ಜೈಪುರ: ರಾಜಸ್ಥಾನದಲ್ಲಿ (Rajasthan) ಮನೆಯಿಂದ ಕಾಣೆಯಾದ ಎಂಟು ವರ್ಷದ ಅನಾಸ್ ಶೆಹಜಾದ್ ಮತ್ತು ಐದು ವರ್ಷದ ಅಹ್ಸಾನ್ ಶೆಹಜಾದ್ ಎಂಬ ಇಬ್ಬರು ಸಹೋದರರ ಶವಗಳು (Corpses) ಮನೆಯಿಂದ ಕೇವಲ 20-25 ಅಡಿ ದೂರದಲ್ಲಿ ನಿಂತಿದ್ದ ಕಾರಿನಲ್ಲಿ ಪತ್ತೆಯಾಗಿವೆ. ಜೈಪುರದ (Jaipur) ಗಾಲ್ಟಾ ಗೇಟ್ ಪ್ರದೇಶದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆಘಾತ ಮತ್ತು ಗೊಂದಲ ಉಂಟು ಮಾಡಿದೆ.
ರಾಜಸ್ಥಾನದ ದೌಸಾ ಜಿಲ್ಲೆಯ ಮಹುವಾ ಮೂಲದ ಈ ಸಹೋದರರು, ತಮ್ಮ ಪೋಷಕರೊಂದಿಗೆ ಜೈಪುರದಲ್ಲಿ ವಾಸಿಸುತ್ತಿದ್ದರು. ಮಂಗಳವಾರ ಸಂಜೆ 4:30ರ ಸುಮಾರಿಗೆ ಮನೆಯ ಹೊರಗೆ ಆಟವಾಡುತ್ತಿದ್ದಾಗ ಕಾಣೆಯಾಗಿದ್ದರು. ರಾತ್ರಿಯಾದರೂ ಮಕ್ಕಳು ಮನೆಗೆ ಮರಳದಿದ್ದಾಗ, ಕುಟುಂಬದವರು ಹುಡುಕಾಟ ಆರಂಭಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ರಾತ್ರಿ 11:30ರ ಸುಮಾರಿಗೆ, ಮಕ್ಕಳ ಶವಗಳು ನಿಂತಿದ್ದ ಕಾರಿನೊಳಗೆ ಕಂಡುಬಂದಿವೆ. ತಕ್ಷಣವೇ ಅವರನ್ನು ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೆ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಈ ಸುದ್ದಿಯನ್ನು ಓದಿ: Viral Video: ರೈಲ್ವೇ ಬಾತ್‌ರೂಂನಲ್ಲಿ ಯುವಕ- ಯುವತಿಯ ರೊಮ್ಯಾನ್ಸ್! ಭಾರೀ ವೈರಲಾಗ್ತಿದೆ ಈ ವಿಡಿಯೊ
ತನಿಖೆಯ ವಿವರ
ಜೈಪುರ (ಉತ್ತರ) ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕರಣ್ ಶರ್ಮಾ ಈ ಬಗ್ಗೆ ಮಾತನಾಡಿ, “ಪ್ರಾಥಮಿಕವಾಗಿ, ಲಾಕ್ ಆಗಿದ್ದ ಕಾರಿನೊಳಗೆ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪಿರಬಹುದು. ಆದರೆ ಅಹ್ಸಾನ್‌ನ ಮೂಗಿನ ಸುತ್ತಲೂ ರಕ್ತದ ಕಲೆಗಳು ಕಂಡುಬಂದಿವೆ. ಮಕ್ಕಳು ಕಾರಿನೊಳಗೆ ಹೇಗೆ ಸಿಲುಕಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಕಾರಿನ ಮಾಲೀಕ, ಅವರ ಮನೆಯ ಪಕ್ಕದವರೇ ಆಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆ ಪ್ರಕರಣ ದಾಖಲಾಗಿದೆ. “ಯಾರನ್ನೂ ಇನ್ನೂ ಬಂಧಿಸಿಲ್ಲ. ಆದರೆ ಮಕ್ಕಳು ಕಾರಿನೊಳಗೆ ಹೇಗೆ ಬಂದರು ಮತ್ತು ಇದು ಕೊಲೆಯೇ ಎಂಬುದನ್ನು ತನಿಖೆಯ ಮೂಲಕ ಗುರುತಿಸಲಾಗುವುದು” ಎಂದು ಡಿಸಿಪಿ ಶರ್ಮಾ ಹೇಳಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕ ರಫೀಕ್ ಖಾನ್ ಕುಟುಂಬದವರೊಂದಿಗೆ ಮಾತನಾಡಿ, ಕಟ್ಟುನಿಟ್ಟಿನ ಕ್ರಮಕ್ಕೆ ಭರವಸೆ ನೀಡಿದ್ದಾರೆ.