ಬೆಂಗಳೂರು: ಕನ್ನಡದ ನಂಬರ್ 1 ಆ್ಯಂಕರ್ ಅನುಶ್ರೀ ಆಗಸ್ಟ್ 28ರಂದು ದಾಂಪತ್ಯ ಜೀವನಕ್ಕೆ (Anchor Anushree And Roshan Marriage) ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಅನುಶ್ರೀ ತಮ್ಮ ದೀರ್ಘ ಕಾಲದ ಗೆಳೆಯ ರೋಷನ್‌ನೊಂದಿಗೆ ಹಸೆಮಣೆ ಏರಿದ್ದಾರೆ. ಈ ಅದ್ಧೂರಿ ವಿವಾಹ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಾಕ್ಷಿಯಾಗಿದ್ದು, ನೂತನ ವಧು-ವರರಿಗೆ ಶುಭ ಹಾರೈಸಿದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ತಾರಾ, ಪ್ರೇಮಾ, ಸಂಗೀತ ನಿರ್ದೇಶಕ ಹಂಸಲೇಖ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಶರಣ್, ವಿಜಯ ರಾಘವೇಂದ್ರ, ನೆನಪಿರಲಿ ಪ್ರೇಮ್ ಮತ್ತಿತರರು ಭಾಗವಹಿಸಿದರು. ನಾನೇ ಗಂಡು ಹುಡುಕ್ತೀನಿ ಎಂದಿದೆ ಎಂಬುದಾಗಿ ಶಿವ ರಾಜ್‌ಕುಮಾರ್ ತಿಳಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ʼʼಅನುಶ್ರೀ ನನಗೊಂದು ಗಂಡು ಹುಡುಕಿ ಎನ್ನುತ್ತಿದ್ದರು. ಅದಕ್ಕೆ ನಾನು ಸರಿ ಎಂದಿದ್ದೆ. ರೋಷನ್ ನಂಗೆ ಮೊದಲಿನಿಂದಲೂ ಗೊತ್ತು. ಅನುಶ್ರೀ ಬಹಳ ಕಷ್ಟುಪಟ್ಟು ಮೇಲೆ ಬಂದಿದ್ದಾರೆ. ಈಗ ಅವರನ್ನು ನೋಡಲು ಖುಷಿ ಆಗ್ತಿದೆ. ರೋಷನ್ ಬಗ್ಗೆ ಹೆಚ್ಚಿಗೆ ನನಗೆ ತಿಳಿದಿರಲಿಲ್ಲ. ಚೆನ್ನಾಗಿರಿ, ಖುಷಿ ಖುಷಿಯಿಂದ ಇರಿ ಎಂದು ಕಿವಿಮಾತು ಹೇಳಿದ್ದೇನೆʼʼ ಎಂಬುದಾಗಿ ವಿವರಿಸಿದರು.
ಈ ಸುದ್ದಿಯನ್ನೂ ಓದಿ: Anchor Anushree: ಅನುಶ್ರೀ ಮದುವೆಗೆ ಬಂದ ಅಭಿಮಾನಿಗಳಿಗೆ ನಿರಾಸೆ; ಒಳಗೆ ಬಿಡ್ತಿಲ್ಲಾ ಎನ್ನುತ್ತಿರುವ ಫ್ಯಾನ್ಸ್
ತರುಣ್ ಸುಧೀರ್ ಹೇಳಿದ್ದೇನು?
ನಿರ್ದೇಶಕ ತರುಣ್ ಸುಧೀರ್ ಮಾತನಾಡಿಗ ನವ ಜೋಡಿಗೆ ಶುಭ ಹಾರೈಸಿದರು. ʼʼಅನುಶ್ರೀ ತಾಯಿ ತುಂಬ ಭಾವುಕರಾಗಿದ್ದಾರೆ. ರೋಷನ್ ನಂಗೆ ವರ್ಷದ ಹಿಂದಿನಿಂದಲೂ ಪರಿಚಯ. ಅವರು ಉತ್ತಮ ವ್ಯಕ್ತಿ. ಅವರಿಬ್ಬರು ಉತ್ತಮ ಜೋಡಿ. ರೋಷನ್ ಅದ್ಭುತವಾಗಿ ಬಿರಿಯಾನಿ ಮಾಡುತ್ತಾರೆ. ರೋಷನ್ ಕೂಡ ಮಂಗಳೂರು ಮೂಲದವರು. ಕಾಮನ್ ಫ್ರೆಂಡ್ಸ್ ಮೂಲಕ ರೋಷನ್ ಮತ್ತು ಅನುಶ್ರೀ ಪರಿಚಿತರಾದರುʼʼ ಎಂದು ತಿಳಿಸಿದ್ದಾರೆ.
ನಟ ಶರಣ್ ಮಾತನಾಡಿ, ʼʼನಿರೂಪಕಿ ಬದುಕು ಅಷ್ಟು ಸುಲಭವಲ್ಲ. ಅವರ ಶ್ರಮ ಎಲ್ಲರಿಗೂ ಸ್ಫೂರ್ತಿದಾಯಕ. ಬೆಳಗ್ಗಿನ ಜಾವ, ತಡರಾತ್ರಿ ಶೂಟಿಂಗ್ ಇದ್ದರೂ ಒಬ್ಬ ನಿರೂಪಕಿ ಮಾತ್ರ ಇಡೀ ಶೋ ಮುಗಿಯುವವರೆಗೆ ಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅನುಶ್ರೀಯವರ ಪರಿಶ್ರಮ ಎಷ್ಟರಮಟ್ಟಿಗೆ ಇದೆ ಎಂಬುದು ನಾಡಿನ ಜನತೆಗೆ ಇದೆ. ಅದಕ್ಕಿಂತ ಹೆಚ್ಚು ನನಗಿದೆ. ಅದೆಷ್ಟೋ ಬಾರಿ ನಾನೇ ಅಚ್ಚರಿಪಟ್ಟಿದ್ದೇನೆ. ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿತ್ತು. ಇಂದು ಅವರು ನಮಗೆಲ್ಲರಿಗೂ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆʼʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಅನುಶ್ರೀ ಆ್ಯಂಕರ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಜನಪ್ರಿಯ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಝೀ ಕನ್ನಡ ವಾಹಿನಿಯ ಮುಖ್ಯ ಕಾರ್ಯಕ್ರಮಗಳಿಗೆ ಅವರದೇ ನಿರೂಪಣೆ ಇರುತ್ತದೆ. ಜತೆಗೆ ಹಲವು ಸಿನಿಮಾಗಳ ಟ್ರೈಲರ್ ಲಾಂಚ್ ಮುಂತಾದ ಕಾರ್ಯಕ್ರಮಗಳನ್ನೂ ನಿರ್ವಹಿಸುತ್ತಾರೆ. ಅವರದೇ ಯೂಟ್ಯೂಬ್ ಚಾನೆಲ್ ಕೂಡ ಇದೆ.