ಮುಂಬೈ: ಪ್ರಶಾಂತ್ ನೀಲ್ (Prashanth Neel) ನಿರ್ದೇಶದ 'ಕೆಜಿಎಫ್' (KGF) ಸರಣಿ ಚಿತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ದೇಶದ ಬಹು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. 2022ರಲ್ಲಿ ರಿಲೀಸ್ ಆದ ʼಕೆಜಿಎಫ್ 2ʼ ಸಿನಿಮಾದ ಬಳಿಕ ಅವರು ತೆರೆಮೇಲೆ ಕಾಣಿಸಿಕೊಂಡಿಲ್ಲ. ಇದೀಗ ಬಹುನಿರೀಕ್ಷಿತ ಎರಡೆರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನ 'ರಾಮಾಯಣ' ಮತ್ತು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗುತ್ತಿರುವ ʼಟಾಕ್ಸಿಕ್ʼ (Toxic Movie) ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಗೀತು ಮೋಹನ್‌ದಾಸ್ ನಿರ್ದೇಶನದ ʼಟಾಕ್ಸಿಕ್ʼ ಚಿತ್ರದ ಆ್ಯಕ್ಷನ್ ದೃಶ್ಯದಲ್ಲಿ ನಟಿಸಲು ಅವರು ಮುಂಬೈಗೆ ತೆರಳಿದ್ದಾರೆ.
ಕೆಲವು ದಿನಗಳ ಬ್ರೇಕ್ ನಂತರ ʼಟಾಕ್ಸಿಕ್ʼ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಯಶ್ ಜತೆಗೆ ಬಾಲಿವುಡ್‌ನ ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಅಕ್ಷಯ್ ಓಬೆರಾಯ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಶೆಡ್ಯೂಲ್‌ನಲ್ಲಿ 3 ವಾರಗಳ ಕಾಲ ಚಿತ್ರೀಕರಣ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: Toxic Movie: ಹಾಲಿವುಡ್ ಲೆವೆಲ್‌ನಲ್ಲಿ ತಯಾರಾಗುತ್ತಿದೆ ʼಟಾಕ್ಸಿಕ್ʼ; ಇಂಗ್ಲಿಷ್‌ನಲ್ಲೂ ಶೂಟಿಂಗ್
ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ
ʼಟಾಕ್ಸಿಕ್ʼ ಚಿತ್ರವನ್ನು ಕನ್ನಡ ಜತೆಗೆ ಇಂಗ್ಲಿಷ್‌ನಲ್ಲೂ ನಿರ್ಮಾಣ ಮಾಡಲಾಗುತ್ತಿರುವ ಕಾರಣ ಇದು ಹಾಲಿವುಡ್ ಚಿತ್ರದ ಮಾದರಿಯಲ್ಲಿ ಮೂಡಿ ಬರುತ್ತಿದೆ. ಗೋವಾದಲ್ಲಿ ನಡೆಯುವ ಡ್ರಗ್ಸ್ ಮಾಫಿಯಾದ ಸುತ್ತ ಕಥೆ ಸಾಗಲಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಇದೇ ಸಿನಿಮಾದ ಹೈಲೈಟ್ ಆಗಿರಲಿದ್ದು, ಇದನ್ನು ಅದ್ಧೂರಿಯಾಗಿ ಸೆರೆ ಹಿಡಿಯಲು ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ಧರಿಸಿದ್ದಾರೆ.
ʼʼಜು. 21ರಂದು ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ʼಟಾಕ್ಸಿಕ್ʼ ಚಿತ್ರ ಶೂಟಿಂಗ್ ಆರಂಭವಾಗಿದೆ. ಸದ್ಯ ಇನ್‌ಡೋರ್‌ನಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ನಾಯಕ ಮತ್ತು ವಿಲನ್ ನಡುವಿನ ಕಾದಾಟದ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆʼʼ ಎಂದು ಮೂಲಗಳು ತಿಳಿಸಿವೆ. ʼʼ15 ತಂತ್ರಜ್ಞರ ತಂಡವನ್ನು ಸುರಕ್ಷತೆಗಾಗಿ ಶೂಟಿಂಗ್ ವೇಳೆ ನಿಯೋಜಿಸಲಾಗಿದೆ. ಇವರು ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಕಲಾವಿದರಿಗೆ ನೆರವಾಗಲಿದ್ದಾರೆ. ಆ್ಯಕ್ಷನ್ ದೃಶ್ಯಗಳು ತುಂಬ ಹಿಂಸಾತ್ಮಕವಾಗಿರಲಿದೆʼʼ ಎಂದು ಮಿಡ್ ಡೇ ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಹಾಲಿವಯಡ್ ತಂತ್ರಜ್ಞರೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ವಿಶೇಷ ಎಂದರೆ ಈ ಚಿತ್ರದಲ್ಲಿ ಅನೇಕ ಮಹಿಳಾ ಪಾತ್ರವಿದೆ. ಚಿತ್ರಕ್ಕೆ ಬಹುಮುಖ್ಯ ತಿರುವು ನೀಡುವ ಪಾತ್ರಗಳು ಇವು ಎನ್ನಲಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ನಯನತಾರಾ ಯಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದೂವರೆ ದಶಕಗಳ ಬಳಿಕ ಅವರು ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಕೆಲವು ದಿನಗಳ ಹಿಂದೆ ರಿಲೀಸ್ ಆದ ಟೀಸರ್ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಲ್ಲಿ ಯಶ್ ಹ್ಯಾಟ್ ಧರಿಸಿ ಸಂಪೂರ್ಣ ರೆಟ್ರೋ ಶೈಲಿಯಲ್ಲಿ ಕಂಡು ಬಂದಿದ್ದಾರೆ. ಈ ಚಿತ್ರ 2026ರ ಮಾರ್ಚ್ 19ರಂದು ಕನ್ನಡ, ಇಂಗ್ಲಿಷ್ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಲಂನಲ್ಲೂ ರಿಲೀಸ್ ಆಗಲಿದೆ.