ಮುಂಬೈ: 'ಆಶಿಕ್ ಬಾನಾಯ ಆಪ್ನೆ' ಚಿತ್ರದ ಮೂಲಕ ಜನಪ್ರಿಯರಾದ ನಟಿ ತನುಶ್ರೀ ದತ್ತಾ (Tanushree Dutta) ಇತ್ತೀಚೆಗೆ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಮೀಟೂ ಆಂದೋಲನದಲ್ಲಿ ನೇರ ಮತ್ತು ದಿಟ್ಟ ನಿರ್ಧಾರಗಳಿಂದ ಎಲ್ಲರ ಗಮನ ಸೆಳೆದ ಅವರು ಸದ್ಯ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಇತ್ತೀಚೆಗಷ್ಟೆ ತಮ್ಮ ಕುಟುಂಬದವರೆ ತನಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಿ ವೈರಲ್ ಆಗಿದ್ದರು. ಇದೀಗ ಶ್ರಾವಣ ಮಾಸದಲ್ಲಿ ಮಟನ್ ಸೇವನೆ ಮಾಡುವುದಾಗಿ ಹೇಳಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ತನುಶ್ರೀ ದತ್ತಾ ಮೊದಲಿಂದಲೂ ಆಯುರ್ವೇದದ ಆಹಾರ ಕ್ರಮಗಳಿಗೆ ಅಧಿಕ ಒಲವು ನೀಡುತ್ತ ಬಂದಿದ್ದಾರೆ. ಇತ್ತೀಚೆಗಷ್ಟೇ ಇವರು ಪವಿತ್ರ ಶ್ರಾವಣ ಮಾಸದಲ್ಲಿ ಉಪವಾಸದ ನಂತರ ಮಟನ್ ತಿನ್ನುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಅನೇಕರು ಮಾಂಸವನ್ನು ತಿನ್ನುವುದು ಬಿಟ್ಟು ತರಕಾರಿ ಸೇವಿಸುತ್ತಾರೆ. ಈ ಮೂಲಕ ಕಟ್ಟುನಿಟ್ಟಾದ ಆಧ್ಯಾತ್ಮಿಕ ಶಿಸ್ತನ್ನು ಅನುಸರಿಸುತ್ತಾರೆ. ಆದರೆ ಅವರು ಸೂರ್ಯಾಸ್ತದ ನಂತರ ಮಟನ್, ದಾಲ್ ಮತ್ತು ಅನ್ನವನ್ನು ಸೇವಿಸುದಾಗಿ ಪೋಸ್ಟ್ ಹಂಚಿಕೊಂಡಿದ್ದರು.
ಇದನ್ನು ಕಂಡ ಕೆಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಭಾರತೀಯರು ಅನೇಕ ವರ್ಷದಿಂದ ಪಾಲಿಸಿಕೊಂಡು ಬರುವ ಶ್ರಾವಣ ಉಪವಾಸಕ್ಕೆ ನಟಿ ತನುಶ್ರೀ ಅವಮಾನಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ. ಮತ್ತೊಬ್ಬ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯಿಸಿ ಮಟನ್ ಸೇವಿಸುವುದು ಶ್ರಾವಣ ಮಾಸದ ಉಪವಾಸವೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಆಹಾರ ಕ್ರಮದ ಬಗ್ಗೆ ನೆಟ್ಟಿಗರು ಆರೋಪಿಸುವ ಬಗ್ಗೆ ನಟಿ ತನುಶ್ರೀ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ:Tanushree Dutta: ಬಾಲಿವುಡ್‌ನಲ್ಲಿ ಇದ್ಯಾ ಮಾಫಿಯಾ ಗ್ಯಾಂಗ್? ಮೀಟೂ ನಟಿ ತನುಶ್ರೀ ದತ್ತಾ ಹೇಳಿದ್ದೇನು?
ನಟಿ ತನುಶ್ರೀ ದತ್ತಾ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಟನ್ ಸೇವನೆ ಮಾಡುವುದು ನನ್ನ ವೈಯಕ್ತಿಕ ಆಯ್ಕೆ. ನನ್ನ ಕೃಷ್ಣನ ಭಕ್ತಿಗೂ ಆಹಾರ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಭಗವಂತನು ನಮ್ಮ ಭಕ್ತಿಯನ್ನು ನೋಡುತ್ತಾನೆ. ಪ್ರತಿಯೊಬ್ಬರ ಸಂಸ್ಕೃತಿ ಮತ್ತು ಹಿನ್ನೆಲೆ ವಿಭಿನ್ನವಾಗಿರುತ್ತದೆ. ನಾನು ಬಂಗಾಳಿ ಬ್ರಾಹ್ಮಣ ಮೂಲದವಳಾಗಿದ್ದು ಮಟನ್ ಅನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ದುರ್ಗಾ ಮಾತೆ ಹಾಗೂ ಕಾಳಿ ಪೂಜೆ ಮಾಡುವಾಗ ದೇವರಿಗೆ ನೈವೇದ್ಯ ಅರ್ಪಿಸುತ್ತೇವೆ. ಈ ಬಗ್ಗೆ ತಿಳಿಯದೇ ಕಾಮೆಂಟ್ ಹಾಕಬೇಡಿ. ಮಟನ್ ಸೇವನೆ ಕೂಡ ನಮ್ಮ ಸಂಪ್ರದಾಯದ ಒಂದು ಭಾಗ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ತನ್ನ ಸಂಪ್ರದಾಯ ತಿಳಿಯದೇ ತಾನು ಮಾಡಿದ್ದ ವಿಡಿಯೊವನ್ನು ತಮಗೆ ಬೇಕಾದ ಹಾಗೆ ಟ್ರೋಲ್ ಮಾಡಿದ್ದ ಟ್ರೋಲರ್ಸ್‌ಗೆ ಸರಿಯಾಗೆ ಟಾಂಗ್ ನೀಡಿದ್ದಾರೆ. ತನ್ನ ವೈಯಕ್ತಿಕ ವಿಚಾರ, ಆಹಾರ ಕ್ರಮ ಇತ್ಯಾದಿಗಳ ಬಗ್ಗೆ ಅನಗತ್ಯ ಟ್ರೋಲ್ ಮಾಡುವವರು ಸರಿಯಾಗಿ ಯೋಚಿಸಿ ಕಮೆಂಟ್ ಮಾಡಲು ಕೂಡ ಇವರು ಸಲಹೆ ನೀಡಿದ್ದಾರೆ.