ಬೆಂಗಳೂರು: ಕಳೆದ ತಿಂಗಳು ಭರ್ಜರಿ ಪ್ರಚಾರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡಿದ್ದ 'ಕೊತ್ತಲವಾಡಿ' ಚಿತ್ರ (Kothalavadi Movie) ಇದೀಗ ವಿವಾದದ ಮೂಲಕ ಸುದ್ದಿಯಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಚೊಚ್ಚಲ ನಿರ್ಮಾಣದ ಈ ಚಿತ್ರಕ್ಕೆ ಶ್ರೀರಾಜ್ (Sriraj) ಆ್ಯಕ್ಷನ್ ಕಟ್ ಹೇಳಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ಎಡವಿದ ಈ ಚಿತ್ರ ಇದೀಗ ಸಂಭಾವನೆ ವಿಚಾರಕ್ಕೆ ಚರ್ಚೆಯಲ್ಲಿದೆ. ಸಹ ಕಲಾವಿದರಿಬ್ಬರಿಗೆ ಸಂಭಾವನೆಯನ್ನೇ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ನಿರ್ದೇಶಕ ಶ್ರೀರಾಜ್ ಸ್ಪಷ್ಟನೆ ನೀಡಿದ್ದಾರೆ. ವಿಶ್ವವಾಣಿಯೊಂದಿಗೆ (Vishwavani) ಮಾತನಾಡಿದ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಪೃಥ್ವಿ ಅಂಬಾರ್-ಕಾವ್ಯಾ ಶೈವ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಹೇಶ್ ಗುರು ಮತ್ತು ಸ್ವರ್ಣ ತಮಗೆ ಸಂಭಾವನೆಯೇ ಸಿಕ್ಕಿಲ್ಲ ಎಂದಿದ್ದಾರೆ. 3 ತಿಂಗಳು ಚಿತ್ರಕ್ಕಾಗಿ ದುಡಿದಿದ್ದು, ಇನ್ನೂ ಹಣ ತಲುಪಿಲ್ಲ ಎಂದು ದೂರಿದ್ದಾರೆ. ಈ ಆರೋಪದ ಬಗ್ಗೆ ಶ್ರೀರಾಜ್ ಇದೀಗ ಮಾತನಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Kothalavadi Movie: 'ಕೊತ್ತಲವಾಡಿ' ಸಹ ನಟನಿಗೆ ಮಾತ್ರವಲ್ಲ ನಟಿಗೂ ಸಂಭಾವನೆ ಕೊಟ್ಟಿಲ್ವ ಯಶ್ ಅಮ್ಮ? ಏನಿದು ವಿವಾದ?
ಸ್ಪಷ್ಟನೆಯಲ್ಲಿ ಏನಿದೆ?
ಎಲ್ಲರಿಗೂ ಸಂಭಾವನೆ ಕೊಟಿದ್ದೇವೆ ಎಂದೇ ಮಾತು ಆರಂಭಿಸಿದ ಶ್ರೀರಾಜ್ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ʼʼನಮ್ಮಲ್ಲಿ ಬಹುತೇಕ ಎಲ್ಲ ಹೊಸ ಕಲಾವಿದರಿಗೆ ಅವಕಾಶ ನೀಡಿದ್ದೇವೆ. ಅವರಿಗೆಲ್ಲ ಏನೇನು ಸಲ್ಲಬೇಕೋ ಅದೆಲ್ಲವನ್ನೂ ಕೊಟ್ಟಿದ್ದೇವೆ. ಆರೋಪ ಮಾಡುವವರು ಬಿಗ್ ಪ್ರೊಡಕ್ಷನ್ ಹೌಸ್ ಆದ ಕಾರಣ ತಮಗೆ ಇಷ್ಟು ಹಣ ಬರಬೇಕು ಎಂದು ಈಗ ತಗಾದೆ ಎತ್ತುತ್ತಿದ್ದಾರೆ. ಹೆಚ್ಚುವರಿ ಸಂಭಾವನೆಗಾಗಿ ಪಟ್ಟು ಹಿಡಿದಿದ್ದಾರೆ. ಮೊದಲು ಒಪ್ಪಂದ ಮಾಡಿಕೊಂಡಷ್ಟು ಹಣ ಎಲ್ಲರಿಗೂ ಸಂದಾಯವಾಗಿದೆʼʼ ಎಂದಿದ್ದಾರೆ.
ʼʼಎಲ್ಲರಿಗೂ ಹಣ ಕೊಟ್ಟಿರುವುದಕ್ಕೆ ನಮ್ಮ ಬಳಿ ಸೂಕ್ತ ದಾಖಲೆ ಇದೆ. ಕಾನೂನು ಮೂಲಕ ಈ ಬಗ್ಗೆ ಹೋರಾಟ ನಡೆಸುತ್ತೇವೆ. ಬಿಗ್ ಪ್ರೊಡಕ್ಷನ್ ಹೌಸ್ ಆಗಿರುವುದಕ್ಕೆ ಮತ್ತಷ್ಟು ಹಣ ವಸೂಲಿ ಮಾಡಬಹುದೆಂದು ಸುಳ್ಳು ಆರೋಪ ಹೊರಿಸುತ್ತಿದ್ದಾರೆʼʼ ಎಂದು ಪುನರುಚ್ಚರಿಸಿದ್ದಾರೆ.
ʼʼಈ ವಿಚಾರವನ್ನು ಪುಷ್ಪ ಅವರ ಗಮನಕ್ಕೆ ತಂದಿದ್ದು ಅವರು ಇಲ್ಲೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಮ್ಯಾನೇಜರ್ ಮೊದಲು ಏನು ಮಾತನಾಡಿರುತ್ತಾರೋ ಅಷ್ಟು ಸಂಭಾವನೆ ತಲುಪಿಸಿದ್ದಾರೆ. ಹೆಚ್ಚುವರಿ ಹಣ ಬೇಕು ಎಂದರೆ ನಾವೆಲ್ಲಿಂದು ತರೋದು? ಅವರ ಜತೆ ಮಾತುಕತೆ ನಡೆಸುವ ಅಗತ್ಯವೂ ನಮಗಿಲ್ಲʼʼ ಎಂದು ಶ್ರೀರಾಜ್ ಹೇಳಿದ್ದಾರೆ.
ಏನಿದು ವಿವಾದ?
ʼಕೊತ್ತಲವಾಡಿʼ ಚಿತ್ರದಲ್ಲಿ ನಟಿಸಿದ್ದ ಮಹೇಶ್ ಗುರು ಮೊದಲು ವಿಡಿಯೊ ಮಾಡಿ ನಿರ್ದೇಶಕ ಶ್ರೀರಾಜ್ ತಮಗೆ ಸಂಭಾವನೆಯನ್ನೇ ಕೊಟ್ಟಿಲ್ಲ ಎಂದು ದೂರಿದ್ದರು. ಇದರ ಬೆನ್ನಲ್ಲೇ ಸರ್ಣ ಅವರ ತಾಯಿ ಕೂಡ ತಮ್ಮ ಮಗಳು 3 ತಿಂಗಳು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರೂ ಹಣವೇ ಸಂದಾಯವಾಗಿಲ್ಲ ಎಂದು ಆರೋಪಿಸಿದ್ದರು. ಈ ವಿಚಾರ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿತ್ತು.