ರಾಂಚಿ: ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ (Anti-Naxal operation) ಜಾರ್ಖಂಡ್‌ನಲ್ಲಿ ಬುಧವಾರ (ಮಾ. 5) ಬಾಂಬ್ ಸ್ಫೋಟಗೊಂಡು ಮೂವರು ಸಿಆರ್‌ಪಿಎಫ್ (Central Reserve Police Force) ಜವಾನರು ಗಾಯಗೊಂಡಿದ್ದಾರೆ. ಚೈಬಾಸಾ (Chaibasa)ದಲ್ಲಿ ಐಇಡಿ (Improvised Explosive Device) ಸ್ಫೋಟಗೊಂಡು ಸಹಾಯಕ ಕಮಾಂಡೆಂಟ್ ಸೇರಿದಂತೆ ಮೂವರು ಸಿಆರ್‌ಪಿಎಫ್ ಜವಾನರಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ (IED Blast). "ಚೈಬಾಸಾದಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಮೂವರು ಸಿಆರ್‌ಪಿಎಫ್ ಜವಾನರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಂಚಿಗೆ ವಿಮಾನದಲ್ಲಿ ಕರೆದೊಯ್ಯಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ" ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.
ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಕಾಲಿಭಾಗ್ ಗ್ರಾಮದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. ಗಾಯಗೊಂಡ ಯೋಧರನ್ನು ಸಿಆರ್‌ಪಿಎಫ್ 197 ಬೆಟಾಲಿಯನ್ ಸೇರಿದ ಎಎಸ್ಐ ಜಿಜೆ ಸಾಯಿ, ವಿ.ಟಿ.ರಾವ್ ಮತ್ತು ಕೇಶವ್ ಕುಮಾರ್ ಎಂದು ಗುರುತಿಸಲಾಗಿದೆ.
ಆಸ್ಪತ್ರೆಗೆ ದಾಖಲು
ಗಾಯಗೊಂದ ಯೋಧರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಗೆ ಕರೆದೊಯ್ಯಲಾಯಿತು. ಗಾಯಗೊಂಡ ಸಿಬ್ಬಂದಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಫೋಟದ ನಂತರ ದಾಳಿಕೋರರನ್ನು ಮಟ್ಟ ಹಾಕಲು ಭದ್ರತಾ ಪಡೆಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಈಗಲೂ ಮುಂದುವರಿದಿದೆ. ಜಾರ್ಖಂಡ್ ಪೊಲೀಸರು, 203 ಬಿಎನ್, 209 ಬಿಎನ್, 26 ಬಿಎನ್, 60 ಬಿಎನ್, 134 ಬಿಎನ್, 174 ಬಿಎನ್, 193 ಬಿಎನ್ ಮತ್ತು 197 ಬಿಎನ್ ಸೇರಿದಂತೆ ಸಿಆರ್‌ಪಿಎಫ್‌ನ ವಿವಿಧ ಬೆಟಾಲಿಯನ್‌ಗಳನ್ನು ಒಳಗೊಂಡ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿವೆ.
ಈ ಸುದ್ದಿಯನ್ನೂ ಓದಿ: IED Blast: ಜಮ್ಮು-ಕಾಶ್ಮೀರದಲ್ಲಿ ಶಂಕಿತ ಐಇಡಿ ಸ್ಫೋಟ; ಇಬ್ಬರು ಸೈನಿಕರು ಹುತಾತ್ಮ
ಹೇಗಿತ್ತು ಕಾರ್ಯಾಚರಣೆ?
ಭದ್ರತಾ ಪಡೆಗಳು ದಟ್ಟ ಕಾಡುಗಳಲ್ಲಿ ಸಂಚರಿಸಿ, ನಕ್ಸಲ್ ಅಡಗುತಾಣಗಳನ್ನು ಧ್ವಂಸಗೊಳಿಸಿ, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಮೂಲಗಳ ಪ್ರಕಾರ ಅನೇಕ ಶಂಕಿತ ಅಡಗುತಾಣಗಳನ್ನು ಗುರುತಿಸಲಾಗಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆ ಮಾ. 4ರಂದು ಆರಂಭವಾಗಿದ್ದು, ಇದೀಗ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಕಾರ್ಯಾಚರಣೆಗಾಗಿ ಡ್ರೋನ್, ಶ್ವಾನ ದಳವನ್ನು ಬಳಸಲಾಗುತ್ತಿದೆ.
ಭದ್ರತಾ ಪಡೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ. ಹಲವು ವರ್ಷಗಳಿಂದ ಎಡಪಂಥೀಯ ಉಗ್ರವಾದದ ಭದ್ರಕೋಟೆಯಾಗಿರುವ ಟೋರಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಈ ಹಿಂದೆಯೂ ಹಲವು ಘರ್ಷಣೆಗಳು ನಡೆದಿವೆ. ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡರೆ ವರದಿ ಮಾಡುವಂತೆ ಅಧಿಕಾರಿಗಳು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಜನವರಿಯಲ್ಲಿ ಪಶ್ಚಿಮ ಸಿಂಗ್ಭುಮ್ ಜಿಲ್ಲೆಯ ಚೈಬಾಸಾದಲ್ಲಿಯೂ ಎನ್‌ಕೌಂಟರ್ ನಡೆದಿದೆ. ಜಾರ್ಖಂಡ್ ಪೊಲೀಸರು ಮತ್ತು 209 ಕೋಬ್ರಾ ಬೆಟಾಲಿಯನ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರಿಗೆ ಸೇರಿದ 2 ಐಎನ್ಎಸ್ಎಎಸ್ ರೈಫಲ್ ವಶಪಡಿಸಿಕೊಳ್ಳಲಾಗಿತ್ತು. ಜಾರ್ಖಂಡ್‌ನಲ್ಲಿ ನಕ್ಸಲ್ ಚಟುವಟಿಕೆ ಮಟ್ಟ ಹಾಕಲು ಸರ್ಕಾರ ಪಣ ತೊಟ್ಟಿದೆ.