಲಕ್ಕೂ ಜತೆಯಾಗಿ ನಿಂತವಳುʼʼ ಎಂದಿದ್ದಾರೆ. ಇದಕ್ಕೆ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿ, ʼʼಒಬ್ಬ ವ್ಯಕ್ತಿ ಹೆಚ್ಚು ಅಪರಾಧಿಯಾಗಿದ್ದಷ್ಟೂ ತನ್ನ ಪತ್ನಿಯ ಪಾದಗಳಿಗೆ ಹೆಚ್ಚು ಹೆಚ್ಚು ನಮಸ್ಕರಿಸುತ್ತಾನೆʼʼ ಎಂದು ತಮಾಷೆಯಾಗಿ ಹೇಳಿದ್ದಾರೆ.
ನಟ ರವಿ ಕಿಶನ್ 1993ರಲ್ಲಿ ತಮ್ಮ ಬಾಲ್ಯದ ಗೆಳತಿ ಪ್ರೀತಿ ಅವರನ್ನು ಪ್ರೀತಿಸಿ ವಿವಾಹವಾದರು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಇವರ ಪುತ್ರಿ ರಿವಾ ಕಿಶನ್ ʼಸಬ್ ಕುಶಾಲ್ ಮಂಗಲ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಉಳಿದ ಮಕ್ಕಳು ಚಲನಚಿತ್ರೋದ್ಯಮದಿಂದ ದೂರ ಉಳಿದಿದ್ದಾರೆ. 2012ರ ʼಸನ್ ಆಫ್ ಸರ್ದಾರ್ʼ ಚಿತ್ರದ ಮುಂದುವರಿದ ಭಾಗ ʼಸನ್ ಆಫ್ ಸರ್ದಾರ್ 2ʼ ಸಿನಿಮಾ ಆಗಸ್ಟ್ 1ಕ್ಕೆ ರಿಲೀಸ್ ಆಗಲಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.