Kothalavadi Movie: 'ಕೊತ್ತಲವಾಡಿ' ಸಹ ನಟನಿಗೆ ಮಾತ್ರವಲ್ಲ ನಟಿಗೂ ಸಂಭಾವನೆ ಕೊಟ್ಟಿಲ್ವ ಯಶ್ ಅಮ್ಮ? ಏನಿದು ವಿವಾದ?
ಪೃಥ್ವಿ ಅಂಬಾರ್ ನಾಯಕನಾಗಿ ನಟಿಸಿದ, ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ʼಕೊತ್ತಲವಾಡಿʼ ರಿಲೀಸ್ ಆದ ತಿಂಗಳ ಬಳಿಕ ವಿವಾದ ಹುಟ್ಟು ಹಾಕಿದೆ. ತಮಗೆ ಸಂಭಾವನೆಯನ್ನೇ ನೀಡಿಲ್ಲ ಎಂದು ಸಹ ಕಲಾವಿದರು ದೂರಿದ್ದಾರೆ.

'ಕೊತ್ತಲವಾಡಿ' ಚಿತ್ರದ ದೃಶ್ಯ -

ಬೆಂಗಳೂರು: ಕಳೆದ ತಿಂಗಳು ತೆರೆಕಂಡ, ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಚೊಚ್ಚಲ ನಿರ್ಮಾಣದ ʼಕೊತ್ತಲವಾಡಿʼ ಕನ್ನಡ ಚಿತ್ರದ (Kothalavadi Movie) ಬಗ್ಗೆ ವಿವಾದ ಭುಗಿಲೆದ್ದಿದೆ. ಭಾರಿ ನಿರೀಕ್ಷೆಯೊಂದಗೆ ತೆರೆಕಂಡ ಪೃಥ್ವಿ ಅಂಬಾರ್ ನಟನೆಯ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿತ್ತು. ಇದೀಗ ಒಟಿಟಿಗೂ ಕಾಲಿಟ್ಟಿದೆ. ಈ ಮಧ್ಯೆ ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಸಂಭಾವನೆಯನ್ನೇ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಪೋಷಕ ಪಾತ್ರಗಳಲ್ಲಿ ನಟಿಸಿರುವ ಮಹೇಶ್ ಗುರು ಮತ್ತು ಸ್ವರ್ಣ ಈ ಬಗ್ಗೆ ದೂರಿದ್ದಾರೆ.
ʼಕೊತ್ತಲವಾಡಿʼ ಸಿನಿಮಾದಲ್ಲಿ ನಟಿಸಿದ್ದಕ್ಕೆ ತಮಗೆ ಸಂಭಾವನೆಯನ್ನೇ ಕೊಟ್ಟಿಲ್ಲ ಎಂದು ಹೇಳಿ ಮಹೇಶ್ ಗುರು ವಿಡಿಯೊ ಮಾಡಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಹ ನಟಿ ಸ್ವರ್ಣ ಅವರ ತಾಯಿ ಕೂಡ ಈ ಬಗ್ಗೆ ದೂರಿದ್ದಾರೆ.
ಮಗಳ ಸಂಭಾವನೆಗಾಗಿ ನಿರ್ದೇಶಕ ಶ್ರೀರಾಜ್ ಬಳಿ ನಟಿ ಸ್ವರ್ಣ ಅವರ ತಾಯಿ ಗೋಳಾಡಿದ್ದಾರೆ. ʼʼಕೆಲಸ ಮಾಡಿದಕ್ಕೆ ನಿಮಗೆ ಪೇಮೆಂಟ್ ಕೋಡೊದಕ್ಕೆ ಆಗಲ್ವಾ? ನನ್ನಮಗಳು ನಿಮ್ಮನ್ನ ನಂಬಿಕೊಂಡು 3 ತಿಂಗಳು ಕೆಲಸ ಮಾಡಿದ್ದಾಳೆ. ನನಗೆ ಗಂಡ ಇಲ್ಲ. ನಾನೇ ಅವಳನ್ನು ನೋಡಿಕೊಳ್ಳಬೇಕು. ನಾನು ಅವಳನ್ನು ನಂಬಿಕೊಂಡು ಇದ್ದೀನಿʼʼ ಎಂದು ನೋವು ತೋಡಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ʼಕಾಂತಾರ ಚಾಪ್ಟರ್ 1ʼ ಬಿಡುಗಡೆ ಹೊತ್ತಲ್ಲೇ ರಿಷಬ್ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ಪ್ರಶಾಂತ್ ನೀಲ್-ಜೂ. ಎನ್‌ಟಿಆರ್ ಚಿತ್ರದಲ್ಲಿ ಡಿವೈನ್ ಸ್ಟಾರ್?
ʼʼಬಡವರ ಮಕ್ಕಳ ಹಣ ಕೊಡದೆ ಉದ್ದಾರ ಆಗ್ತೀರಾ? ನನ್ನ ಮಗಳು ಬೆಳಗ್ಗೆಯಿಂದ ಸ್ನಾನ ಮಾಡಿ ಏನು ತಿನ್ನದೆ ಮಲಗಿ ಅಳುತ್ತಿದ್ದಾಳೆʼʼ ಎಂದು ನಿರ್ದೇಶಕ ಶ್ರೀರಾಜ್ ಜತೆ ಜತೆ ಹೇಳಿಕೊಂಡಿದ್ದಾರೆ. ಅವರ ಜತೆ ನಿರ್ದೇಶಕ ಶ್ರೀರಾಜ್ ಏರು ಧ್ವನಿಯಲ್ಲೇ ಮಾತನಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.
ಮಹೇಶ್ ಗುರು ವಿಡಿಯೊದಲ್ಲಿ ಹೇಳಿದ್ದೇನು?
‘ʼನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿ ಕಲಾವಿದ. ಸಿನಿಮಾ, ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ರಿಲೀಸ್ ಆಯಿತು. ಯಶ್ ತಾಯಿ ಪುಷ್ಪ ಅವರು ಇದನ್ನು ನಿರ್ಮಾಣ ಮಾಡಿದ್ದರು. ಸಹ ನಟನಾಗಿ ನಾನು ಸಿನಿಮಾದಲ್ಲಿ ಇದ್ದೆ. 3 ತಿಂಗಳಿಗೂ ಅಧಿಕ ಕಾಲ ಸಿನಿಮಾ ಶೂಟ್ನಲ್ಲಿ ಭಾಗಿ ಆಗಿದ್ದೆ'’ ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.
ಮುಂದುವರಿದು, ‘ʼನಾನು ಆಯ್ಕೆ ಆಗಿದ್ದು ನಿರ್ದೇಶಕ ಶ್ರೀರಾಜ್ ಕಡೆಯಿಂದ. ನಿರ್ದೇಶಕರು ಪ್ಯಾಕೇಜ್ ಮಾತನಾಡಿದರು. ಸಿನಿಮಾ ಆರಂಭಕ್ಕೂ ಮೊದಲು ಅಡ್ವಾನ್ಸ್ ಕೊಡಸ್ತೀನಿ ಅಂತ ಹೇಳಿದ್ದರು. ಆದರೆ ಕೊಡಿಸಿಲ್ಲ. ಸಿನಿಮಾ ಮುಗಿದರೂ ಹಣ ಬಂದಿಲ್ಲ ಅಂತ ಹೇಳುತ್ತಲೇ ಇದ್ದರು. ಡಬ್ಬಿಂಗ್ ಮುಗಿದರೂ ಹಣ ಕೊಡಲಿಲ್ಲʼ’ ಎಂದಿದ್ದಾರೆ.
‘ʼಈಗ ಸಿನಿಮಾ ಒಟಿಟಿಗೆ ಬಂದಿದೆ. ಆದರೂ ನಮಗೆ ಪೇಮೆಂಟ್ ಆಗಿಲ್ಲ. ನಿರ್ಮಾಪಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಡಿಯೊ ಮಾಡಿದ್ದೇನೆ. ಇದು ಪುಷ್ಪಾ ಅವರಿಗೂ ಗೊತ್ತಾಗಲಿ’ʼ ಎಂದು ಮಹೇಶ್ ಗುರು ಹೇಳಿದ್ದಾರೆ. ಈ ವಿಡಿಯೊ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸ್ವರ್ಣ ಅವರ ತಾಯಿಯ ಆರೋಪ ಕೇಳಿಬಂದಿದೆ.