ದುಬೈ: ದುಬೈಯಲ್ಲಿ ನಡೆದ ಸೈಮಾ 2025 (SIIMA Awards 2025) ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿವಾದ ಭುಗಿಲೆದ್ದಿದೆ. ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಆಯಾ ಭಾಷೆಯ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡುವ ಸಮಾರಂಭ ಇದಾಗಿದ್ದು, ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಈ ಬಾರಿಯೂ ಆಯೋಜಕರು ಸ್ಯಾಂಡಲ್‌ವುಡ್‌ಗೆ ಅವಮಾನ ಎಸಗಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ಸೈಮಾದಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂದು ದುನಿಯಾ ವಿಜಯ್ (Duniya Vijay) ದೂರಿದ್ದಾರೆ.
ಸೈಮಾ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಸಾಮಾನ್ಯವಾಗಿ 2 ದಿನ ನಡೆಯುತ್ತದೆ. ಪ್ರತಿದಿನವೂ 2 ದಕ್ಷಿಣ ಭಾಷೆಯ ಚಿತ್ರರಂಗದ ಪ್ರತಿಭಾವಂತರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯ ಕಾರ್ಯಕ್ರಮ ದುಬೈಯಲ್ಲಿ ನಡೆದಿದೆ. ಸೆಪ್ಟೆಂಬರ್ 5ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ಮತ್ತು ಕನ್ನಡ ಚಿತ್ರರಂಗಕ್ಕೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಈ ವೇಳೆ ತೆಲುಗು ಸಿನಿಮಾದವರಿಗೆ ಆದ್ಯತೆಯನ್ನು ಆಯೋಜಕರು ನೀಡಿದ್ದಾರೆ ಎನ್ನು ಆಕ್ಷೇಪ ಕೇಳಿ ಬಂದಿದೆ. ಇದನ್ನು ದುನಿಯಾ ವಿಜಯ್ ಸೈಮಾ ವೇದಿಕೆ ಮೇಲೆಯೇ ಪ್ರಸ್ತಾವಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: SIIMA 2025: ಸೈಮಾ ಪ್ರಶಸ್ತಿ ಪ್ರಕಟ; ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶಕ, ಇಲ್ಲಿದೆ ವಿಜೇತರ ಪಟ್ಟಿ
ಪ್ರೇಕ್ಷಕರು ಇಲ್ಲದ ವೇಳೆ, ವೇದಿಕೆ ಮುಂಭಾಗ ಬಹುತೇಕ ಖಾಲಿ ಆದಾಗ ಕನ್ನಡ ಚಿತ್ರರಂಗಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮೊದಲಿಗೆ ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಈ ವೇಳೆಗಾಗಲೆ ಸಮಯ ಮೀರಿತ್ತು. ಹೀಗಾಗಿ ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ನಿರ್ಗಮಿಸಿದರು. ತಡವಾಗಿದ್ದ ಕಾರಣ ವೀಕ್ಷಕರೂ ತೆರಳಿದ್ದರು. ಹೀಗಾಗಿ ವೇದಿಕೆ ಮುಂಭಾಗ ಬಣಗುಟ್ಟುತ್ತಿತ್ತು.
ದುನಿಯಾ ವಿಜಯ್ ಹೇಳಿದ್ದೇನು?
‘ಭೀಮ’ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ತೆರಳಿದ ದುನಿಯಾ ವಿಜಯ್ ತಮ್ಮ ಮುಂಭಾಗದಲ್ಲಿದ್ದ ಖಾಲಿ ಕುರ್ಚಿಯನ್ನು ನೋಡಿ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ‘ʼಯಾರೂ ಇಲ್ಲದಿದ್ದಾಗ ಸ್ಟೇಜ್‌ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೊದು ಎಷ್ಟು ಸರಿ? ಕನ್ನಡವನ್ನು ಕೆಳಗಿಳಿಸುವ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮಕ್ಕೆ ಈ ರೀತಿ ಮಾಡಬೇಡಿ. ಹೀಗಾದರೆ ಇನ್ನು ಮುಂದೆ ನಾವ್ಯಾರು ಸೈಮಾ ಕಾರ್ಯಕ್ರಮಕ್ಕೆ ಬರೋದಿಲ್ಲ. ಬೇರೆ ಭಾಷೆಯ ಯಾವ ಸ್ಟಾರ್ ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯೋದು ಯಾಕೆ?’ʼ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.
''ಸುದೀಪ್‌ಗೆ ಅವಾರ್ಡ್ ಕೊಟ್ಟಾಗ ಯಾರು ಇರ್ಲೇ ಇಲ್ಲ. ಅವ್ರು ದೊಡ್ಡ ಸ್ಟಾರ್. ಉಪೇಂದ್ರ ಅಂತ ದೊಡ್ಡ ನಟನಿಗೆ ಕೊನೆಯಲ್ಲಿ ಪ್ರಶಸ್ತಿ ಕೊಡ್ತಾರೆ ಅಂದ್ರೆ ಅರ್ಥ ಮಾಡಿಕೊಳ್ಳಿ. ಉಪೇಂದ್ರ ಕೂಡ ಬೇಜಾರಾದ್ರು. ನಾವೆಲ್ಲ ಒಗ್ಗಟ್ಟು ಆಗ್ಬೇಕು ಅಂದ್ರು. ನಾವು ಕಲಾವಿದರು ಎಲ್ಲ ಸೈಮಾ ಕಾರ್ಯಕ್ರಮ ಬಹಿಷ್ಕರಿಸಬೇಕುʼʼ ಎಂದಿದ್ದಾರೆ. ಕಳೆದ ವರ್ಷವೂ ಸೈಮಾ ವೇದಿಕೆಯಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಸದ್ಯ ಈ ವಿಚಾರ ಬಾರಿ ಚರ್ಚೆಯಾಗುತ್ತಿದೆ.
ಕನ್ನಡದಲ್ಲಿ ಪ್ರಶಸ್ತಿ ಪಡೆದ ಪ್ರಮುಖರು
ಅತ್ಯುತ್ತಮ ನಟ: ಸುದೀಪ್ (ʼಮ್ಯಾಕ್ಸ್ʼ)
ಅತ್ಯುತ್ತಮ ನಟಿ: ಆಶಿಕಾ ರಂಗನಾಥ್ (‘02’)
ಅತ್ಯುತ್ತಮ ಸಿನಿಮಾ: ‘ಕೃಷ್ಣಂ ಪ್ರಣಯ ಸಖಿ’
ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ʼಮ್ಯಾಕ್ಸ್ʼ)
ಅತ್ಯುತ್ತಮ ಹಾಸ್ಯನಟ: ಜಾಕ್ ಸಿಂಗಂ (ʼಭೀಮʼ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ʼಶಾಖಾಹಾರಿʼ)
ಅತ್ಯುತ್ತಮ ಚೊಚ್ಚಲ ನಟ: ಸಮರ್ಜಿತ್ ಲಂಕೇಶ್ (ʼಗೌರಿʼ)
ಭರವಸೆ ಮೂಡಿಸಿದ ಹೊಸ ಪ್ರತಿಭೆ-ಸಾನ್ಯಾ ಅಯ್ಯರ್ (ʼಗೌರಿʼ)
ಅತ್ಯುತ್ತಮ ಚೊಚ್ಚಲ ನಟಿ: ಅಂಕಿತಾ ಅಮರ್ (ʼಇಬ್ಬನಿ ತಬ್ಬಿದಾ ಇಳೆಯಲಿʼ)
ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ʼಇಬ್ಬನಿ ತಬ್ಬಿದ ಇಳೆಯಲಿʼ)