ಬೆಂಗಳೂರು: ಕೆಆರ್‌ಜಿ ಸ್ಟುಡಿಯೋಸ್ (KRG Studios) ನಿರ್ಮಿಸಿ, ಪ್ರೆಸೆಂಟ್ ಮಾಡುತ್ತಿರುವ 'ಶೋಧ' (Shodha) ವೆಬ್ ಸರಣಿ ಇದೇ ತಿಂಗಳ 22ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪ್ರಮುಖ ಪಾತ್ರದಲ್ಲಿ ನಟ, ನಿರ್ದೇಶಕ ಪವನ್ ಕುಮಾರ್ (Pawan Kumar) ನಟಿಸುತ್ತಿದ್ದಾರೆ. ಇದೀಗ 'ಶೋಧ' ವೆಬ್ ಸರಣಿಯ ಮತ್ತೊಂದು ಪ್ರಮುಖ ಪಾತ್ರವನ್ನು ಪರಿಚಯಿಸಲಾಗಿದೆ (Shodha Web Series). ಸಿರಿ ರವಿಕುಮಾರ್ (Siri Ravikumar) 'ಶೋಧ' ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
'ಕವಲುದಾರಿ', 'ಸಕುಟುಂಬ ಸಮೇತ' ಹಾಗೂ 'ಸ್ವಾತಿ ಮುತ್ತಿನ ಮಳೆ ಹನಿ' ಸಿನಿಮಾಗಳ ಮೂಲಕ ಗಮನ ಸೆಳೆದ ಸಿರಿ ರವಿಕುಮಾರ್ ಈಗ ಥ್ರಿಲ್ಲರ್ ಕಥಾಹಂದರದ 'ಶೋಧ' ಸರಣಿಯ ಭಾಗವಾಗಿದ್ದಾರೆ. ಆರು ಸಂಚಿಕೆಯುಳ್ಳ ಈ ವೆಬ್ ಸರಣಿಗೆ ಸುಹಾಸ್ ನವರತ್ನ ಕಥೆ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Web Series: ಪುಷ್ಪಾ, ಬಾಹುಬಲಿ ಸಿನಿಮಾಗಿಂತಲೂ ಬಿಗ್ ಬಜೆಟ್ ವೆಬ್ ಸೀರಿಸ್ ಇದು! ಆದ್ರೂ ರಿಲೀಸ್ ಯಾಕೆ ಆಗಿಲ್ಲ?
ʼಶೋಧʼ ವೆಬ್ ಸರಣಿ ಬಗ್ಗೆ ಮಾತನಾಡಿದ ಸಿರಿ ರವಿಕುಮಾರ್, ʼʼರಂಗಭೂಮಿಯಿಂದ ಸಿನಿಮಾದವರೆಗೆ, ಗಾಯನದಿಂದ ನಟನೆವರೆಗೆ, ನನ್ನನ್ನು ನಾನು ಕಲಾವಿದೆಯಾಗಿ ರೂಪಿಸಿಕೊಳ್ಳುತ್ತಾ ಬಂದಿದ್ದೇನೆ. ʼಶೋಧʼ ಒಂದು ಅದ್ಭುತ ಕಥೆ. ಈ ಥ್ರಿಲ್ಲರ್ ಕಥಾಹಂದರದ ಭಾಗವಾಗಿರುವುದು ಖುಷಿಯಾಗಿದೆʼʼ ಎಂದು ಹೇಳಿದ್ದಾರೆ.
ʼಶೋಧʼ ವೆಬ್ ಸರಣಿ ಬಗ್ಗೆ ಮಾತನಾಡಿದ ಪವನ್ ಕುಮಾರ್, ʼಶೋಧʼದಲ್ಲಿ ನಟಿಸುವುದು ನನಗೆ ಹೊಸ ಪ್ರಯಾಣ. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನಂತರ, ಕ್ಯಾಮೆರಾ ಮುಂದೆ ಹೆಜ್ಜೆ ಹಾಕುವುದು ಹೊಸ ಅನುಭವವಾಗಿತ್ತುʼʼ ಎಂದಿದ್ದಾರೆ.
'ಅಯ್ಯನ ಮನೆ' ಸರಣಿ ಬಳಿಕ zee5ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮತ್ತೊಂದು ವೆಬ್ ಸರಣಿ ಈ ʼಶೋಧʼ. ಆಗಸ್ಟ್ 22ರಂದು ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ. ಈ ವೆಬ್ ಸರಣಿಗೆ ಸುನಿಲ್ ಮೈಸೂರು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ಗೌಡ ನೇತೃತ್ವದ ಕೆಆರ್‌ಜಿ ಸ್ಟುಡಿಯೋಸ್ ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಹಾಗೂ ಸಿನಿಮಾ ವಿತರಣೆ ವಿಭಾಗದಲ್ಲಿ ಗುರುತಿಸಿಕೊಂಡಿದೆ. ಭಿನ್ನ, ಗುಣಮಟ್ಟದ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಿಸುತ್ತಿರುವ ಕೆಆರ್‌ಜಿ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಇದೇ ಮೊದಲ ಬಾರಿಗೆ ವೆಬ್ ಸೀರಿಸ್ ನಿರ್ಮಾಣಕ್ಕೆ ಮುಂದಾಗಿದೆ. ಈ ಹೊದ ಪ್ರಯೋಗ ಶೋಧಕ್ಕೆ Zee5 ಕೈ ಜೋಡಿಸಿದೆ.
ʼಮನಸಾರೆʼ, ʼಪಂಚರಂಗಿʼ, ʼಲೈಫು ಇಷ್ಟೇನೆʼ ಮತ್ತು ಕಲ್ಟ್ ಸೈಕಲಾಜಿಕಲ್ ಥ್ರಿಲ್ಲರ್ ʼಲೂಸಿಯಾʼ ಸಿನಿಮಾಗಳ ಮೂಲಕ ನಟನೆ ಹಾಗೂ ನಿರ್ದೇಶನದಲ್ಲಿ ಹೆಸರು ಮಾಡಿರುವ ಪವನ್ ಕುಮಾರ್, ʼಶೋಧ ʼವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.