ಬೆಂಗಳೂರು: ಜಾಗತಿಕ ಸಿನಿ ರಸಿಕರ ಗಮನ ಸೆಳೆದ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ಅದ್ಧೂರಿ ನಿರ್ಮಾಣದ, ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಮುಂದಾಗಿದೆ. ಅದರ ಭಾಗವಾಗಿ ಇಷ್ಟು ದಿನ ಯಾವೆಲ್ಲ ಕಲಾವಿದರು ನಟಿಸುತ್ತಿದ್ದಾರೆ ಎನ್ನುವ ಗುಟ್ಟನ್ನು ಬಿಟ್ಟು ಕೊಡದ ಚಿತ್ರತಂಡ ಇದೀಗ ಒಂದೊಂದೇ ವಿವರಗಳನ್ನು ಬಹಿರಂಗಪಡಿಸುತ್ತಿದೆ. ಜತೆಗೆ ಇದೀಗ ಸಿನಿಮಾ ಕುರಿತಾದ ಅಪರೂಪದ ವಿಚಾರವೊಂದನ್ನು ಸ್ಟಂಟ್ ಕೊರಿಯೋಗ್ರಾಫ್ ಅರುಣ್ ರಾಜ್ ವಿವರಿಸಿದ್ದಾರೆ. ರಿಷಬ್ ಶೆಟ್ಟಿ ಡ್ಯೂಪ್ ಬಳಸದೆ ಸ್ವತಃ ಆ್ಯಕ್ಷನ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂದಿದ್ದಾರೆ.
2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ವಿವಿಧ ಭಾಷಿಕರಿಂದ ಮೆಚ್ಚುಗೆ ಪಡೆದ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಈಗಾಗಲೇ ಕುತೂಹಲ ಕೆರಳಿಸಿದೆ. ರಿಷಬ್ ಶೆಟ್ಟಿ ಜತೆಗೆ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಮತ್ತು ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಗ್ಲಾನ್ ಚಿತ್ರವನ್ನು ಮನ್ನಷ್ಟು ಪರಿಣಾಮಕಾರಿಯಾಗಲು ಶ್ರಮಿಸಿದ್ದಾರೆ.
ಅರುಣ್ ರಾಜ್ ಹೇಳಿದ್ದೇನು?
ಸಾಮಾನ್ಯವಾಗಿ ಕೆಲವೊಂದು ಅಪಾಯಕಾರಿ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ನಾಯಕನ ಬದಲು ನುರಿತ ಡ್ಯೂಪ್ ಅನ್ನು ಬಳಸಲಾಗುತ್ತದೆ. ಅಂದರೆ ನಾಯಕ ಬದಲು ಅವರಂತೆ ಇರುವ ಸ್ಟಂಟ್ ಮ್ಯಾನ್ ಅನ್ನು ಬಳಸಲಾಗುತ್ತದೆ. ಆದರೆ ರಿಷಬ್ ಶೆಟ್ಟಿ ʼಕಾಂತಾರ: ಚಾಪ್ಟರ್ 1ʼ ಚಿತ್ರಕ್ಕಾಗಿ ಡ್ಯೂಪ್, ಬಾಡಿ ಡಬಲ್ (ಕಷ್ಟದ ಸ್ಟಂಟ್ಗಳಲ್ಲಿ ಬೇರೆ ವ್ಯಕ್ತಿ ಬಳಕೆ ಮಾಡೋದು) ಸಹಾಯ ಪಡೆದುಕೊಂಡಿಲ್ಲ ಎನ್ನುವುದು ವಿಶೇಷ. ಈ ಬಗ್ಗೆ ಅರುಣ್ ರಾಜ್ ಮಾಹಿತಿ ನೀಡಿ, ʼʼನಾವು ರಿಷಬ್ ಅವರಿಗಾಗಿ ಬಾಡಿ ಡಬಲ್ ಬಳಸಿಲ್ಲ. ಅವರೇ ಸ್ವತಃ ಅಪಾಯಕಾರಿ ಪಾಲ್ಗೊಂಡಿದ್ದಾರೆ. ಬಾಡಿ ಲ್ಯಾಂಗ್ವೇಜ್ ವ್ಯತ್ಯಸ್ತವಾಗಿರುವುದರಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ರಿಷಬ್ ಸಿನಿಮಾಕ್ಕಾಗಿ ಕಳರಿಪಯಟ್ಟು, ಕತ್ತಿ ವರಸೆ ಮತ್ತು ಕುದುರೆ ಸವಾರಿ ಕಲಿತಿದ್ದಾರೆ. ಜತೆಗೆ ಹಲವು ಕಷ್ಟದ ಸ್ಟಂಟ್ಗಳನ್ನು ಮಾಡಿದ್ದಾರೆʼʼ ಎಂದು ತಿಳಿಸಿದ್ದಾರೆ.
ʼʼನಾನು ಸಾಕಷ್ಟು ನಟರ ಜತೆ ಕೆಲಸ ಮಾಡಿದ್ದೇನೆ. ಆದರೆ ರಿಷಬ್ ಶೆಟ್ಟಿ ಅವರೆಲ್ಲರಿಇಂತ ಭಿನ್ನ. ನನ್ನ ಕೈಲಾದಷ್ಟು ಮಾಡುತ್ತೇನೆ ಎಂದು ಅವರು ಹೇಳಲ್ಲ. ಸರಿಯಾಗಿ ಮೂಡಿಬರುವವರೆಗೂ ಮಾಡುತ್ತೇನೆ ಎನ್ನುವುದು ಅವರ ಧೋರಣೆʼʼ ಎಂದು ವಿವರಿಸಿದ್ದಾರೆ. ಒಟ್ಟಿನಲ್ಲಿ ದೊಡ್ಡ ರಿಸ್ಕ್ ತೆಗೆದುಕೊಂಡಿರುವ ರಿಷಬ್ ʼಕಾಂತಾರʼಕ್ಕಿಂತಲೂ ಪ್ರೀಕ್ವೆಲ್ ಅನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಮುಂದಾಗಿದ್ದಾರೆ.
ʼಕಾಂತಾರ: ಚಾಪ್ಟರ್ 1ʼರಲ್ಲಿ ರೋಚಕ ಯುದ್ಧದ ಸನ್ನಿವೇಶವೊಂದು ಪ್ರಮುಖವಾಗಿರಲಿದೆಯಂತೆ. ಇದಕ್ಕಾಗಿ ಚಿತ್ರತಂಡ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ 500ಕ್ಕೂ ಹೆಚ್ಚು ನುರಿತ ಸ್ಟಂಟ್ ಮ್ಯಾನ್‌ಗಳ ಜತೆಗೆ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಜತೆಗೆ ಈ ವೇಳೆ 3,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸುಮಾರು 25 ಎಕರೆಗಳಷ್ಟು ವಿಶಾಲ ಭೂಪ್ರದೇಶದಲ್ಲಿ ಇದಕ್ಕಾಗಿ ನಿರ್ಮಿಸಿದ ಬೃಹತ್ ಸೆಟ್‌ನಲ್ಲಿ 45-50 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತಿದೊಡ್ಡ ಯುದ್ಧದ ಸನ್ನಿವೇಶಗಳಲ್ಲಿ ಒಂದು ಎನಿಸಿಕೊಳ್ಳಲಿದೆ. ಹೀಗೆ ಆರಂಭದಿಂದಲೇ ಕುತೂಹಲ ಕೆರಳಿಸಿದ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ಇತ್ತೀಚೆಗೆ ತೆರೆಕಂಡ ಸ್ಯಾಂಡಲ್‌ವುಡ್‌ನ ಸು ಫ್ರಮ್ ಸೋ ಚಿತ್ರದ ಮೂಲಕ ಗಮನ ಸೆಳೆದ ನಟ ಶನೀಲ್ ಗೌತಮ್ ಅವರು ರಿಷಬ್ ಶೆಟ್ಟಿ ಮತ್ತು ತಂಡದೊಂದಿಗಿನ ಫೋಟೊ ಶೇರ್ ಮಾಡಿ ಚಿತ್ರದ ರಿಲೀಸ್‌ಗೆ ಇನ್ನೂ ಕೆಲವೇ ದಿನ ಬಾಕಿ ಉಳಿದಿದೆ ಎಂದು ಪೋಸ್ಟ್ ಮಾಡಿದ್ದಾರೆ.