ರಾಯ್ಪುರ್: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ (Naxal Encounter) ಕನಿಷ್ಠ ಆರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿತ್ತು. ನಡೆಯುತ್ತಿರುವ ಕಾರ್ಯಾಚರಣೆಯ ಸಮಯದಲ್ಲಿ, ಪಡೆಗಳು AK-47 ಮತ್ತು SLR ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಭದ್ರತಾ ಮೂಲಗಳು ದೃಢಪಡಿಸಿವೆ.
ಎಡಪಂಥೀಯ ಉಗ್ರವಾದದ ಭದ್ರಕೋಟೆ ಎಂದು ಕರೆಯಲ್ಪಡುವ ಅಬುಜ್ಮದ್ ಕೋರ್ ವಲಯದಲ್ಲಿ ಮಾವೋವಾದಿಗಳು ಇರುವಿಕೆಯ ಮಾಹಿತಿ ಮೇರೆಗೆ ಕಾರ್ಯಚರಣೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 6 ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿದೆ. ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ನಕ್ಸಲರನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಭದ್ರತಾ ಪಡೆಗಳು ಬಹು ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲವು ದಿನಗಳ ಹಿಂದೆ 2026ರ ಮಾರ್ಚ್ 31ರೊಳಗೆ ಭಾರತ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು. ನಕ್ಸಲಿಸಂ ಅನ್ನು ಕೊನೆಗೊಳಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಮೋದಿ ಕೂಡ ಪುನರುಚ್ಚರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Maoists Killed: 1ಕೋಟಿ ರೂ. ಇನಾಮು ಘೋಷಣೆಯಾಗಿದ್ದ ನಕ್ಸಲ್ ಮುಖಂಡನ ಹತ್ಯೆ - ಭರ್ಜರಿ ಕಾರ್ಯಾಚರಣೆಯಲ್ಲಿ 8 ನಕ್ಸಲರ ಎನ್‌ಕೌಂಟರ್
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಭದ್ರತಾ ಪಡೆಗಳು ಉನ್ನತ ನಕ್ಸಲ್ ಕಮಾಂಡರ್ ಭಾಸ್ಕರ್ ಅವರನ್ನು ಗುಂಡಿಕ್ಕಿ ಕೊಂದಿದೆ. ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಭಾಸ್ಕರ್, ಮಾವೋವಾದಿಗಳ ಟಿಎಸ್‌ಸಿಯ ಮಂಚೇರಿಯಲ್-ಕೊಮರಾಂಭೀಮ್ (ಎಂಕೆಬಿ) ವಿಭಾಗದ ಕಾರ್ಯದರ್ಶಿಯಾಗಿದ್ದ. ಆತನ ಮೇಲೆ ಛತ್ತೀಸ್‌ಗಢದಲ್ಲಿ 25 ಲಕ್ಷ ಮತ್ತು ತೆಲಂಗಾಣದಲ್ಲಿ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಗುರುವಾರ ಮುಂಜಾನೆ ಅದೇ ಪ್ರದೇಶದಲ್ಲಿ ನಡೆದ ಇನ್ನೊಂದು ಎನ್‌ಕೌಂಟರ್‌ನಲ್ಲಿ ಹಿರಿಯ ಮಾವೋವಾದಿ ನಾಯಕ ಸುಮಾರು 67 ವರ್ಷದ ನರಸಿಂಹ ಚಲಂ ಅಲಿಯಾಸ್ ಸುಧಾಕರ್ ಸಾವನ್ನಪ್ಪಿದ್ದಾನೆ. ಈತ ಆಂಧ್ರಪ್ರದೇಶದವನಾಗಿದ್ದು ಛತ್ತೀಸ್‌ಗಢದಲ್ಲಿ ಹಲವಾರು ನಕ್ಸಲ್ ದಾಳಿಗಳಿಗೆ ಪ್ರಮುಖ ಕಾರಣವಾಗಿದ್ದ.