#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Toxic Movie: ಹಾಲಿವುಡ್‌ ಲೆವೆಲ್‌ನಲ್ಲಿ ತಯಾರಾಗುತ್ತಿದೆ ʼಟಾಕ್ಸಿಕ್‌ʼ; ಇಂಗ್ಲಿಷ್‌ನಲ್ಲೂ ಶೂಟಿಂಗ್‌

ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ʼಟಾಕ್ಸಿಕ್‌ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರತಿಭಾನ್ವಿತ ನಿರ್ದೇಶಕಿ ಗೀತು ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದ ಶೂಟಿಂಗ್‌ ಆರಂಭವಾಗಿದೆ. ಹಾಲಿವುಡ್‌ ಲೆವೆಲ್‌ನಲ್ಲಿ ತಯಾರಾಗುತ್ತಿರುವ ಚಿತ್ರ ಬಗ್ಗೆ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಹಾಲಿವುಡ್‌ ಲೆವೆಲ್‌ನಲ್ಲಿ ತಯಾರಾಗುತ್ತಿದೆ ʼಟಾಕ್ಸಿಕ್‌'

Profile Ramesh B Feb 9, 2025 4:39 PM

ಬೆಂಗಳೂರು: ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ʼಕೆಜಿಎಫ್‌ʼ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಾಕಿಂಗ್‌ ಸ್ಟಾರ್‌ ಯಶ್‌ (Yash) ʼಕೆಜಿಎಫ್‌: ಚಾಪ್ಟರ್‌ 2ʼ ಸಿನಿಮಾ ಮೂಲಕ ತಮ್ಮ ಖ್ಯಾತಿಯನ್ನು ವಿಶ್ವಾದ್ಯಂತ ಹೆಚ್ಚಿಕೊಂಡಿದ್ದಾರೆ. ಈಗ ಅವರಿಗೆ ಭಾರತ ಮಾತ್ರವಲ್ಲ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾಯುವ ಫ್ಯಾನ್ಸ್‌ ಸಂಖ್ಯೆಗೇನೂ ಕಡಿಮೆ ಇಲ್ಲ. ಸದ್ಯ ಯಶ್‌ ಸ್ಯಾಂಡಲ್‌ವುಡ್‌ನಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಬಲ್ಲ ಚಿತ್ರ ಎನಿಸಿಕೊಂಡಿರುವ ʼಟಾಕ್ಸಿಕ್‌ʼ (Toxic Movie)ನ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಗ್ಯಾಂಗ್‌ಸ್ಟರ್‌ ಡ್ರಾಮಕ್ಕೆ ಪ್ರತಿಭಾನ್ವಿತ ನಿರ್ದೇಶಕಿ, ಮಲಯಾಳಂ ಮೂಲದ ಗೀತು ಮೋಹನ್‌ದಾಸ್‌ (Geethu Mohandas) ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದ ಕುರಿತಾದ ಬಿಗ್‌ ಅಪ್‌ಡೇಟ್‌ ಈಗ ಹೊರ ಬಿದ್ದಿದೆ.

ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಜ. 8ರಂದು ಚಿತ್ರದ ಗ್ಲಿಂಪ್ಸ್‌ ರಿಲೀಸ್‌ ಆಗಿದೆ. ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಅದ್ಧೂರಿಯಾಗಿಯಾಗಿ ಕಟ್ಟಿಕೊಡಲಾಗುತ್ತಿದೆ. ಡ್ರಗ್ಸ್‌ ಮಾಫಿಯಾದ ಸುತ್ತ ಸುತ್ತುವ ʼಟಾಕ್ಸಿಕ್‌ʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲ ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ತಯಾರಾಗುತ್ತಿದೆ.



ಪಿಂಕಿವಿಲ್ಲಾ ವರದಿಯ ಪ್ರಕಾರ ʼಟಾಕ್ಸಿಕ್‌ʼ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಬಳಿಕ ಬೇರೆ ಬೇರೆ ಭಾಷೆಗಳಿಗೆ ಡಬ್‌ ಮಾಡಲಾಗುತ್ತದೆ. ಭಾರತೀಯ ಭಾಷೆಗಳಲ್ಲದೆ ವಿವಿಧ ಅಂತಾರಾಷ್ಟ್ರೀಯ ಭಾಷೆಗಳಿಗೂ ಇದು ಡಬ್‌ ಆಗಲಿದೆ. ಇದೇ ಕಾರಣಕ್ಕೆ ಜಾಗತಿಕ ಪ್ರೇಕ್ಷಕರನ್ನು ಗಮದಲ್ಲಿಟ್ಟುಕೊಂಡು ಚಿತ್ರ ನಿರ್ಮಿಸಲಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೂಟಿಂಗ್‌ ನಡೆಯುತ್ತಿರುವ ಕಾರಣ ನಿರ್ಮಾಣ ಖರ್ಚು ಶೇ. 40ರಷ್ಟು ಹೆಚ್ಚಾಗಿದೆ. ಅದಾಗ್ಯೂ ಚಿತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಿನಿತಂಡ ಶ್ರಮಿಸುತ್ತಿದೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ತಂತ್ರಜ್ಞರು ಮತ್ತು ಕಲಾವಿದರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್‌ನ ʼಐರನ್ ಮ್ಯಾನ್ʼ, ʼಫಾಸ್ಟ್ ಆ್ಯಂಡ್‌ ಫ್ಯೂರಿಯಸ್ʼ ಸಿನಿಮಾಗಳ ಮೂಲಕ ಜನಪ್ರಿಯರಾದ ಜೆಜೆ ಪೆರ‍್ರಿ ಮತ್ತು ಜಾನ್ ವಿಕ್ ಫ್ರ್ಯಾಂಚೈಸ್ ಈಗಾಗಲೇ ಚಿತ್ರತಂಡವನ್ನು ಸೇರಿದ್ದು, ಆ್ಯಕ್ಷನ್‌ ದೃಶ್ಯಗಳನ್ನು ಸಂಯೋಜಿಸಲಿದ್ದಾರೆ.

ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಆರಂಭವಾದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಬೆಂಗಳೂರು, ಗೋವಾ, ಮುಂಬೈಯಲ್ಲಿ ಶೂಟಿಂಗ್‌ ನಡೆಸಿದ ಚಿತ್ರತಂಡ ಮತ್ತೆ ಬೆಂಗಳೂರಿಗೆ ಮರಳಿದ್ದು, ನಾಲ್ಕನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಈ ವರ್ಷಾಂತ್ಯದಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Actor Yash: ಯಶ್‌ಗೆ ರಿಲೀಫ್‌, ಟಾಕ್ಸಿಕ್‌ ಸಿನಿಮಾ ತಂಡದ ಮೇಲಿನ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಗಮನ ಸೆಳೆದ ಗ್ಲಿಂಪ್ಸ್‌

ʼಟಾಕ್ಸಿಕ್‌ʼ ಗ್ಲಿಂಪ್ಸ್‌ ಈಗಾಗಲೇ 20 ಕೋಟಿಗೂ ಹೆಚ್ಚು ವ್ಯೂಸ್‌ ಕಂಡು ಯುಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. 59 ಸೆಕೆಂಡ್‌ನ ಗ್ಲಿಂಪ್ಸ್‌ ಡ್ರಗ್ಸ್ ಮಾಫಿಯಾ ಕುರಿತ ಗ್ಲೋಬಲ್ ಸಿನಿಮಾ ಇದು ಎನ್ನುವ ಸೂಚನೆ ನೀಡಿದೆ. ಸ್ಟೈಲಿಶ್ ವಾಕ್, ಹಾಟ್ ಮ್ಯಾನರಿಸಮ್‌ ಲುಕ್‌ನಲ್ಲಿ ಯಶ್‌ ಗಮನ ಸೆಳೆದಿದ್ದಾರೆ. ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುವುದು ಕಂಡು ಬಂದಿದೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ. ಈ ಗ್ಲಿಂಪ್ಸ್‌ ಸಿಕ್ಕಾಪಟ್ಟೆ ಹೈಪ್‌ ಸೃಷ್ಟಿಸಿದೆ.